8 ವರ್ಷಗಳ ಬಳಿಕ ಏಷ್ಯಾಕಪ್ ಗೆದ್ದ ಲಂಕಾಗೆ ಜೈ ಹೋ ಎಂದ ಗೌತಮ್ ಗಂಭೀರ್..!

By Naveen Kodase  |  First Published Sep 12, 2022, 12:35 PM IST

* ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಶ್ರೀಲಂಕಾ
* ಪಾಕಿಸ್ತಾನ ಎದುರು ಏಷ್ಯಾಕಪ್ ಫೈನಲ್‌ನಲ್ಲಿ ಲಂಕಾಗೆ 23 ರನ್‌ಗಳ ಜಯ
* ಶ್ರೀಲಂಕಾ ಕ್ರಿಕೆಟ್ ತಂಡದ ಪ್ರದರ್ಶನ ಕೊಂಡಾಡಿದ ಗೌತಮ್ ಗಂಭೀರ್


ದುಬೈ(ಸೆ.12): 2022ನೇ ಸಾಲಿನ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಬಲಿಷ್ಠ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಬಗ್ಗುಬಡಿದ ಶ್ರೀಲಂಕಾ ಕ್ರಿಕೆಟ್ ತಂಡವು ಆರನೇ ಬಾರಿಗೆ ಏಷ್ಯಾ ಕ್ರಿಕೆಟ್‌ ಸಾಮ್ರಾಟನಾಗಿ ಹೊರಹೊಮ್ಮಿದೆ. ಏಷ್ಯಾಕಪ್ ಟೂರ್ನಿಗೂ ಮುನ್ನ ಅಂಡರ್ ಡಾಗ್ ಆಗಿ ಗುರುತಿಸಿಕೊಂಡಿದ್ದ ಶ್ರೀಲಂಕಾ ತಂಡವು, ಮೊದಲ ಪಂದ್ಯದಲ್ಲೇ ಆಫ್ಘಾನಿಸ್ತಾನ ಎದುರು ರೋಚಕ ಸೋಲು ಅನುಭವಿಸಿತ್ತು. ಇದಾದ ಬಳಿಕ ಮೈಕೊಡುವಿಕೊಂಡು ಎದ್ದು ನಿಂತ ದಶುನ್ ಶನಕಾ ನೇತೃತ್ವದ ಶ್ರೀಲಂಕಾ ತಂಡವು ಸತತ 5 ಪಂದ್ಯಗಳನ್ನು ಜಯಿಸುವ ಮೂಲಕ ಏಷ್ಯಾಕಪ್ ಟ್ರೋಫಿಗೆ ಮುತ್ತಿಕ್ಕಿದೆ. ಇದರ ಜತೆಗೆ ಬರೋಬ್ಬರಿ 8 ವರ್ಷಗಳ ಬಳಿಕ ಏಷ್ಯಾಕಪ್ ಟ್ರೋಫಿ ಜಯಿಸುವಲ್ಲಿ ಲಂಕಾ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಶ್ರೀಲಂಕಾ ತಂಡದ ಪ್ರದರ್ಶನವನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಎದುರು ಶ್ರೀಲಂಕಾ ಕ್ರಿಕೆಟ್ ತಂಡವು 23 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ ಗಂಭೀರ್, ದ್ವೀಪ ರಾಷ್ಟ್ರ ತಂಡದ ಪ್ರದರ್ಶನವನ್ನು ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

Tap to resize

Latest Videos

ಶ್ರೀಲಂಕಾ ದೇಶವು ಒಂದು ಕಡೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ. ಲಂಕಾ ತಂಡವು ಹಲವು ಅಡ್ಡಿ ಆತಂಕಗಳನ್ನು ಮೆಟ್ಟಿನಿಂತು ಏಷ್ಯಾಕಪ್ ಸಾಮ್ರಾಟನಾಗಿ ಬೆಳೆದಿದೆ. ಇದೀಗ ಗೌತಮ್ ಗಂಭೀರ್, ಸೂಪರ್‌ಸ್ಟಾರ್ ತಂಡ. ನಿಜಕ್ಕೂ ಚಾಂಪಿಯನ್ ಪಟ್ಟಕ್ಕೆ ಅರ್ಹವಾದ ತಂಡ. ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಎಂದು ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.

Superstar team…Truly deserving!! pic.twitter.com/mVshOmhzhe

— Gautam Gambhir (@GautamGambhir)

ಏಷ್ಯಾಕಪ್ ಫೈನಲ್‌ನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೀಲಂಕಾ ತಂಡವು, ಪಾಕ್‌ ವೇಗಿಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 23 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದಾದ ಬಳಿಕವೂ ನಿರಂತರ ವಿಕೆಟ್ ಕಳೆದುಕೊಂಡು ಸಾಗಿದ ಲಂಕಾ 58 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ 6ನೇ ವಿಕೆಟ್‌ಗೆ ಭನುಕಾ ರಾಜಪಕ್ಸಾ ಹಾಗೂ ವನಿಂದು ಹಸರಂಗ ಆಕರ್ಷಕ ಜತೆಯಾಟವಾಡುವ ಮೂಲಕ ಲಂಕಾ ತಂಡವು 170 ರನ್ ಕಲೆಹಾಕಲು ನೆರವಾದರು.

Asia Cup ಟೂರ್ನಿಯಲ್ಲಿ ಬಾಬರ್ ಅಜಂ ಫೇಲ್, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌..!

ಇನ್ನು ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡಕ್ಕೆ ಪ್ರಮೋದ್ ಮದುಶನ್, ವನಿಂದು ಹಸರಂಗ ಹಾಗೂ ಚಮಿಕಾ ಕರುಣರತ್ನೆ ನಿರಂತರ ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ತಂಡವನ್ನು ಸೋಲಿನ ಪ್ರಪಾತಕ್ಕೆ ತಳ್ಳಿದರು. ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್‌, ಅರ್ಧಶತಕ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಯಶಸ್ವಿಯಾಗಲಿಲ್ಲ.

ಶ್ರೀಲಂಕಾ ಕ್ರಿಕೆಟ್ ತಂಡವು 8 ವರ್ಷಗಳ ಹಿಂದೆ, ಅಂದರೆ 2014ರಲ್ಲಿ ಕೊನೆಯ ಬಾರಿಗೆ ಏಷ್ಯಾಕಪ್ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಲಂಕಾ ತಂಡಕ್ಕೆ ಏಷ್ಯಾಕಪ್ ಸೇರಿದಂತೆ ಯಾವುದೇ ಮಹತ್ವದ ಕ್ರಿಕೆಟ್ ಟೂರ್ನಿ ಜಯಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಬರೋಬ್ಬರಿ 8 ವರ್ಷಗಳ ಬಳಿಕ ಹಲವು ಅಡೆತಡೆಗಳನ್ನು ಮೀರಿ ನಿಂತು ಲಂಕಾ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 

click me!