
ನವದೆಹಲಿ(ಜೂ.11): ಕಳೆದ ವರ್ಷ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಲೀಗ್ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿತ್ತು. ಇದೀಗ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿದೆ. ಇದೆಲ್ಲದರ ನಡುವೆ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ತೋರಿದ ಜಮ್ಮು ಮೂಲದ ವೇಗಿ ಉಮ್ರಾನ್ ಮಲಿಕ್ (Umran Malik) ಬಗ್ಗೆ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಪರ ಉಮ್ರಾನ್ ಮಲಿಕ್ ಸರಾಸರಿ 150+ ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ತಬ್ಬಿಬ್ಬು ಮಾಡಿದ್ದರು. ಆರೆಂಜ್ ಆರ್ಮಿ ಪರ ಉಮ್ರಾನ್ ಮಲಿಕ್ 14 ಪಂದ್ಯಗಳನ್ನಾಡಿ 22 ವಿಕೆಟ್ ಪಡೆದಿದ್ದರು. ಗ್ರೂಪ್ ಹಂತದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ಎದುರು ಉಮ್ರಾನ್ ಮಲಿಕ್ ಕೇವಲ 25 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ದಕ್ಷಿಣ ಆಫ್ರಿಕಾ ದಿಗ್ಗಜ ವೇಗಿ ಡೇಲ್ ಸ್ಟೇನ್ ಗರಡಿಯಲ್ಲಿ ಪಳಗಿದ ಉಮ್ರಾನ್ ಮಲಿಕ್ 163.7 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಮಿಂಚಿದ್ದರು. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಉಮ್ರಾನ್ ಮಲಿಕ್ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri), ಉಮ್ರಾನ್ ಮಲಿಕ್ ಅವರನ್ನು ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಬಾರದು ಎಂದು ಹೇಳಿದ್ದಾರೆ.
ಉಮ್ರಾನ್ ಮಲಿಕ್ ಅವರಿಗೆ ಈಗಲೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿಸಬಾರದು. ವಿಶ್ವಕಪ್ ಟೂರ್ನಿಗೂ ಮುನ್ನ ಅವರು ಸೀಮಿತ ಓವರ್‌ಗಳ ಸರಣಿ ಅದರಲ್ಲೂ 50 ಓವರ್‌ಗಳ ಪಂದ್ಯಗಳನ್ನಾಡಬೇಕು. ಇದರ ಜತೆಗೆ ರೆಡ್ ಬಾಲ್ ಪಂದ್ಯಗಳನ್ನಾಡಬೇಕು. ರೆಡ್ ಬಾಲ್ ಕ್ರಿಕೆಟ್ ಆಡಿ ಅವರು ಬೆಳೆಯಬೇಕು. ಆ ಬಳಿಕ ಅವರ ಪ್ರದರ್ಶನವನ್ನು ನೋಡಿ ತೀರ್ಮಾನಿಸಬೇಕು ಎಂದು ESPN Cricinfo ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ICC T20 World Cup ಟೂರ್ನಿಗೂ ಮುನ್ನ ಆಸೀಸ್ ಎದುರು ಟಿ20 ಸರಣಿಯಾಡಲಿದೆ ಟೀಂ ಇಂಡಿಯಾ
ದಕ್ಷಿಣ ಆಫ್ರಿಕಾ ಎದುರು ಆಘಾತಕಾರಿ ಸೋಲು ಕಂಡ ಟೀಂ ಇಂಡಿಯಾ
ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಟಿ20 ಸರಣಿಗೆ ಉಮ್ರಾನ್ ಮಲಿಕ್ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಸಹಾ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಬಾರಿಸಿದ ಸ್ಪೋಟಕ ಅರ್ಧಶತಕದ ನೆರವಿನಿಂದ 4 ವಿಕೆಟ್ ಕಳೆದುಕೊಂಡು 211 ರನ್ ಬಾರಿಸಿತ್ತು. ಈ ಗುರಿಯನ್ನು ರಕ್ಷಿಸಿಕೊಳ್ಳಲು ಟೀಂ ಇಂಡಿಯಾ ವಿಫಲವಾಗಿತ್ತು. ಇದೀಗ ಎರಡನೇ ಟಿ20 ಪಂದ್ಯವು ಜೂನ್ 12ರಂದು ಕಟಕ್‌ನ ಬಾರಬತಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಉಮ್ರಾನ್ ಮಲಿಕ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.