ಆರ್‌ಸಿಬಿ, ಆಸೀಸ್ ಮಾಜಿ ಆಲ್ರೌಂಡರ್‌ಗೆ ಖುಲಾಯಿಸಿದ ಅದೃಷ್ಟ; 39ನೇ ವಯಸ್ಸಿಗೆ ಒಲಿದ ಇನ್ನೊಂದು ದೇಶದ ಕ್ಯಾಪ್ಟನ್ ಪಟ್ಟ!

Published : Aug 12, 2026, 12:19 PM IST
Moises Henriques

ಸಾರಾಂಶ

ಆಸ್ಟ್ರೇಲಿಯಾ ಹಾಗೂ ಆರ್‌ಸಿಬಿ ತಂಡದ ಮಾಜಿ ಆಲ್‌ರೌಂಡರ್ ಮೊಯ್ಸಿಸ್ ಹೆನ್ರಿಕೇಸ್, ಇದೀಗ ಪೋರ್ಚುಗಲ್ ಕ್ರಿಕೆಟ್ ತಂಡದ ನೂತನ ನಾಯಕನಾಗಿ ನೇಮಕಗೊಂಡಿದ್ದಾರೆ. ಆಸ್ಟ್ರೇಲಿಯಾ ದೇಶಿ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, 39ನೇ ವಯಸ್ಸಿನಲ್ಲಿ ಅವರು ಮುಂಬರುವ ಟಿ20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಪೋರ್ಚುಗಲ್ ತಂಡವನ್ನು ಮುನ್ನಡೆಸಲಿದ್ದಾರೆ.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಆಸ್ಟ್ರೇಲಿಯಾ ತಂಡದ ಪರ ಅದ್ಭುತ ಆಲ್ರೌಂಡ್ ಆಟದ ಮೂಲದ ಮಿಂಚಿದ್ದ 39 ವರ್ಷದ ಮೊಯ್ಸಿಸ್ ಹೆನ್ರಿಕೇಸ್ ಇದೀಗ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ದೇಶಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಮಾಜಿ ಆಲ್ರೌಂಡರ್‌ಗೆ ಇದೀಗ ಮಹತ್ವದ ಜವಾಬ್ದಾರಿ ಹೆಗಲೇರಿದೆ. ಆಸ್ಟ್ರೇಲಿಯಾ ಪರ ಟೆಸ್ಟ್, ಏಕದಿನ ಹಾಗೂ ಟಿ20 ಹೀಗೆ ಮೂರು ಮಾದರಿಯನ್ನು ಪ್ರತಿನಿಧಿಸಿದ್ದ ಹೆನ್ರಿಕೇಸ್ ಬರೋಬ್ಬರಿ 44 ಪಂದ್ಯಗಳನ್ನಾಡಿದ್ದರು. ಇದೀಗ ಮೊಯ್ಸಿಸ್ ಹೆನ್ರಿಕೇಸ್, ಪೋರ್ಚುಗಲ್ ಕ್ರಿಕೆಟ್ ತಂಡದ ನೂತನ ನಾಯಕನಾಗಿ ನೇಮಕವಾಗಿದ್ದಾರೆ.

39ನೇ ವಯಸ್ಸಿಗೆ ಹೆನ್ರಿಕೇಸ್‌ಗೆ ನಾಯಕ ಪಟ್ಟ:

ಆಸ್ಟ್ರೇಲಿಯಾ ಮಾಜಿ ನಾಯಕ ಹೆನ್ರಿಕೇಸ್ ಅವರಿಗೆ ಸದ್ಯ 39 ವರ್ಷ ವಯಸ್ಸು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ವಯಸ್ಸಿಗೆ ಬಹುತೇಕ ಆಟಗಾರರು ನಿವೃತ್ತಿ ಹೇಳಿರುತ್ತಾರೆ ಅಥವಾ ನಿವೃತ್ತಿ ಅಂಚಿನಲ್ಲಿರುತ್ತಾರೆ. ಆದರೆ ಆಸೀಸ್ ಪರ 4 ಟೆಸ್ಟ್, 16 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನಾಡಿ ಮಿಂಚಿದ್ದ ಹೆನ್ರಿಕೇಸ್, ಇದೀಗ ಪೋರ್ಚುಗಲ್ ಕ್ರಿಕೆಟ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ.

ಮೊಯ್ಸಿಸ್ ಹೆನ್ರಿಕೇಸ್ ಪೋರ್ಚುಗೀಸ್ ದ್ವೀಪವಾದ ವೆಸ್ಟ್ ಆಫ್ ಮೊರಕ್ಕೊದಲ್ಲಿನ ಮೆಡೆರಿಯಾ ಎಂಬಲ್ಲಿ ಜನಿಸಿದರು. ಇದೇ ನಗರದಲ್ಲಿ ಫುಟ್ಬಾಲ್ ದಂತಕಥೆ ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೊ ಕೂಡಾ ಜನಿಸಿದ್ದರು. ಇದಾದ ಬಳಿಕ ಹೆನ್ರಿಕೇಸ್ ಕುಟುಂಬ ಬದುಕು ಕಟ್ಟಿಕೊಳ್ಳಲು ಆಸ್ಟ್ರೇಲಿಯಾಗೆ ಸ್ಥಳಾಂತರವಾಯಿತು. ಬಾಲ್ಯದಲ್ಲಿತೇ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡ ಹೆನ್ರಿಕೇಸ್, ಕಾಂಗರೂ ನಾಡಿನಲ್ಲಿ ನ್ಯೂ ಸೌಥ್ ವೇಲ್ಸ್ ಹಾಗೂ ಸಿಡ್ನಿ ಸಿಕ್ಸರ್ ತಂಡಗಳಲ್ಲಿ ಮಿಂಚಿ ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದರು.

ಕಳೆದ ತಿಂಗಳಷ್ಟೇ ಆಸೀಸ್ ದೇಶಿ ಕ್ರಿಕೆಟ್‌ಗೆ ಹೆನ್ರಿಕೇಸ್ ಗುಡ್‌ಬೈ:

ಐದು ವರ್ಷಗಳ ಹಿಂದೆ ಕೊನೆಯ ಬಾರಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದ ಮೊಯ್ಸಿಸ್ ಹೆನ್ರಿಕೇಸ್, ಕಳೆದ ತಿಂಗಳಷ್ಟೇ ಆಸೀಸ್ ದೇಶಿ ಕ್ರಿಕೆಟ್‌ಗೂ ದಿಢೀರ್ ವಿದಾಯ ಘೋಷಿಸಿದ್ದರು. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಟೂರ್ನಿಯು ಫಿನ್‌ಲ್ಯಾಂಡ್‌ನಲ್ಲಿ ನಡೆಯಲಿದ್ದು, ಆ ಟೂರ್ನಿಯಲ್ಲಿ ಮೊಯ್ಸಿಸ್ ಹೆನ್ರಿಕೇಸ್ ಪೋರ್ಚುಗಲ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಪೋರ್ಚುಗಲ್ ತಂಡವನ್ನು ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವಂತೆ ಮಾಡುವ ದೊಡ್ಡ ಸವಾಲು ಹೆನ್ರಿಕೇಸ್ ಮುಂದಿದೆ.

ಹೆನ್ರಿಕೇಸ್ ಮುಂದಿದೆ ದೊಡ್ಡ ಸವಾಲು:

ಅಂದಹಾಗೆ ಐಸಿಸಿ ಪುರುಷರ ಟಿ20 ಶ್ರೇಯಾಂಕದಲ್ಲಿ ಪೋರ್ಚುಗಲ್ ತಂಡವು ಸದ್ಯ 37ನೇ ಸ್ಥಾನದಲ್ಲಿದೆ. ಆಗಸ್ಟ್ 14 ರಿಂದ 20 ರವರೆಗೆ ನಡೆಯಲಿರುವ ಟಿ20 ವಿಶ್ವಕಪ್ ಯುರೋಪ್ ಉಪ-ಪ್ರಾದೇಶಿಕ ಅರ್ಹತಾ ಸುತ್ತು 'ಸಿ' (C) ಯ 'ಬಿ' ಗುಂಪಿನಲ್ಲಿ ಇಸ್ರೇಲ್, ಜರ್ಮನಿ, ಗ್ರೀಸ್ ಮತ್ತು ಜೆಕಿಯಾ ತಂಡಗಳನ್ನು ಎದುರಿಸಲಿದೆ. ಈ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡವು, ಆಗಸ್ಟ್ 21 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ 'ಎ' ಗುಂಪಿನ ವಿಜೇತ ತಂಡದ ವಿರುದ್ಧ ಆಡಲಿದೆ. ಈ ಅರ್ಹತಾ ಸುತ್ತಿನ ಒಟ್ಟಾರೆ ವಿಜೇತ ತಂಡವು ಯುರೋಪಿಯನ್ ಪ್ರಾದೇಶಿಕ ಫೈನಲ್‌ನಲ್ಲಿ ಸ್ಕಾಟ್‌ಲ್ಯಾಂಡ್, ಜರ್ಸಿ ಮತ್ತು ಡೆನ್ಮಾರ್ಕ್ ತಂಡಗಳೊಂದಿಗೆ ಸೇರಿಕೊಳ್ಳಲಿದೆ; ಆ ಪಂದ್ಯಾವಳಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ 2028ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ. ಹೀಗಾಗಿ ಹೆನ್ರಿಕೇಸ್ ಮುಂದೆ ದೊಡ್ಡ ಸವಾಲಿದೆ.

ಆರ್‌ಸಿಬಿ ಸೇರಿ 5 ಐಪಿಎಲ್ ತಂಡಗಳನ್ನು ಪ್ರತಿನಿಧಿಸಿರುವ ಹೆನ್ರಿಕೇಸ್:

ಆಸೀಸ್ ಮೂಲದ ಪ್ರತಿಭಾನ್ವಿತ ಮಾಜಿ ಆಲ್ರೌಂಡರ್ ಮೊಯ್ಸಿಸ್ ಹೆನ್ರಿಕೇಸ್ 2009ರಿಂದ 2021ರ ಅವಧಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್, ಡೆಲ್ಲಿ ಡೇರ್‌ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಹೆನ್ರಿಕೇಸ್ ಸನ್‌ರೈಸರ್ಸ್ ತಂಡದಲ್ಲಿದ್ದಾಗ 2016ರಲ್ಲಿ ಆರ್‌ಸಿಬಿ ಎದುರು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಕ್ಕೂ ಮೊದಲು 2013ರಲ್ಲಿ ಹೆನ್ರಿಕೇಸ್ ಆರ್‌ಸಿಬಿ ತಂಡದ ಭಾಗವಾಗಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ ಜೊತೆ ಮತ್ತೆ ಕ್ರಿಕೆಟ್‌ ಆಡಲು ಬಾಂಗ್ಲಾ ಪ್ರಧಾನಿಯಿಂದ ಮಾತುಕತೆ!
ಶ್ರೀಲಂಕಾ ವಿರುದ್ಧ 2-0 ಗೆಲುವು ಅನಿವಾರ್ಯ; ಭಾರತದ WTC ಫೈನಲ್‌ ಲೆಕ್ಕಾಚಾರ ಹೀಗಿದೆ