ವಿರಾಟ್ ಕೊಹ್ಲಿಯನ್ನು ನಾಯಕತ್ವದ ಕೆಳಗಿಳಿಸಿದ್ದರ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ರವಿಶಾಸ್ತ್ರಿ..!

By Suvarna NewsFirst Published Dec 27, 2021, 9:23 AM IST
Highlights

* ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ನಡುವಿನ ಮುಸುಕಿನ ಗುದ್ದಾಟದ ಬಗ್ಗೆ ಮಾತನಾಡಿದ ಮಾಜಿ ಕೋಚ್ ರವಿಶಾಸ್ತ್ರಿ

* ಈ ವಿಚಾರವನ್ನು ಬಿಸಿಸಿಐ ಇನ್ನೂ ಚೆನ್ನಾಗಿ ನಿಭಾಯಿಸಬಹುದಿತ್ತು ಎಂದು ಮಾಜಿ ಕೋಚ್

* ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಒಳ್ಳೆಯದೇ ಆಗಿದೆ ಎಂದ ರವಿಶಾಸ್ತ್ರಿ

ನವದೆಹಲಿ(ಡಿ.27): ದಕ್ಷಿಣ ಆಫ್ರಿಕಾ ವಿರುದ್ದದ ಪ್ರವಾಸಕ್ಕೂ (India Tour of South Africa) ಮುನ್ನ ವಿರಾಟ್ ಕೊಹ್ಲಿ (Virat Kohli) ಅವರನ್ನು ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಸಿ, ರೋಹಿತ್ ಶರ್ಮಾ (Rohit Sharma) ಅವರಿಗೆ ಸೀಮಿತ ಓವರ್‌ಗಳ ತಂಡದ ನಾಯಕ ಪಟ್ಟ ನೀಡಲಾಗಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಇದೇ ಮೊದಲ ಬಾರಿಗೆ ಈ ಬೆಳವಣಿಗೆಯ ಕುರಿತಂತೆ ತುಟಿಬಿಚ್ಚಿದ್ದಾರೆ. ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡಿದ್ದರಿಂದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಇಬ್ಬರಿಗೂ ಒಳ್ಳೆದಾಗಲಿದೆ ಎಂದು ಭಾರತದ ಮಾಜಿ ಕೋಚ್‌ ರವಿಶಾಸ್ತ್ರಿ(Ravi Shastri) ಹೇಳಿದ್ದಾರೆ.

ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ಗೂ ಮುನ್ನ ಸ್ಟಾರ್‌ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಅವರು, ‘ಕೋವಿಡ್‌ ಬಯೋಬಬಲ್‌ನಲ್ಲಿದ್ದುಕೊಂಡು ಆಡುವಾಗ ಒಬ್ಬನೇ ಆಟಗಾರ ಮೂರೂ ತಂಡಗಳನ್ನು ಮುನ್ನಡೆಸುವುದು ಕಷ್ಟ. ಹೀಗಾಗಿ ಕೊಹ್ಲಿ ಟಿ20, ಏಕದಿನ ತಂಡದ ನಾಯಕತ್ವ ಬಿಟ್ಟಿದ್ದು ಒಳ್ಳೆಯದ್ದೆ ಆಯಿತು. ಇನ್ನು ರೋಹಿತ್‌ಗೆ ಟಿ20, ಏಕದಿನ ವಿಶ್ವಕಪ್‌ಗಳಿಗೆ ಸಿದ್ಧತೆ ನಡೆಸಲು ಸಮಯ ಸಿಗಲಿದೆ’ ಎಂದಿದ್ದಾರೆ.

ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯು ಮುಕ್ತಾಯವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ, ಈ ಮೊದಲೇ ಘೋಷಿಸಿದಂತೆ ಭಾರತ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. ಆದರೆ ಈ ಮೊದಲೇ ಘೋಷಿಸಿದಂತೆ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕರಾಗಿ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದರು. ಇದೆಲ್ಲದರ ನಡುವೆ ಅಚ್ಚರಿಯ ಬೆಳವಣಿಗೆ ಎನ್ನುವಂತೆ ಭಾರತೀಯ ಆಯ್ಕೆ ಸಮಿತಿಯು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡುವಾಗ, ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾಗೆ ಸೀಮಿತ ಓವರ್‌ಗಳ ತಂಡದ ನಾಯಕ ಪಟ್ಟ ಕಟ್ಟಲಾಯಿತು. ಸೀಮಿತ ಓವರ್‌ಗಳ ಕ್ರಿಕೆಟ್‌ನ ಎರಡು ಮಾದರಿಗೆ ಇಬ್ಬರು ನಾಯಕರು ಇರುವುದು ಸೂಕ್ತವಲ್ಲ ಎನ್ನುವ ನಿರ್ಧಾರಕ್ಕೆ ಬಂದು ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು.

ಇದೀಗ ಈ ಬೆಳವಣಿಯ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, ವಿರಾಟ್ ಕೊಹ್ಲಿ ಇದೀಗ ರೆಡ್‌ ಬಾಲ್‌ ಕ್ರಿಕೆಟ್‌ನತ್ತ ಮತ್ತಷ್ಟು ಗಮನ ಹರಿಸಲು ಸಮಯಾವಕಾಶ ಸಿಗಲಿದೆ. ಇದರ ಜತೆಗೆ ಅವರಿಂದ ಎಷ್ಟು ವರ್ಷ ಸಾಧ್ಯವೋ ಅಷ್ಟು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡವನ್ನು ಮುಂದುವರೆಸಲು ಅವಕಾಶ ಸಿಗಲಿದೆ. ಇನ್ನೂ ವಿರಾಟ್ ಕೊಹ್ಲಿ ಅವರಲ್ಲಿ ಐದರಿಂದ ಆರು ವರ್ಷಗಳ ಕ್ರಿಕೆಟ್ ಬಾಕಿ ಇದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾ ಭವಿಷ್ಯದ 2 ನಾಯಕರನ್ನು ಹೆಸರಿಸಿದ ಮಾಜಿ ಕೋಚ್ ರವಿಶಾಸ್ತ್ರಿ

ಈ ಮೊದಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly), ತಾವು ವಿರಾಟ್ ಕೊಹ್ಲಿ ಅವರನ್ನು ಟಿ20 ನಾಯಕತ್ವದಿಂದ ಕೆಳಗಿಳಿಯದಂತೆ ಮನವೊಲಿಸಿದ್ದಾಗಿ ತಿಳಿಸಿದ್ದರು. ಇದಾದ ಬಳಿಕ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ್ದ ಕೊಹ್ಲಿ, ಟಿ20 ನಾಯಕತ್ವದಿಂದ ಕೆಳಗಿಳಿಯುವುದು ನನ್ನ ಸ್ವಂತ ನಿರ್ಧಾರವಾಗಿತ್ತು. ಇದಾದ ಬಳಿಕ ಯಾರೂ ನನ್ನ ಬಳಿ ಮಾತುಕತೆ ನಡೆಸಿರಲಿಲ್ಲ ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದರು. 

ಈ ಬಗ್ಗೆ ಮಾತನಾಡಿರುವ ಶಾಸ್ತ್ರಿ, ಉತ್ತಮ ಕಮ್ಯುನಿಕೇಷನ್ ಇದ್ದರೆ ಹೀಗಾಗುತ್ತಿರಲಿಲ್ಲ ಎಂದಿದ್ದಾರೆ. ವಿರಾಟ್ ಕೊಹ್ಲಿ ಕೊಹ್ಲಿ ತಮಗನಿಸಿದ್ದನ್ನು ಹೇಳಿದ್ದಾರೆ. ಇದರ ಬಗ್ಗೆ ಬಿಸಿಸಿಐ ಅಧ್ಯಕ್ಷರು ತಮ್ಮ ಸ್ಟೋರಿ ಹೇಳಬೇಕಿತ್ತು. ಒಳ್ಳೆಯ ಕಮ್ಯುನಿಕೇಷನ್ ಇದ್ದಿದ್ದರೆ, ಈ ವಿಚಾರವನ್ನು ಇನ್ನೂ ಉತ್ತಮವಾಗಿ ನಿಭಾಯಿಸಬಹುದಾಗಿತ್ತು ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. 

click me!