ನಿವೃತ್ತಿಯಿಂದ ಕಮ್‌ಬ್ಯಾಕ್: ಕೊನೆಗೂ ಮೌನ ಮುರಿದ ಎಬಿಡಿ..!

By Suvarna NewsFirst Published Mar 20, 2020, 3:48 PM IST
Highlights

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ವಿಚಾರದಲ್ಲಿ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಮೌನ ಮುರಿದಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ. 

ಜೊಹಾನ್ಸ್‌ಬರ್ಗ್(ಮಾ.20): ದಕ್ಷಿಣ ಆಫ್ರಿಕಾದ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ 2018ರಲ್ಲಿ ಅನಿರೀಕ್ಷಿತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದಾಗ ಇಡೀ ಜಗತ್ತೇ ಆಶ್ಚರ್ಯಚಕಿತವಾಗಿತ್ತು. ಹರಿಣಗಳ ಪಡೆಯ ಅನುಭವಿ ಆಟಗಾರರರಾದ ಇಮ್ರಾನ್ ತಾಹಿರ್, ಹಾಶೀಂ ಆಮ್ಲಾ, ಜೆಪಿ ಡುಮಿನಿ ಹೀಗೆ ಒಬ್ಬರ ಹಿಂದೆ ಒಬ್ಬರು ವಿದಾಯ ಹೇಳಿದರು. ಆದರೆ ಎಬಿಡಿ ನಿವೃತ್ತಿ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿತ್ತು. ಇದೀಗ ನಿವೃತ್ತಿಯಿಂದ ಎಬಿಡಿ ಕಮ್‌ಬ್ಯಾಕ್ ಮಾಡುವ ವಿಚಾರದಲ್ಲಿ ಕೊನೆಗೂ ಮೌನ ಮುರಿದಿದ್ದಾರೆ.

2019-20ನೇ ಆವೃತ್ತಿಯ ಬಿಗ್‌ ಬ್ಯಾಶ್ ಲೀಗ್‌ನಲ್ಲಿ ಪಾಲ್ಗೊಂಡಿದ್ದ ಎಬಿಡಿ ಅಂರಾತಾಷ್ಟ್ರೀಯ ಕ್ರಿಕೆಟ್‌ಗೆ ಕಮ್ ಬ್ಯಾಕ್ ಮಾಡುವ ವಿಚಾರದ ಬಗ್ಗೆ ತುಟಿಬಿಚ್ಚಿದ್ದರು. ಇದಾದ ಬಳಿಕ ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಮಾರ್ಕ್ ಬೌಷರ್ ಸಹಾ ಎಬಿಡಿ ತಂಡಕ್ಕೆ ಕಮ್‌ಬ್ಯಾಕ್ ಮಾಡುವುದು ಒಳೆತೆಂದು ಮುಕ್ತವಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇನ್ನು ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡಾ 2020ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎಬಿಡಿ ಆಡಲಿ ಎಂದು ಹೇಳಿದ್ದರು.

IPL ಟಾಪ್ 10 ಗರಿಷ್ಠ ರನ್ ಸರದಾರರು: ಈ ಪಟ್ಟಿಯಲ್ಲಿದ್ದಾರೆ ಏಕೈಕ ಕನ್ನಡಿಗ

ಆಸ್ಟ್ರೇಲಿಯಾ ವಿರುದ್ದ ತವರಿನಲ್ಲಿ ಎಬಿ ಡಿವಿಲಿಯರ್ಸ್ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಆ ನಿರೀಕ್ಷೆ ಸುಳ್ಳಾಗಿತ್ತು. ಇನ್ನು ಐಪಿಎಲ್ ಟೂರ್ನಿ ಬಳಿಕ ಎಬಿಡಿ ತಂಡ ಕೂಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಕೊರೋನಾ ಭೀತಿಯಿಂದಾಗಿ ಐಪಿಎಲ್ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಎಬಿಡಿ ಇದೀಗ ತಮ್ಮ ಕ್ರಿಕೆಟ್ ಭವಿಷ್ಯದ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.

ಎಬಿ ಡಿವಿಲಿಯರ್ಸ್‌ಗೆ ಮಿ.360 ಎಂದು ಕರೆಯೋದೇಕೆ..?

'ಏನಾಗುತ್ತೋ ನೋಡೋಣ, ಸದ್ಯಕ್ಕೆ ನನ್ನ ಗಮನ ಏನಿದ್ದರೂ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಲ ತುಂಬಬೇಕಿದೆ. ಇದಾದ ಬಳಿಕ ಆ ಬಳಿಕ ನನ್ನಿಂದ ಏನು ಮಾಡಲು ಸಾಧ್ಯ ಎನ್ನುವುದನ್ನು ಯೋಚಿಸುತ್ತೇನೆ' ಎಂದಿದ್ದಾರೆ.

ಈ ಮೂಲಕ ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ವಿಚಾರದಲ್ಲಿ ಆತುರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. 36 ವರ್ಷದ ಎಬಿಡಿ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್‌ ಬೈ ಹೇಳಿದ್ದರಾದರೂ, 2019ರಲ್ಲಿ ನಿವೃತ್ತಿ ವಾಪಾಸ್ ಪಡೆದು ಏಕದಿನ ವಿಶ್ವಕಪ್‌ ಟೂರ್ನಿಗೆ ತಂಡ ಕೂಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಎಬಿಡಿಗೆ ತಂಡದಲ್ಲಿ ಅವಕಾಶ ನೀಡಿರಲಿಲ್ಲ. ಪರಿಣಾಮ ಹರಿಣಗಳ ಪಡೆ ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು. 
 

click me!