
ನವದೆಹಲಿ: ಭಾರತದ ಜೊತೆಗಿನ ಕ್ರಿಕೆಟ್ ಸಂಬಂಧ ಮರುಸ್ಥಾಪನೆಗೆ ಬಾಂಗ್ಲಾದೇಶ ಪ್ರಯತ್ನಿಸುತ್ತಿದ್ದು, ದ್ವಿಪಕ್ಷೀಯ ಸರಣಿ ಆಯೋಜನೆ ಬಗ್ಗೆ ಮಾತುಕತೆ ಆರಂಭಿಸಿದೆ. 2 ದೇಶಗಳ ನಡುವಿನ ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶದಿಂದ ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಅವರು ಭಾರತೀಯ ಹೈಕಮಿಷನರ್ ಜೊತೆ ಕುರಿತು ಮಾತುಕತೆ ನಡೆಸುತ್ತಿದ್ದಾರೆ ಎಂದು ಸ್ವತಃ ಬಾಂಗ್ಲಾದೇಶ ಕ್ರೀಡಾ ಸಚಿವ ಅಮೀನುಲ್ ಹಕ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ‘ಕ್ರಿಕೆಟ್ ಕುರಿತು ಮಾತುಕತೆ ನಡೆಯುತ್ತಿದೆ. ಕ್ರಿಕೆಟ್ ವಿಶ್ವಕಪ್‌ಗೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟನ್ನು ತ್ವರಿತವಾಗಿ ಬಗೆಹರಿಸಲು ನಾವು ಬಯಸುತ್ತೇವೆ. ಭಾರತೀಯ ಹೈಕಮಿಷನರ್ ಅವರು ಪ್ರಧಾನಿಯನ್ನು ಭೇಟಿಯಾಗಿದ್ದಾರೆ. ವಿದೇಶಾಂಗ ಸಚಿವರು ಮತ್ತು ರಾಜ್ಯ ಸಚಿವರೊಂದಿಗೂ ಮಾತುಕತೆ ನಡೆಸಲಾಯಿತು’ ಎಂದಿದ್ದಾರೆ.
ಭಾರತ ತಂಡ 2025ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಂಡು, 3 ಏಕದಿನ, 3 ಟಿ20 ಪಂದ್ಯಗಳನ್ನು ಆಡಬೇಕಿತ್ತು. ಆದರೆ ಅದೇ ವರ್ಷ ಜುಲೈನಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟ ಕಾರಣ ಸರಣಿ ಮುಂದೂಡಲಾಗಿತ್ತು. ಬಳಿಕ ಟಿ20 ವಿಶ್ವಕಪ್‌ನಲ್ಲಿ ಆಡುವುದಕ್ಕಾಗಿ ಬಾಂಗ್ಲಾ ತಂಡ ಭಾರತಕ್ಕೆ ಆಗಮಿಸಿರಲಿಲ್ಲ.
ದುಬೈ: 2027ರ ಏಕದಿನ ವಿಶ್ವಕಪ್‌ನ ಹೊಸ ಮಾದರಿಗೆ ನೆದರ್‌ಲೆಂಡ್ಸ್ ಹಾಗೂ ಸ್ಕಾಟ್ಲೆಂಡ್ ಕ್ರಿಕೆಟ್ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ. ವಿಶ್ವಕಪ್‌ನಲ್ಲಿ 14 ತಂಡಗಳು ಆಡಲಿದ್ದು, ಈ ಪೈಕಿ 12, 13 ಹಾಗೂ 14ನೇ ಸ್ಥಾನದಲ್ಲಿರುವ ತಂಡಗಳು ಕ್ವಾಲಿಫೈಯರ್‌ನಲ್ಲಿ ಆಡಬೇಕಾಗುತ್ತದೆ. ಇದರಲ್ಲಿ ಒಂದು ತಂಡ ಮಾತ್ರ ಮುಖ್ಯ ಸುತ್ತು ಪ್ರವೇಶಿಸಲಿದೆ. ಇದರ ಬಗ್ಗೆ ಸ್ಕಾಟ್ಲೆಂಡ್ ಹಾಗೂ ನೆದರ್‌ಲೆಂಡ್ಸ್ ಜಂಟಿ ಪ್ರಕಟನೆ ಮೂಲಕ ಆಕ್ಷೇಪಿಸಿದೆ. ಇದು ಅಸೋಸಿಯೇಟ್ ದೇಶಗಳ ಕ್ರಿಕೆಟ್‌ಗೆ ಮಾರಕವಾಗಲಿದೆ ಎಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.