
'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್(Sachin Tendulkar) ಐಪಿಎಲ್ 2026(IPL 2026)ರಲ್ಲಿ ಮಿಂಚಿದ ಯುವ ಆಟಗಾರ ವೈಭವ್ ಸೂರ್ಯವಂಶಿ(Vaibhav suryavamshi) ಆಟವನ್ನು ಹಾಡಿ ಹೊಗಳಿದ್ದಾರೆ. 15 ವರ್ಷದ ಈ ಹುಡುಗ 'ನಿಜಕ್ಕೂ ವಿಶೇಷ ಪ್ರತಿಭೆ ಅವನ ಸಹಜ ಆಟಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದು ಸಚಿನ್ ಸಲಹೆ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್(Rajasthan royals) ಪರ ಆಡಿದ ಸೂರ್ಯವಂಶಿ, ಈ ಬಾರಿಯ ಟೂರ್ನಿಯಲ್ಲಿ 237.31ರ ಸ್ಟ್ರೈಕ್ ರೇಟ್‌ನಲ್ಲಿ ಬರೋಬ್ಬರಿ 776 ರನ್ ಗಳಿಸಿದ್ದರು. ಅಷ್ಟೇ ಅಲ್ಲ, 72 ಸಿಕ್ಸರ್‌ಗಳನ್ನು ಬಾರಿಸಿ, ಒಂದೇ ಸೀಸನ್‌ನಲ್ಲಿ 59 ಸಿಕ್ಸರ್ ಬಾರಿಸಿದ್ದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದರು.
ಮುಂಬೈನಲ್ಲಿ ನಡೆದ ಕ್ರಿಕ್‌ಇನ್ಫೋ ಗೌರವ ಪ್ರಶಸ್ತಿ(Cricinfo Honorary Award) ಪ್ರದಾನ ಸಮಾರಂಭದಲ್ಲಿ ಸಚಿನ್ ಈ ಮಾತುಗಳನ್ನಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಅವರನ್ನು '21ನೇ ಶತಮಾನದ ಅತ್ಯುತ್ತಮ ಪುರುಷರ ಅಂತರರಾಷ್ಟ್ರೀಯ ಬ್ಯಾಟರ್'ಎಂದು ಗೌರವಿಸಲಾಯಿತು. ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಪ್ರಕಾರ, 'ಎಲ್ಲರೂ ಸೂರ್ಯವಂಶಿ ಬಗ್ಗೆ ಮಾತಾಡ್ತಿದ್ದಾರೆ, ನಾನೂ ಅವನ ಬ್ಯಾಟಿಂಗ್ ನೋಡಿದೆ - ಅದು ಅದ್ಭುತವಾಗಿತ್ತು. ಅವನು ನಿಜಕ್ಕೂ ವಿಶೇಷವಾದ ಆಟಗಾರ. ಕೇವಲ ಚೆಂಡನ್ನು ಬಾರಿಸುವ ಸಾಮರ್ಥ್ಯ ಮಾತ್ರವಲ್ಲ, ಅವನ ಮಣಿಕಟ್ಟಿನ ಚಲನೆ(Wrist movement) ನನ್ನನ್ನು ಬಹಳ ಆಕರ್ಷಿಸಿತು ಎಂದು ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೈದಾನದ ಎಲ್ಲಾ ದಿಕ್ಕುಗಳಿಗೂ ಚೆಂಡನ್ನು ಅಟ್ಟಲು ಉತ್ತಮ ಮಣಿಕಟ್ಟಿನ ಚಲನೆ ಬೇಕು. ಅವನು ಸುಮ್ಮನೆ ಚೆಂಡನ್ನು ಬಡಿಯುತ್ತಿಲ್ಲ. ಬದಲಿಗೆ, ಉಳಿದವರಿಗಿಂತ ಬೇಗನೆ ಲೈನ್ ಅಂಡ್ ಲೆಂಥ್ ಅರ್ಥಮಾಡಿಕೊಂಡು, ಸುಲಭವಾಗಿ ಬೌಂಡರಿ ಲೈನ್ ದಾಟಿಸುತ್ತಾನೆ ಎಂದು ಸಚಿನ್ ವಿವರಿಸಿದರು.
ಈ ಯುವ ಆಟಗಾರನ ಭವಿಷ್ಯದ ಬಗ್ಗೆ ಎಲ್ಲರೂ ಉತ್ಸುಕರಾಗಿದ್ದಾರೆ. ಆದರೆ, ಅವನ ಮೇಲೆ ನಿರೀಕ್ಷೆಗಳ ಭಾರ ಹೊರಿಸದೆ, ಸಹಜವಾಗಿ ಬೆಳೆಯಲು ಬಿಡಬೇಕು ಎಂದು ಸಚಿನ್ ಒತ್ತಿ ಹೇಳಿದರು. 'ನಾನು ಅವನಿಗೆ ನೀನು ನೀನಾಗಿಯೇ ಇರು ಅಂತ ಹೇಳ್ತೀನಿ. ಎಲ್ಲದಕ್ಕೂ ಒಂದು ಮೊದಲ ಹೆಜ್ಜೆ ಇರುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ, ವಯಸ್ಸಿನ ಜೊತೆಗೆ ಬೇರೆ ಬೇರೆ ಸವಾಲುಗಳನ್ನು ಎದುರಿಸುವುದು ಹೇಗೆಂದು ಕಲಿಯುತ್ತಾನೆ. ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮನಸ್ಥಿತಿ ಮುಖ್ಯ. ಸಮಸ್ಯೆಗಳು ನಿಮ್ಮ ವೃತ್ತಿಜೀವನದ ಕೊನೆಯ ದಿನದವರೆಗೂ, ನೀವು ಎದುರಿಸುವ ಕೊನೆಯ ಚೆಂಡಿನವರೆಗೂ ಇರುತ್ತವೆ. ಬೌಲರ್ ಪ್ರತಿ ಎಸೆತದಲ್ಲೂ ಒಂದು ಪ್ರಶ್ನೆ ಕೇಳುತ್ತಾನೆ. ಅದಕ್ಕೆ ನೀವು ಯಾವ ಪರಿಹಾರ ಕಂಡುಕೊಳ್ಳುತ್ತೀರಿ ಎಂಬುದು ಮುಖ್ಯ. ಸೂರ್ಯವಂಶಿ ನೋಡಲು ತುಂಬಾ ಆತ್ಮವಿಶ್ವಾಸದಿಂದ ಕಾಣುತ್ತಾನೆ, ತಾನು ಏನು ಮಾಡಬೇಕು ಎಂಬುದರ ಬಗ್ಗೆ ಅವನಿಗೆ ಸ್ಪಷ್ಟತೆ ಇದೆ. ಅವನ ಸಹಜ ಆಟದ ಜೊತೆ ನಾನು ಚೆಲ್ಲಾಟವಾಡಲು ಇಷ್ಟಪಡುವುದಿಲ್ಲ' ಎಂದು ತೆಂಡೂಲ್ಕರ್ ಹೇಳಿದರು.
ಈ ಯುವ ಆಟಗಾರನಿಗೆ ಹೆಚ್ಚು ಸಲಹೆಗಳನ್ನು ನೀಡುವುದರಿಂದ ಅವನ ಸಹಜ ಪ್ರವೃತ್ತಿಗೆ ಅಡ್ಡಿಯಾಗಬಹುದು ಎಂದು ಸಚಿನ್ ಸೇರಿಸಿದರು. 'ಅವನು ಚೆಂಡನ್ನು ನೋಡುವ ರೀತಿ ಮತ್ತು ಅದಕ್ಕೆ ಪ್ರತಿಕ್ರಿಯಿಸುವ ರೀತಿಯ ನಡುವೆ ನೀವು ಹಲವು ಅಡೆತಡೆಗಳನ್ನು ಸೃಷ್ಟಿಸಿದರೆ, ಅಂದರೆ, ಅವನಿಗೆ ಏನೇನೋ ಹೇಳಿಕೊಡಲು ಹೋದರೆ, ಅಲ್ಲೇ ನಿಜವಾದ ಸವಾಲು ಶುರುವಾಗುತ್ತದೆ. ಅವನು ಈಗ ಹೇಗೆ ಆಡುತ್ತಿದ್ದಾನೋ, ಹಾಗೆಯೇ ಆಡಲು ನಾನು ಅವನಿಗೆ ಸ್ವಾತಂತ್ರ್ಯ ಕೊಡಬೇಕು. ಕಾಲಕ್ರಮೇಣ, ಆಟದ ಇತರ ಸವಾಲುಗಳನ್ನು ನಿಭಾಯಿಸಲು ಅವನಾಗೇ ಕಲಿಯುತ್ತಾನೆ ಎಂದರು.
ಸೂರ್ಯವಂಶಿ ಮುಂದೊಂದು ದಿನ ಟೆಸ್ಟ್ ಕ್ರಿಕೆಟ್‌ನಲ್ಲೂ ಛಾಪು ಮೂಡಿಸುತ್ತಾನೆ ಎಂಬ ಭರವಸೆಯನ್ನು ಮಾಜಿ ನಾಯಕ ವ್ಯಕ್ತಪಡಿಸಿದರು. ಆದರೆ, ಅಭಿಮಾನಿಗಳು ಮತ್ತು ತಜ್ಞರು ತಾಳ್ಮೆಯಿಂದಿರಬೇಕು, ಅವನ ಆಯ್ಕೆಯ ಬಗ್ಗೆ ಆಯ್ಕೆಗಾರರಿಗೆ ನಿರ್ಧಾರ ತೆಗೆದುಕೊಳ್ಳಲು ಬಿಡಬೇಕು ಎಂದು ಮನವಿ ಮಾಡಿದರು. 'ನಾನು ಮಾತ್ರವಲ್ಲ, ಎಲ್ಲರೂ ಅವನನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ನೋಡಲು ಬಯಸುತ್ತಾರೆ. ಅದು ಯಾವಾಗ ಆಗುತ್ತದೆಯೋ ನನಗೆ ಗೊತ್ತಿಲ್ಲ. ಆದರೆ ಇಂತಹ ಅದ್ಭುತ ಪ್ರತಿಭೆಗೆ ಪ್ರೋತ್ಸಾಹ ಬೇಕು. ಅವನು ಚೆನ್ನಾಗಿ ಆಡುತ್ತಿದ್ದರೆ, ನಾವು ಅವನನ್ನು ಬೆಂಬಲಿಸಬೇಕು ಮತ್ತು ಅವನ ಆಟವನ್ನು ಆನಂದಿಸಬೇಕು. ಅವನ ಮೇಲೆ ನಿರಂತರವಾಗಿ ಒತ್ತಡ ಹೇರಬಾರದು. ಅವನು ಈ ತಂಡದಲ್ಲಿ ಆಡಬೇಕು, ಆಡಬಾರದು, ಈ ತಂಡಕ್ಕೆ ಆಯ್ಕೆಯಾಗಬೇಕು ಎಂದೆಲ್ಲಾ ಹೇಳಬಾರದು. ಆ ಜವಾಬ್ದಾರಿಯನ್ನು ಹೊತ್ತಿರುವವರಿಗೆ (ಆಯ್ಕೆಗಾರರಿಗೆ) ಅದನ್ನು ಬಿಟ್ಟುಬಿಡಿ' ಎಂದು ಸಚಿನ್ ಮಾತು ಮುಗಿಸಿದರು.
ಸೂರ್ಯವಂಶಿಯ ಸ್ಫೋಟಕ ಆಟ ಅವನನ್ನು ದೇಶದ ಅತಿ ಹೆಚ್ಚು ಚರ್ಚಿತ ಯುವ ಕ್ರಿಕೆಟಿಗರಲ್ಲಿ ಒಬ್ಬನನ್ನಾಗಿ ಮಾಡಿದೆ. ಭಾರತದ ಭವಿಷ್ಯದ ತಾರೆಯಾಗಿ ಎಲ್ಲಾ ಮಾದರಿಗಳಲ್ಲಿಯೂ ಮಿಂಚುವ ಸಾಮರ್ಥ್ಯ ಅವನಲ್ಲಿದೆ ಎಂದು ಹಲವರು ಭಾವಿಸಿದ್ದಾರೆ. (ANI)
(ಈ ಸುದ್ದಿಯ ಹೆಡ್‌ಲೈನ್ ಹೊರತುಪಡಿಸಿ, ಇನ್ನುಳಿದ ವಿಷಯವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.