
ಬೆಂಗಳೂರು (ಆ.25): ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಸೌರವ್ ಗಂಗೂಲಿ. ನಾಯಕನಾಗಿ ಮೈದಾನದಲ್ಲಿ ಮಾತ್ರವಲ್ಲ, ಮೈದಾನದ ಹೊರಗೂ ಅವರ ನಿರ್ಧಾರಗಳು ಅಷ್ಟೇ ಖಡಕ್ ಆಗಿರುತ್ತಿದ್ದವು. ಅದರಲ್ಲೂ ಟೀಮ್ ಸೆಲೆಕ್ಷನ್ ವಿಚಾರದಲ್ಲಿ ಕಟ್ಟುನಿಟ್ಟು. ಕೆಲ ತಿಂಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸೌರವ್ ಗಂಗೂಲಿ ತಮ್ಮ ವೃತ್ತಿಜೀವನದಲ್ಲಿ ಟೀಮ್ ಸೆಲೆಕ್ಷನ್ ವಿಚಾರದಲ್ಲಿ ಎದುರಿಸಿದ ಕಷ್ಟವನ್ನು ಹೇಳಿಕೊಂಡಿದ್ದರು. 2003ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಆಯ್ಕೆಗಾರರು ಮೊದಲು ಆಯ್ಕೆ ಮಾಡಿದ್ದ ತಂಡದಲ್ಲಿ ಸ್ಪಿನ್ನರ್ ಅನಿಲ್ ಕುಂಬ್ಳೆ ಹೆಸರು ಇದ್ದಿರಲಿಲ್ಲ. ಅದಕ್ಕಾಗಿ ತಾವು ಪಟ್ಟು ಹಿಡಿದ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ.
ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ ಅವರ ವೃತ್ತಿಜೀವನದಲ್ಲೂ ಟೀಮ್ ಇಂಡಿಯಾದಿಂದ ಹೊರಬೀಳುವ ದೊಡ್ಡ ಕಂಟಕ ಎದುರಾಗಿತ್ತು. 2003ರ ಐತಿಹಾಸಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ ಅನಿಲ್ ಕುಂಬ್ಳೆ ಅವರನ್ನು ತಂಡದಿಂದ ಹೊರಗಿಡಲು ಆಯ್ಕೆಗಾರರು ಸಂಪೂರ್ಣವಾಗಿ ಸಿದ್ಧರಾಗಿದ್ದರು. ಆದರೆ, ಅಂದಿನ ನಾಯಕ ಸೌರವ್ ಗಂಗೂಲಿ ಪಟ್ಟು ಹಿಡಿದು ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರು.
ಭಾರತದ ಕ್ರಿಕೆಟ್ ದಿಗ್ಗಜರ ಕೊಡುಗೆಯನ್ನು ಸ್ಮರಿಸಿದ ಸೌರವ್ ಗಂಗೂಲಿ, 'ಇಂಡಿಯನ್ ಕ್ರಿಕೆಟ್ ಎಂದಾಗ ನಾವು ಸಚಿನ್ ತೆಂಡುಲ್ಕರ್ ಬಗ್ಗೆ ಮಾತನಾಡುತ್ತೇವೆ, ವೇಗವಾಗಿ 300 ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್ ಅಥವಾ ಈ ಕಾಲದ ಅತಿ ಹೆಚ್ಚು ರನ್ ಗಳಿಸುತ್ತಿರುವ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತೇವೆ. ಆದರೆ, ಕಳೆದ 20-25 ವರ್ಷಗಳಲ್ಲಿ ಭಾರತ ಕಂಡ ಅತಿ ದೊಡ್ಡ 'ಮ್ಯಾಚ್ ವಿನ್ನರ್' ಎಂದರೆ ಅದು ಅನಿಲ್ ಕುಂಬ್ಳೆ. ಭಾರತಕ್ಕೆ ಅವರಿಗಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಆಟಗಾರ ಇನ್ನೊಬ್ಬರಿಲ್ಲ' ಎಂದು ಹೊಗಳಿದ್ದಾರೆ.
2003ರ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ನಡೆದ ಟೀಮ್ ಇಂಡಿಯಾ ಸೆಲೆಕ್ಷನ್ ಮೀಟಿಂಗ್‌ನ ವಿವರ ಹಂಚಿಕೊಂಡ ಅವರು, 'ಹೈದರಾಬಾದ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ನಂತರ, ಅದೇ ರಾತ್ರಿ ಸುಮಾರು 11:30ಕ್ಕೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಲು ಹೋಟೆಲ್‌ನಲ್ಲಿ ಸಭೆ ಕರೆಯಲಾಗಿತ್ತು. ಅದೇ ದಿನ ರಾತ್ರಿ ತಂಡವನ್ನು ಪ್ರಕಟ ಮಾಡಲೇಬೇಕಿತ್ತು. ನಾನು ಸಭೆಯ ಕೊಠಡಿಯನ್ನು ಪ್ರವೇಶಿಸುತ್ತಿದ್ದಂತೆಯೇ, ಆಯ್ಕೆಗಾರರು ಅನಿಲ್ ಕುಂಬ್ಳೆ ಅವರನ್ನು ತಂಡದಿಂದ ಕೈಬಿಡಲು ಸಂಪೂರ್ಣವಾಗಿ ಮನಸ್ಸು ಮಾಡಿದ್ದಾರೆ ಎಂಬ ಸುಳಿವು ಸಿಕ್ಕಿತು' ಎಂದಿದ್ದಾರೆ.
ನನ್ನ ಜೊತೆಯಲ್ಲಿದ್ದ ಕೋಚ್ ಜಾನ್ ರೈಟ್ ಅತ್ಯಂತ ಆತಂಕಕ್ಕೆ ಒಳಗಾಗಿದ್ದರು. ಸೆಲೆಕ್ಟರ್‌ಗಳು ಕುಂಬ್ಳೆಯವರನ್ನು ಆಯ್ಕೆ ಮಾಡಲು ಯಾವುದೇ ಕಾರಣಕ್ಕೂ ಒಪ್ಪುತ್ತಿಲ್ಲ ಎಂದಿದ್ದರು. ಈ ವೇಳೆ ಅವರಿಗೆ ನಾನು, 'ಹಾಗೇನಾದರೂ ಅನಿಲ್ ಕುಂಬ್ಳೆ ಅವನ್ನು ಈಗ ತಂಡದಿಂದ ಕೈಬಿಟ್ಟರೆ, ಬಹುಶಃ ಅವರು ಮತ್ತೆಂದೂ ಟೀಮ್ ಇಂಡಿಯಾ ಪರವಾಗಿ ಆಡೋಕೆ ಸಾಧ್ಯವಾಗೋದಿಲ್ಲ' ಎಂದಿದ್ದೆ.
ಆಯ್ಕೆಗಾರರ ವಿರೋಧದ ನಡುವೆಯೂ ಸೌರವ್ ಗಂಗೂಲಿ ಬಗ್ಗಲಿಲ್ಲ. 'ಅನಿಲ್ ಕುಂಬ್ಳೆ ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ್ದಾರೆ, ಅವರು ಪಂದ್ಯಗಳನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿರುವ ಬೌಲರ್. ಯಾವುದೇ ಕಾರಣಕ್ಕೂ ಅವರನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಕೈಬಿಡಬಾರದು ಎಂದು ನಾನು ಆಯ್ಕೆಗಾರರಲ್ಲಿ ಮನವಿ ಮಾಡಿದೆ. ಆಗಲೂ ಕೂಡ ಅವರು ಒಪ್ಪಿರಲಿಲ್ಲ. ನೀವು ಅವರ ಹೆಸರನ್ನು ಸೇರಿಸದೇ ಇದ್ದರೆ ಟೀಮ್ ಸೆಲೆಕ್ಷನ್ ಶೀಟ್‌ಗೆ ಸಹಿ ಹಾಕೋದಿಲ್ಲ ಎಂದು ತಿಳಿಸಿಬಿಟ್ಟಿದ್ದೆ' ಎಂದಿದ್ದಾರೆ.
ಕೊನೆಗೆ ಆಯ್ಕೆಗಾರರು, ಹಾಗೇನಾದರೂ ಅನಿಲ್ ಕುಂಬ್ಳೆ ಟೂರ್‌ನಲ್ಲಿ ವಿಫಲರಾದರೆ, ಅವರಿಗಿಂತ ಮುಂಚಿತವಾಗಿ ತಂಡದಿಂದ ಹೊರಬೀಳುವ ವ್ಯಕ್ತಿ ನೀವಾಗಿರುತ್ತೀರಿ ಎನ್ನುವ ಎಚ್ಚರಿಕೆಯನ್ನೂ ನೀಡಲಾಯಿತು. ಆದರೆ, ಟೂರ್‌ನಲ್ಲಿ ಅನಿಲ್ ಕುಂಬ್ಳೆ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದು ಮಾತ್ರವಲ್ಲದೆ, ಆ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ 80ಕ್ಕೂ ಅಧಿಕ ವಿಕೆಟ್ ಉರುಳಿಸಿದರು. ಅದರೊಂದಿಗೆ ಒಂದೇ ವರ್ಷದಲ್ಲಿ ಗರಿಷ್ಠ ಟೆಸ್ಟ್ ವಿಕೆಟ್ ಪಡೆದ ಸ್ಪಿನ್ನರ್ ಎನ್ನುವ ಖ್ಯಾತಿಯನ್ನೂ ಪಡೆದರು ಎಂದು ಗಂಗೂಲಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.