'ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಗಢಾಫಿ ಸ್ಟೇಡಿಯಂ': ಪಾಕ್‌ ಕಾಲೆಳೆದ ನೆಟ್ಟಿಗರು!

Published : Mar 06, 2025, 05:12 PM ISTUpdated : Mar 06, 2025, 05:38 PM IST
'ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಗಢಾಫಿ ಸ್ಟೇಡಿಯಂ': ಪಾಕ್‌ ಕಾಲೆಳೆದ ನೆಟ್ಟಿಗರು!

ಸಾರಾಂಶ

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ದುಬೈನಲ್ಲಿ ನಡೆಯಲಿದೆ. ಭಾರತ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಆತಿಥ್ಯ ವಹಿಸಿದ್ದ ಪಾಕಿಸ್ತಾನ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ಭಾರತ ಫೈನಲ್ ತಲುಪದಿದ್ದರೆ, ಫೈನಲ್ ಲಾಹೋರ್‌ನಲ್ಲಿ ನಡೆಯಬೇಕಿತ್ತು. ಮಾರ್ಚ್ 9 ರಂದು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಬೆಂಗಳೂರು: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. ಇದರ ಬೆನ್ನಲ್ಲೇ ಟೂರ್ನಿಯ ಆತಿಥ್ಯದ ಹಕ್ಕು ಪಡೆದುಕೊಂಡಿದ್ದ ಪಾಕಿಸ್ತಾನದಿಂದ ಫೈನಲ್ ಪಂದ್ಯವು ದುಬೈಗೆ ಎತ್ತಂಗಡಿಯಾಗಿದೆ. ಇದರ ಬೆನ್ನಲ್ಲೇ ನೆಟ್ಟಿಗರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದಂತೆ ಟ್ರೋಲ್ ಮಾಡಲಾರಂಭಿಸಿದ್ದಾರೆ.

ಹೌದು, 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದ್ದರೂ, ನೆರೆಯ ದೇಶಕ್ಕೆ ಪ್ರವಾಸ ಮಾಡಲು ಭಾರತ ತಂಡವು ಹಿಂದೇಟು ಹಾಕಿತ್ತು. ಹೀಗಾಗಿ ಈ ಐಸಿಸಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜನೆಗೊಂಡಿದ್ದು, ಭಾರತ ತನ್ನ ಪಾಲಿನ ಪಂದ್ಯಗಳನ್ನು ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಡುತ್ತಿದೆ. ಒಂದು ವೇಳೆ ಭಾರತ ತಂಡವು ಫೈನಲ್‌ಗೇರದೇ ಇದ್ದಿದ್ದರೇ, ಚಾಂಪಿಯನ್ಸ್‌ ಟ್ರೋಫಿಯ ಫೈನಲ್ ಪಂದ್ಯವು ಲಾಹೋರ್‌ನ ಗಢಾಫಿ ಸ್ಟೇಡಿಯಂನಲ್ಲಿ ಆಯೋಜಿಸಲು ಈ ಮೊದಲೇ ತೀರ್ಮಾನಿಸಲಾಗಿತ್ತು. ಆದರೆ ದುರಾದೃಷ್ಟವೆಂಬಂತೆ ಬಿಸಿಸಿಐ ಹಾಗೂ ಐಸಿಸಿ ಜತೆ ಹಟಕ್ಕೆ ಬಿದ್ದಂತೆ ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ಹಕ್ಕು ಪಡೆದುಕೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ ಗಢಾಫಿ ಸ್ಟೇಡಿಯಂನಲ್ಲಿ ಸರಿಯಾಗಿ ಟೂರ್ನಿಯನ್ನೂ ಆಯೋಜಿಸಲು ಸಾಧ್ಯವಾಗದೇ ಕೈ ಕೈ ಹಿಸುಕಿಕೊಳ್ಳುತ್ತಿದೆ. 

ಆಸ್ಟ್ರೇಲಿಯಾ ಎದುರಿನ ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಆಕರ್ಷಕ 84 ರನ್‌ಗಳ ನೆರವಿನಿಂದ ಸುಲಭ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು. ಇದರ ಜತೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸತತ ಮೂರನೇ ಬಾರಿಗೆ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಭಾರತ ತಂಡವು ಮಾರ್ಚ್ 09ರಂದು ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ನ್ಯೂಜಿಲೆಂಡ್ ತಂಡದ ಎದುರು ಕಾದಾಡಲಿದೆ.

ಇನ್ನು ಟೂರ್ನಿಯ ಹಾಲಿ ಚಾಂಪಿಯನ್ ಆಗಿದ್ದ ಪಾಕಿಸ್ತಾನ ತಂಡವು ತವರಿನಲ್ಲೇ ಟೂರ್ನಿಯನ್ನು ಆಯೋಜಿಸಿ ಮತ್ತೊಮ್ಮೆ ಕಪ್‌ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ತಂಡವು ಟೂರ್ನಿಯಲ್ಲಿ ಒಂದೂ ಗೆಲುವು ಕಾಣದೇ ಗ್ರೂಪ್ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿತ್ತು. ಇದರ ಬೆನ್ನಲ್ಲೇ ನೆಟ್ಟಿಗರೊಬ್ಬರು 'ಗಢಾಫಿ ಸ್ಟೇಡಿಯಂ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದಲೇ ಹೊರಬಿದ್ದಿದೆ' ಎಂದು ಟ್ರೋಲ್ ಮಾಡಿದ್ದಾರೆ.

ಇನ್ನು ಸುಮಿತ್ ಕಡೈ ಎನ್ನುವ ನೆಟ್ಟಿಗರೊಬ್ಬರು 'ಆತಿಥ್ಯ ವಹಿಸಿದ ಪಾಕಿಸ್ತಾನವನ್ನು ಭಾರತ ತಂಡವು ದುಬೈನಲ್ಲಿ ಟೂರ್ನಿಯಿಂದ ಹೊರದಬ್ಬಿತು. ತಮ್ಮ ಅತ್ಯುತ್ತಮ ಸ್ಟೇಡಿಯಂನಲ್ಲೇ ಮೂರು ಪಂದ್ಯಗಳು ಮಳೆಯಿಂದ ರದ್ದಾದವು. ಒಂದು ಸೆಮಿಫೈನಲ್ ಪಾಕಿಸ್ತಾನದ ಆಚೆಗೆ ನಡೆಯಿತು. ಈಗ ಫೈನಲ್‌ ಕೂಡಾ ಪಾಕಿಸ್ತಾನದ ಆಚೆಗೆ ದುಬೈನಲ್ಲಿ ನಡೆಯುತ್ತಿದೆ. ಇದಕ್ಕಿಂತ ಅವಮಾನಕಾರಿ ಸಂಗತಿ ಮತ್ತೊಂದು ಇಲ್ಲ. ಪಾಕಿಸ್ತಾನದ ಪಾಡು ಆತಿಥ್ಯ ವಹಿಸಿದ ಹೊರತಾಗಿಯೂ ಆತಿಥ್ಯ ಸಿಗಲಿಲ್ಲ ಎಂದು ಟ್ರೋಲ್ ಮಾಡಿದ್ದಾರೆ.

ಒಟ್ಟಿನಲ್ಲಿ ಮೂರು ದಶಕಗಳ ಬಳಿಕ(29 ವರ್ಷಗಳ ಬಳಿಕ) ಐಸಿಸಿಯ ಮಹತ್ವದ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿತ್ತು. ಆದರೆ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಪಾಕಿಸ್ತಾನ ತಂಡವು ವಿಫಲವಾಗುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದೆ.

9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ಗೆ ಅಖಾಡ ಸಿದ್ಧವಾಗಿದೆ. ಮಾ.9ರಂದು ದುಬೈನಲ್ಲಿ ನಡೆಯಲಿರುವ ಈ ಬಾರಿ ಟೂರ್ನಿಯ ಪ್ರಶಸ್ತಿ ಕದನದಲ್ಲಿ ಮಾಜಿ ಚಾಂಪಿಯನ್‌ಗಳಾದ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಸೆಣಸಾಡಲಿವೆ. ಭಾರತ ತಂಡ ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!