ತಂದೆ ಕೊಡುತ್ತಿದ್ದ 70 ರೂಪಾಯಿಯಲ್ಲೇ ₹70 ಕೋಟಿಯ ಸಾಮ್ರಾಜ್ಯ ಕಟ್ಟಿದ ಮಗನ ಕಥೆ..!

Published : May 31, 2026, 12:53 PM IST
Mohammed Siraj

ಸಾರಾಂಶ

ಹೈದರಾಬಾದ್‌ನ ಆಟೋ ಚಾಲಕರೊಬ್ಬರ ಮಗ, ಬಡತನದ ನಡುವೆಯೂ ಕ್ರಿಕೆಟ್ ಕನಸನ್ನು ಬೆನ್ನತ್ತಿದನು. ತಂದೆಯ ಬೆಂಬಲ ಮತ್ತು ತನ್ನ ಕಠಿಣ ಪರಿಶ್ರಮದಿಂದ, ಇಂದು ಆತ ಕೋಟ್ಯಂತರ ರೂಪಾಯಿಗಳ ಒಡೆಯನಾಗಿ, ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾನೆ. ಇದು ಮೊಹಮ್ಮದ್ ಸಿರಾಜ್ ಅವರ ಹೃದಯಸ್ಪರ್ಶಿ ಯಶೋಗಾಥೆ.

- ಸುದರ್ಶನ್, ಏಷ್ಯಾನೆಟ್ ಸುವರ್ಣನ್ಯೂಸ್

ಈ ಕಥೆ ಆರಂಭವಾಗುವುದು ಹೈದರಾಬಾದ್’ನ ಬಂಜಾರ ಹಿಲ್ಸ್’ನ ಪಕ್ಕದಲ್ಲೇ ಇದ್ದ ಆ ಸಣ್ಣದೊಂದು ಮನೆಯಿಂದ. ಅಲ್ಲೊಂದು ಕುಟುಂಬ. ಕುಟುಂಬದ ಯಜಮಾನ ಆಟೋ ಡ್ರೈವರ್. ಅವರಿಗೆ ಇಬ್ಬರು ಗಂಡು ಮಕ್ಕಳು. ಹೈದರಾಬಾದ್’ನಲ್ಲಿ ಆಟೋ ಓಡಿಸಿ ಮನೆ ಮಡದಿ ಮಕ್ಕಳನ್ನು ಸಾಕುತ್ತಿದ್ದರು ಆ ತಂದೆ.

ಮಕ್ಕಳಲ್ಲಿ ಸಣ್ಣವನಿಗೆ ಕ್ರಿಕೆಟ್ ಹುಚ್ಚು. ಸುತ್ತಮುತ್ತ ಎಲ್ಲೇ ಟೆನಿಸ್ ಬಾಲ್ ಕ್ರಿಕೆಟ್ ಇದ್ದರೂ ಓಡಿ ಬಿಡುತ್ತಿದ್ದ. ‘‘ಕ್ರಿಕೆಟ್ ಅನ್ನ ಕೊಡುವುದಿಲ್ಲ. ನೆಟ್ಟಗೆ ಓದಿ ಒಂದು ಕೆಲಸ ಹಿಡಿದು ನಾಲ್ಕು ಕಾಸು ಸಂಪಾದನೆ ಮಾಡಿ ಬದುಕು ಕಟ್ಟಿಕೋ’’. ಸಾಮಾನ್ಯವಾಗಿ ಕ್ರಿಕೆಟ್ ಆಡುವ ಬಡಕುಟುಂಬಗಳ ಮನೆಗಳಿಂದ ಕೇಳುವ ಮಾತಿದು.

ಸಿರಾಜ್ ಕನಸಿಗೆ ಬೆಂಗಾವಲಾಗಿ ನಿಂತ ತಂದೆ

ಆದರೆ ದಿನಕ್ಕೆ 500ರಿಂದ 800 ರೂಪಾಯಿ ಸಂಪಾದನೆ ಮಾಡುತ್ತಿದ್ದ ಆ ತಂದೆ ಮಾತ್ರ ಮಗನ ಕ್ರಿಕೆಟ್ ಕನಸಿಗೆ ಬೆಂಗಾವಲಾಗಿ ನಿಂತು ಬಿಟ್ಟರು. ದಿನದ ದುಡಿಮೆಯಲ್ಲಿ 70 ರೂಪಾಯಿಗಳನ್ನು ಮಗನ ಕೈಗಿಡುತ್ತಿದ್ದರು ತಂದೆ ಮಿರ್ಜಾ ಮೊಹಮ್ಮದ್ ಗೌಸ್. ಮಗನ ಬಳಿ ಒಂದು ಓಬಿರಾಯನ ಕಾಲದ ಪ್ಲಾಟಿನಾ ಬೈಕ್ ಇತ್ತು. ಅದೇ ಅವನ ಪಾಲಿನ ಐರಾವತ. ದಿನಕ್ಕೆ 40 ರೂಪಾಯಿ ಪೆಟ್ರೋಲ್’ಗೆ. 20 ರೂಪಾಯಿ ಊಟ. 10 ರೂಪಾಯಿಯನ್ನು ಉಳಿಸುತ್ತಿದ್ದ.

ಅಭ್ಯಾಸಕ್ಕೆಂದು ಬರುತ್ತಿದ್ದವನ ಕಾಲಲ್ಲಿ ಶೂಸ್ ಕೂಡ ಇರಲಿಲ್ಲ. ಆರಂಭದಲ್ಲಿ ಬರಿಗಾಲಲ್ಲೇ ಆಡುತ್ತಿದ್ದ. ಕೊನೆಗೆ ಕೂಡಿಟ್ಟ ಹಣ, ತಂದೆ ತಾಯಿ ಕೊಟ್ಟ ದುಡ್ಡಿನಲ್ಲಿ ಒಂದು ಜೊತೆ ಕ್ರಿಕೆಟ್ ಶೂಸ್ ಖರೀದಿಸಿದ. ಆಡಿದ. ಆಡುತ್ತಲೇ ಹೋದ. ಗುರಿ ತಲುಪುವವರೆಗೆ ತಿರುಗಿ ನೋಡಿದ್ದೇ ಇಲ್ಲ. ಈಗ ಅದೇ ಹುಡುಗ ₹70 ಕೋಟಿಗಳ ಸರದಾರ. ಹೈದರಾಬಾದ್’ನಲ್ಲೊಂದು ಐಷಾರಾಮಿ ಬಂಗಲೆ, ನಾಲ್ಕು ಐಷಾರಾಮಿ ಕಾರುಗಳ ಒಡೆಯನವನು. ಎರಡೂಕಾಲು ಕೋಟಿಯ Range Rover Vogue, ಎರಡು ಕೋಟಿಯ Mercedes-Benz S-Class, 75 ಲಕ್ಷದ BMW 5 Series, ಉಡುಗೊರೆಯಾಗಿ ಬಂದ ಮತ್ತೊಂದು Mahindra Thar..

ಸಣ್ಣ ಬಾಡಿಗೆ ಮನೆಯಿಂದ ಐಷಾರಾಮಿ ಬಂಗಲೆವರೆಗೆ

ಅವತ್ತು ಬಂಜಾರ ಹಿಲ್ಸ್ ಬಳಿಯಿದ್ದ ಆ ಸಣ್ಣ ಬಾಡಿಗೆ ಮನೆಯ ಮುಂದೆ ತಂದೆಯ ಆಟೋ, ಪ್ಲಾಟಿನಾ ಬೈಕ್ ಮತ್ತು ಒಂದು ಸೈಕಲ್ ನಿಲ್ಲುತ್ತಿತ್ತು. ಈಗ ಜುಬ್ಲೀ ಹಿಲ್ಸ್’ನಲ್ಲಿರುವ 13 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಮುಂದೆ ಈ ನಾಲ್ಕು ಕಾರುಗಳು ನಿಂತಿರುತ್ತವೆ. ತಂದೆ ಕೊಡುತ್ತಿದ್ದ 70 ರೂಪಾಯಿಯಲ್ಲಿ ದಿನಕ್ಕೆ 10 ರೂಪಾಯಿಗಳನ್ನು ಕೂಡಿಡುತ್ತಿದ್ದ ಹುಡುಗ 10 ವರ್ಷಗಳಲ್ಲಿ ಐಪಿಎಲ್’ನಿಂದ ಸಂಪಾದಿಸಿರುವ ಹಣ ₹58.50 ಕೋಟಿ.

‘‘ನಿನ್ನ ಮಗನಿಗೆ ಕ್ರಿಕೆಟ್ ಅನ್ನ ಕೊಡುತ್ತದೆಯೇ? ಅವನಿಗೇನೋ ಹುಚ್ಚು. ನಿನಗಾದರೂ ಬುದ್ಧಿ ಬೇಡವೇ?’’ ಎಂದು ಜೊತೆಯಲ್ಲಿ ಆಟೋ ಓಡಿಸುತ್ತಿದ್ದ ಸ್ನೇಹಿತರು ಮಿರ್ಜಾ ಮೊಹಮ್ಮದ್ ಗೌಸ್’ರನ್ನು ಪದೇ ಪದೇ ಪ್ರಶ್ನಿಸುತ್ತಿದ್ದರಂತೆ. ಈಗ ಅದೇ ಮೊಹಮ್ಮದ್ ಗೌಸ್’ರ ಮಗನೇ ಹೈದರಾಬಾದ್’ನಲ್ಲಿ ಕ್ರಿಕೆಟ್ ಆಡುವ ಹುಡುಗರ ಪಾಲಿಗೆ ಅನ್ನದಾತನಾಗಿ ನಿಂತಿದ್ದಾನೆ. ಕ್ರಿಕೆಟ್ ಕಡೆ ಅವನದ್ದು ಅದೆಂಥಾ ಬದ್ಧತೆ ಎಂದರೆ, 2021ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯಾಡುತ್ತಿದ್ದಾಗ ಹೈದರಾಬಾದ್’ನಲ್ಲಿದ್ದ ತಂದೆ ಕೋವಿಡ್’ಗೆ ಬಲಿಯಾಗಿದ್ದರು. ಕಾಂಗರೂ ನಾಡಿನಲ್ಲಿ ಕೋವಿಡ್ ಕ್ವಾರಂಟೈನ್’ನಲ್ಲಿದ್ದ. ಭಾರತಕ್ಕೆ ಮರಳಿ ಬಂದರೆ ಮತ್ತೆ ಟೆಸ್ಟ್ ಸರಣಿ ಆಡಲು ಸಾಧ್ಯವಿಲ್ಲ. ಇತ್ತ ಸತ್ತು ಮಲಗಿದ್ದ ತಂದೆ. ಅತ್ತ ಕ್ರಿಕೆಟ್. ಅವನು ಆಸ್ಟ್ರೇಲಿಯಾದಲ್ಲೇ ಉಳಿದು ಬಿಟ್ಟ. ಮಗನನ್ನು ಟೆಸ್ಟ್ ಕ್ರಿಕೆಟರ್ ಆಗಿ ನೋಡಬೇಕೆಂಬುದು ತಂದೆಯ ಕನಸಾಗಿತ್ತು. ಟೆಸ್ಟ್ ಸರಣಿಯನ್ನಾಡಿ ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವು ತಂದು ಕೊಟ್ಟ ಮಗ.

ಅವನ ಹೆಸರು. ಸಿರಾಜ್. The lion hearted ಮೊಹಮ್ಮದ್ ಸಿರಾಜ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026: ಫೈನಲ್‌ನಲ್ಲಿ ಬದಲಾಗುತ್ತಾ ಆರ್‌ಸಿಬಿ ಆಡುವ ಹನ್ನೊಂದರ ಬಳಗ? ಇಲ್ಲಿದೆ ನೋಡಿ ಬಲಿಷ್ಠ ಬೆಂಗಳೂರು ತಂಡ
IPL 2026 Final: ಫಿಲ್ ಸಾಲ್ಟ್ RCB ತಂಡದೊಳಗೆ ಬಂದ್ರೆ ಹೊರಗೆ ಉಳಿಯೋರು ಯಾರು?