ಅಬ್ಬರದ ಗೆಲುವಿನೊಂದಿಗೆ ಆರ್‌ಸಿಬಿ ಫೈನಲ್ ಪ್ರವೇಶದ ಹಿಂದಿದೆ ಉಪ್ಪು ಖಾರ ಹುಳಿ

Chethan Kumar   | Kannada Prabha
Published : May 30, 2025, 08:27 AM IST
Team RCB (Photo: @ipl/X)

ಸಾರಾಂಶ

ಪಂಜಾಬ್ ಕಿಂಗ್ಸ್ ಮಣಿಸಿದ ಆರ್‌ಸಿಬಿ ಫೈನಲ್ ಪ್ರವೇಶಿಸಿದೆ. ವಿಶೇಷ ಅಂದರೆ ಕ್ವಾಲಿಫೈಯರ್ 1 ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ಹಿಂದೆ ಉಪ್ಪು ಖಾರ ಹುಳಿ ಸೀಕ್ರೆಟ್ ಅಡಗಿದೆ.

ಮುಲ್ಲಾನ್‌ಪುರ(ಮೇ.30): ಆರ್‌ಸಿಬಿ ತನ್ನ 18 ವರ್ಷಗಳ ಕಪ್‌ ಗೆಲುವಿನ ಆಸೆ ಈಡೇರಿಸಲು ಇನ್ನೊಂದೇ ಮೆಟ್ಟಿಲು ಹತ್ತಬೇಕಿದೆ. ‘ಈ ಸಲ ಕಪ್‌ ನಮ್ದೇ’ ಎನ್ನುತ್ತಿದ್ದ ಅಭಿಮಾನಿಗಳ ಸುದೀರ್ಘ ಕಾಲದ ಕನಸು ನನಸಾಗಲು ಆರ್‌ಸಿಬಿ ಗೆಲ್ಲಬೇಕಿರುವುದು ಇನ್ನೊಂದು ಪಂದ್ಯ ಮಾತ್ರ. ಅದು ಈ ಬಾರಿಯ ಫೈನಲ್‌ ಪಂದ್ಯ. ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣಾಗಿದ್ದು ಉಪ್ಪು ಖಾರ ಹುಳಿ. ಹೌದು, ಆರ್‌ಸಿಬಿ ಸ್ಫೋಟಕ ಬ್ಯಾಟ್ಸಮನ್ ಸಾಲ್ಟ್ ಅಬ್ಬರದ ಬ್ಯಾಟಿಂಗ್ಪಂ ಜಾಬ್‌ಗೆ ಖಾರವಾದರು. ಇತ್ತ ಪಾಟೀದಾರ್ ಜೊತೆಯಾಟ, ಆರ್‌ಸಿಬಿ ಸಂಘಟಿತ ದಾಳಿ ಪಂಜಾಬ್ ತಂಡಕ್ಕೆ ಮೊದಲ ಕ್ವಾಲಿಫೈಯರ್ ಹುಳಿಯಾಯಿತು.

ಗುರುವಾರ ಚಂಡೀಗಢದ ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 8 ವಿಕೆಟ್‌ ಭರ್ಜರಿಯಾಗಿ ಗೆಲುವು ಸಾಧಿಸಿತು. ಟೂರ್ನಿಯುದ್ದಕ್ಕೂ ಆರ್‌ಸಿಬಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ, ಕ್ವಾಲಿಫೈಯರ್‌ನಲ್ಲಿ ಇಂಥಾ ಅದ್ಭುತ ಆಟ ನಿರೀಕ್ಷಿಸಿರಲ್ಲ. ಪಂಜಾಬ್‌ನಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ ಎಲ್ಲರ ಲೆಕ್ಕಾಚಾರ ಮೇಲಾಗುವಂತೆ ಮಾಡಿದ ಆರ್‌ಸಿಬಿ, ಅಧಿಕಾರಯುತ ಗೆಲುವಿನೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನಿಸಲ್ಪಟ್ಟ ಪಂಜಾಬ್‌ ಕಲೆಹಾಕಿದ್ದು ಕೇವಲ 101 ರನ್‌. ತಂಡ 14.1 ಓವರ್‌ಗಳಲ್ಲೇ ತನ್ನ ಗಂಟುಮೂಟೆ ಕಟ್ಟಿತು. ಈ ಮೊತ್ತ ಆರ್‌ಸಿಬಿಗೆ ಸುಲಭ ತುತ್ತಾಯಿತು. ಫಿಲ್ ಸಾಲ್ಟ್‌ ಸ್ಫೋಟಕ ಅರ್ಧಶತಕದ ನೆರವಿನಿಂದ ತಂಡ 10 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು.

ವಿರಾಟ್‌ ಕೊಹ್ಲಿ 12 ಎಸೆತಕ್ಕೆ 12 ರನ್‌ ಗಳಿಸಿ ಔಟಾದಾಗಲೇ ತಂಡದ ಸ್ಕೋರ್‌ 30 ಆಗಿತ್ತು. ಬಳಿಕ ಬಂದ ಮಯಾಂಕ್‌ ಅಗರ್‌ವಾಲ್‌ರನ್ನು ನ್ಯೂಜಿಲೆಂಡ್‌ನ ವೇಗಿ ಕೈಲ್‌ ಜೇಮಿಸನ್‌ ಕಾಡಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಕನ್ನಡಿಗ ಮಯಾಂಕ್‌ ಈ ಪಂದ್ಯದಲ್ಲಿ 19 ರನ್‌ಗೆ ಔಟಾದರು. ಆದರೆ ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಸಾಲ್ಟ್‌ ಕೇವಲ 23 ಎಸೆತಗಳಲ್ಲೇ ಅರ್ಧಶತಕ ಪೂರ್ಣಗೊಳಿಸಿದರು. ಅವರು 27 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 56 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು. 8 ಎಸೆತಕ್ಕೆ 15 ರನ್‌ ಗಳಿಸಿದ ನಾಯಕ ರಜತ್‌ ಪಾಟೀದಾರ್‌, ಸಿಕ್ಸರ್‌ನೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು.

ಪಂಜಾಬ್‌ ತತ್ತರ: ಇದಕ್ಕೂ ಮುನ್ನ ಮುಲ್ಲಾನ್‌ಪುರದಲ್ಲಿ ಪಂಜಾಬ್‌ ಅಕ್ಷರಶಃ ತತ್ತರಿಸಿತು. ತನ್ನದೇ ತವರು ಕ್ರೀಡಾಂಗಣವಾಗಿದ್ದರೂ ಆರ್‌ಸಿಬಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಲು ಪಂಜಾಬ್‌ ಬ್ಯಾಟರ್ಸ್‌ಗೆ ಸಾಧ್ಯವಾಗಲಿಲ್ಲ. 2ನೇ ಓವರ್‌ನಲ್ಲೇ ತಂಡದ ಪತನ ಆರಂಭಗೊಂಡಿತು. ಪ್ರಿಯಾನ್ಶ್‌ ಆರ್ಯ(7) ವಿಕೆಟ್‌ ಕಿತ್ತ ಯಶ್‌ ದಯಾಳ್‌ ಪಂಜಾಬ್‌ ಪತನಕ್ಕೆ ನಾಂದಿ ಹಾಡಿದರು. 6.3 ಓವರ್‌ಗಳಲ್ಲಿ 50 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಐವರನ್ನು ಕಳೆದುಕೊಂಡ ತಂಡ ಆ ಬಳಿಕವೂ ಚೇತರಿಸಿಕೊಳ್ಳಲಿಲ್ಲ. ಪ್ರಭ್‌ಸಿಮ್ರನ್‌ 18, ನಾಯಕ ಶ್ರೇಯಸ್‌ ಅಯ್ಯರ್ 2, ಜೋಶ್‌ ಇಂಗ್ಲಿಸ್‌ 4, ನೇಹಲ್‌ ವಧೇರಾ 8 ರನ್‌ಗೆ ವಿಕೆಟ್‌ ಒಪ್ಪಿಸಿದರು. ಈ ವೇಳೆ ತಂಡಕ್ಕೆ ಏಕೈಕ ಭರವಸೆಯಾಗಿದ್ದು ಮಾರ್ಕಸ್‌ ಸ್ಟೋಯ್ನಿಸ್‌. ಆದರೆ 11ನೇ ಓವರ್‌ನಲ್ಲಿ 8ನೇ ವಿಕೆಟ್‌ ರೂಪದಲ್ಲಿ ಅವರ ವಿಕೆಟ್‌ ಕೂಡಾ ಬೀಳುವುದರೊಂದಿಗೆ ತಂಡ ಸೋಲು ಖಚಿತಪಡಿಸಿಕೊಂಡಿತು. ಅವರು 17 ಎಸೆತಕ್ಕೆ 26 ರನ್‌ ಗಳಿಸಿದರು. ಕೊನೆಯಲ್ಲಿ ಅಜ್ಮತುಲ್ಲಾ ಓಮರ್‌ಜೈ 18 ರನ್‌ ಗಳಿಸಿ, ತಂಡವನ್ನು 100ರ ಗಡಿ ದಾಟಿಸಿದರು.

ಸುಯಶ್‌ ಶರ್ಮಾ 3 ಓವರ್‌ನಲ್ಲಿ 17 ರನ್‌ಗೆ 3 ವಿಕೆಟ್‌ ಕಿತ್ತರೆ, ಹೇಜಲ್‌ವುಡ್‌ 3.1 ಓವರ್‌ಗಳಲ್ಲಿ 21ಕ್ಕೆ 3 ವಿಕೆಟ್‌ ಪಡೆದರು. ಯಶ್‌ ದಯಾಳ್‌ 2, ಭುವನೇಶ್ವರ್‌ ಹಾಗೂ ಶೆಫರ್ಡ್‌ ತಲಾ 1 ವಿಕೆಟ್‌ ಕಿತ್ತರು.

ಸ್ಕೋರ್‌: ಪಂಜಾಬ್‌ ಕಿಂಗ್ಸ್‌ 14.1 ಓವರ್‌ನಲ್ಲಿ 101/10 (ಸ್ಟೋಯ್ನಿಸ್‌ 26, ಪ್ರಭ್‌ಸಿಮ್ರನ್‌ 18, ಅಜ್ಮತುಲ್ಲಾ 18, ಸುಯಶ್‌ 3-18, ಹೇಜಲ್‌ವುಡ್‌ 3-21), ಆರ್‌ಸಿಬಿ 10 ಓವರಲ್ಲಿ 106/2 (ಸಾಲ್ಟ್‌ ಔಟಾಗದೆ 56, ಮಯಾಂಕ್‌ 19, ಜೇಮಿಸನ್‌1-27)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌