ಭರ್ಜರಿಯಾಗಿ ಸಾಗುತ್ತಿದೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿ
ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಚುಟುಕು ಕ್ರಿಕೆಟ್ ಮಹಾಸಂಗ್ರಾಮ
ಬ್ರೇಕಿಂಗ್ ನ್ಯೂಸ್ ಶೈಲಿಯಲ್ಲಿ ಅಭಿಮಾನಿಗಳ ಮುಂದೆ ಬಂದ ದಾನೀಶ್ ಸೇಠ್
ಮೆಲ್ಬರ್ನ್(ಅ.20): ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾದಲ್ಲಿ ಭರ್ಜರಿ ಚಾಲನೆ ಸಿಕ್ಕಿದೆ. ಈಗಾಗಲೇ ಕಾಂಗರೂ ನಾಡಿನಲ್ಲಿ ಹಲವು ರೋಚಕ ಹಾಗೂ ನಾಟಕೀಯ ಪಂದ್ಯಗಳಿಗೆ ಸಾಕ್ಷಿಯಾಗಿವೆ. ಮೊದಲಿಗೆ ಕ್ರಿಕೆಟ್ ಶಿಶು ನಮೀಬಿಯಾ ತಂಡವು ಲಂಕಾಗೆ ಆಘಾತಕಾರಿ ಸೋಲುಣಿಸಿದರೆ, ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಸ್ಕಾಟ್ಲೆಂಡ್ 42 ರನ್‌ಗಳ ಅಂತರದಲ್ಲಿ ಮಣಿಸಿ ಗೆಲುವಿನ ಕೇಕೆ ಹಾಕಿತ್ತು. ಈ ರೀತಿಯ ಡ್ರಾಮಾಗಳು ಮೈದಾನದೊಳಗೆ ನಡೆಯುತ್ತಿದ್ದರೆ, ಮೈದಾನದಾಚೆಗೆ ಖ್ಯಾತ ನಿರೂಪಕ, ಕಾಮಿಡಿಯನ್ ದಾನೀಶ್ ಸೇಠ್, ಟಿ20 ವಿಶ್ವಕಪ್ ಟೂರ್ನಿಯ ಮನರಂಜನೆಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ. ವಿಚಿತ್ರ ಶೈಲಿಯಲ್ಲಿ ವಿವಿಧ ದೇಶಗಳ ಆಟಗಾರರನ್ನು ಬೇಟಿ ಮಾಡಿ 'ಬ್ರೇಕಿಂಗ್ ನ್ಯೂಸ್' ಶೈಲಿಯಲ್ಲಿ ಮಾತುಕತೆ ನಡೆಸಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಾನೀಶ್ ಸೇಠ್, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಶಕೀಬ್ ಅಲ್ ಹಸನ್, ಸೂರ್ಯಕುಮಾರ್ ಯಾದವ್, ಶಾಹೀನ್ ಅಫ್ರಿದಿ ಸೇರಿದಂತೆ ಹಲವು ತಾರಾ ಕ್ರಿಕೆಟಿಗರನ್ನು ಬ್ರೇಕಿಂಗ್ ನ್ಯೂಸ್ ಶೈಲಿಯಲ್ಲಿ ಮಾತನಾಡಿಸಿ ಗಮನ ಸೆಳೆದಿದ್ದಾರೆ. ಇವುಗಳ ಪೈಕಿ ವಿರಾಟ್ ಕೊಹ್ಲಿಗೆ, ಸೇಠ್ ಕೇಳಿದ ಪ್ರಶ್ನೆಯೀಗ ಸಾಕಷ್ಟು ವೈರಲ್ ಆಗಿದೆ.
undefined
ವಿರಾಟ್ ನಾನು ಆಸ್ಟ್ರೇಲಿಯಾದಲ್ಲಿ ಆಪ್ ಸ್ಟಂಪ್‌ನ ಔಟ್‌ಸೈಡ್‌ನಲ್ಲಿ ಸವಾಲೆಸೆದರೆ ನೀವು ಆಡುತ್ತೀರೋ ಅಥವಾ ಸುಮ್ಮನೆ ಬಿಡುತ್ತೀರೋ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಯಾವುದೇ ಉತ್ತರ ನೀಡದೇ ಕೊಹ್ಲಿ ಸುಮ್ಮನೆ ಬ್ಯಾಟ್ ಹಿಡಿದು ತೆರಳಿದ್ದಾರೆ. ಇನ್ನು ಮತ್ತೊಮ್ಮೆ ವಿಡಿಯೋ ವೀಕ್ಷಿಸಿರುವ ವಿರಾಟ್ ಕೊಹ್ಲಿ hahaha ಎಂದು ಕಾಮೆಂಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಮಾತ್ರವಲ್ಲದೇ ಹಲವು ತಾರೆಯರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.
T20 World Cup: ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ನಡೆಯೋದೇ ಡೌಟ್..!
ಇನ್ನು ಟಿ20 ವಿಶ್ವಕಪ್ ಟೂರ್ನಿಯ ಬಗ್ಗೆ ಚುಟುಕಾಗಿ ಹೇಳುವುದಾದರೇ, ಟೂರ್ನಿಯಲ್ಲಿ ಒಟ್ಟು 16 ತಂಡಗಳು ಸೆಣಸಲಿವೆ. 2021ರ ಆವೃತ್ತಿಯಲ್ಲಿ ತೋರಿದ ಪ್ರದರ್ಶನ, 2021ರ ನವೆಂಬರ್ 15ರ ವೇಳೆಗೆ ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 8 ಸ್ಥಾನದಲ್ಲಿದ್ದ ತಂಡಗಳು ನೇರವಾಗಿ ಸೂಪರ್-12 ಹಂತ ಪ್ರವೇಶಿಸಿದವು. ಇನ್ನು ಅರ್ಹತಾ ಸುತ್ತಿನಲ್ಲಿ ನಮೀಬಿಯಾ, ಐರ್ಲೆಂಡ್, ನೆದರ್‌ಲೆಂಡ್ಸ್, ಸ್ಕಾಟ್ಲೆಂಡ್, ಶ್ರೀಲಂಕಾ, ವೆಸ್ಟ್‌ಇಂಡೀಸ್, ಯುಎಇ, ಜಿಂಬಾಬ್ವೆ ತಂಡಗಳು ಕಾದಾಡುತ್ತಿದ್ದು, ಈ ಪೈಕಿ 4 ತಂಡಗಳು ಸೂಪರ್ 12 ಹಂತಕ್ಕೆ ಲಗ್ಗೆಯಿಡಲಿವೆ.
ಇನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ತಾನಾಡಿದ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ 6 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು. ಇನ್ನು ಅಕ್ಟೋಬರ್ 19ರಂದು ನಡೆಯಬೇಕಿದ್ದ ಪಂದ್ಯವು ಮಳೆಯಿಂದಾಗಿ ಒಂದೂ ಎಸೆತ ಕಾಣದೇ ರದ್ದಾಗಿತ್ತು. ಇದೀಗ ಟೀಂ ಇಂಡಿಯಾ, ಅಕ್ಟೋಬರ್ 23ರಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲು ಎದುರು ನೋಡುತ್ತಿದೆ. ಆದರೆ ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.