Sports Icon: ಕ್ರಿಕೆಟಿಗ ಸುರೇಶ್‌ ರೈನಾಗೆ ಒಲಿದ ಮಾಲ್ಡೀವ್ಸ್‌ನ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ

Suvarna News   | Asianet News
Published : Mar 20, 2022, 09:54 AM IST
Sports Icon:  ಕ್ರಿಕೆಟಿಗ ಸುರೇಶ್‌ ರೈನಾಗೆ ಒಲಿದ ಮಾಲ್ಡೀವ್ಸ್‌ನ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ

ಸಾರಾಂಶ

* ಸುರೇಶ್ ರೈನಾಗೆ ಒಲಿದ ಸ್ಪೋರ್ಟ್ಸ್ ಐಕಾನ್ ಪ್ರಶಸ್ತಿ * ಮಾಲ್ಡೀವ್ಸ್ ಸರ್ಕಾರದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ ಸುರೇಶ್ ರೈನಾ ಪಾಲು * ಸಿಎಸ್‌ಕೆ ತಂಡವು 4 ಐಪಿಎಲ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರೈನಾ

ಮಾಲ್ಡೀವ್ಸ್‌(ಮಾ.20): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ (Suresh Raina) ಅವರಿಗೆ ಮಾಲ್ಡೀವ್ಸ್ ಸರ್ಕಾರವು ನೀಡುವ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಯಾದ 2022ನೇ ಸಾಲಿನ 'ಸ್ಪೋರ್ಟ್ಸ್‌ ಐಕಾನ್' (Sports Icon) ಪ್ರಶಸ್ತಿ ನೀಡಿ ಗೌರವಿಸಿದೆ. ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 16 ಕ್ರೀಡಾಪಟುಗಳ ಹೆಸರನ್ನು ನಾಮನಿರ್ದೇಶನ ಮಾಡಲಾಗಿತ್ತು. ಈ ಪೈಕಿ ಸುರೇಶ್ ರೈನಾಗೆ ಮಾಲ್ಡೀವ್ಸ್‌ನ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

2022ನೇ ಸಾಲಿನ ಮಾಲ್ಡೀವ್ಸ್‌ನ 'ಸ್ಪೋರ್ಟ್ಸ್‌ ಐಕಾನ್' ಪ್ರಶಸ್ತಿಗೆ ಮಾಜಿ ರಿಯಲ್ ಮ್ಯಾಡ್ರೀಡ್‌ ಹಾಗೂ ಬ್ರೆಜಿಲ್ ಫುಟ್ಬಾಲ್ ಆಟಗಾರ ರೊಬೆರ್ಟೊ ಕಾರ್ಲೋಸ್, ಜಮೈಕಾದ ವೇಗಿ ಆಸ್ಫಾ ಪೋವೆಲ್, ಶ್ರೀಲಂಕಾದ ಮಾಜಿ ಕ್ರಿಕೆಟ್ ನಾಯಕ ಸನತ್ ಜಯಸೂರ್ಯ, ಡಚ್ ಫುಟ್ಬಾಲ್ ದಂತಕಥೆ ಎಡ್ಗಾರ್ ಡೇವಿಸ್ ಸೇರಿದಂತೆ ಒಟ್ಟು 16 ಕ್ರೀಡಾಪಟುಗಳು ಪ್ರತಿಷ್ಠಿತ ಪ್ರಶಸ್ತಿಗೆ ನಾಮ ನಿರ್ಧೇಶನ ಮಾಡಲಾಗಿತ್ತು. ಈ ಪೈಕಿ 'ಸ್ಪೋರ್ಟ್ಸ್‌ ಐಕಾನ್' ಪ್ರಶಸ್ತಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ಪಾಲಾಗಿದೆ.

35 ವರ್ಷದ ಸುರೇಶ್ ರೈನಾ ಅವರಿಗೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಅವರ ಸಾಧನೆಯ ಚಿತ್ರಣವನ್ನು ಮೆಲುಕು ಹಾಕಲಾಯಿತು. ಸುರೇಶ್ ರೈನಾ ಅವರ ಜತೆ ಬಾಂಗ್ಲಾದೇಶದ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಮೊಹಮ್ಮದ್ ಜಾಹಿರ್ ಆಶಾನ್ ರಸೆಲ್, ಸೌದಿ ಅರೆಬಿಯಾದ ಕ್ರೀಡಾ ಖಾತೆಯ ಕ್ರೀಡಾ ಉಪಮಂತ್ರಿ ಅಲ್-ಕಡಿ ಅಬ್ದುಲ್ ರೆಹಮಾನ್, ಮಾಲ್ಡೀವ್ಸ್‌ ಟೆನಿಸ್ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಅಹಮದ್ ನಜೀರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಲ್ಡೀವ್ಸ್‌ನ ಪ್ರಧಾನಿ ಇಬ್ರಾಹಿಂ ಮೊಹಮದ್ ಸೊಲೈ, ಕ್ರೀಡಾ ಸಚಿವರು ಹಾಗೂ ಮಾಲ್ಡೀವ್ಸ್‌ನ ಖ್ಯಾತ ಅಥ್ಲೀಟ್‌ಗಳು ಹಾಜರಿದ್ದರು.

IPL 2022: ಸುರೇಶ್ ರೈನಾ ಖರೀದಿಸುವಂತೆ ಗುಜರಾತ್‌ ಟೈಟಾನ್ಸ್‌ಗೆ ಫ್ಯಾನ್ಸ್‌ ಆಗ್ರಹ..!

ದಶಕಗಳ ಕಾಲ ಸುರೇಶ್ ರೈನಾ ಟೀಂ ಇಂಡಿಯಾದ (Team India) ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ರೈನಾ, ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ಟೀಂ ಇಂಡಿಯಾದ ಹಲವು ಸ್ಮರಣೀಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಷ್ಟೇ ಅಲ್ಲದೇ ಮಿಸ್ಟರ್ ಐಪಿಎಲ್ ಎಂದೇ ಹೆಸರು ಗಳಿಸಿರುವ ರೈನಾ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 4 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸುರೇಶ್ ರೈನಾ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 8,000 ರನ್ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಇದಷ್ಟೇ ಅಲ್ಲದೇ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿರುವ ಐಪಿಎಲ್‌ನಲ್ಲಿ 5,000 ರನ್ ಬಾರಿಸಿದ ಮೊದಲ ಕ್ರಿಕೆಟಿಗ ಎನಿಸಿದ್ದಾರೆ. ಇದರ ಜತೆಗೆ ಟಿ20 ಚಾಂಪಿಯನ್ಸ್‌ ಲೀಗ್‌ನಲ್ಲಿ ಅತಿಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟರ್ ಎನ್ನುವ ಹಿರಿಮೆ ಕೂಡಾ ಸುರೇಶ್ ರೈನಾ ಜತೆಗಿದೆ.

ಇದೇ ಮೊದಲ ಬಾರಿಗೆ ಐಪಿಎಲ್‌ ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿರುವ ರೈನಾ

ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಆಟಗಾರರ ಮೆಗಾ ಹರಾಜಿನಲ್ಲಿ (IPL Mega Auction) ಮಿಸ್ಟರ್ ಐಪಿಎಲ್‌ ಖ್ಯಾತಿಯ ಸುರೇಶ್ ರೈನಾ ಅನ್‌ಸೋಲ್ಡ್‌ ಆಗಿದ್ದರು. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಸುರೇಶ್ ರೈನಾ ಅವರನ್ನು ಖರೀದಿಸಲು ಯಾವೊಂದು ಫ್ರಾಂಚೈಸಿಯು ಒಲವು ತೋರಿರಲಿಲ್ಲ. ಇದೀಗ ಸುರೇಶ್ ರೈನಾ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರವಿಶಾಸ್ತ್ರಿ ಜತೆ ಹಿಂದಿ ಕಾಮೆಂಟ್ರಿ ಮಾಡಲಿದ್ದಾರೆ ಎಂದು ವರದಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?