ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ
ಅಕ್ಟೋಬರ್ 23ರಂದು ಮೆಲ್ಬರ್ನ್‌ನಲ್ಲಿ ನಡೆಯುಲಿರುವ ಪಂದ್ಯಕ್ಕೆ ಮಳೆ ಭೀತಿ
ಹವಾಮಾನ ವರದಿಯ ಪ್ರಕಾರ ಮೆಲ್ಬರ್ನ್‌ನಲ್ಲಿ ಶೇ.90ರಷ್ಟು ಮಳೆ ಬೀಳುವ ಮುನ್ಸೂಚನೆ
ಮೆಲ್ಬರ್ನ್(ಅ.20): ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಹಾಗೂ ಟೂರ್ನಿಯ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆಗೆ ತಲೆಬಿಸಿ ಶುರುವಾಗಿದೆ. ಅಕ್ಟೋಬರ್ 23ರಂದು ಬದ್ಧವೈರಿಗಳ ನಡುವಿನ ಸೂಪರ್-12 ಹಂತದ ಪಂದ್ಯಕ್ಕೆ ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನ(ಎಂಸಿಜಿ) ಆತಿಥ್ಯ ವಹಿಸಬೇಕಿದೆ. ಆದರೆ ಆ ದಿನ ಮೆಲ್ಬರ್ನ್‌ನಲ್ಲಿ ಶೇ.90ರಷ್ಟು ಮಳೆ ಬೀಳುವ ಮುನ್ಸೂಚನೆ ಇದೆ. ಮಧ್ಯಾಹ್ನದಿಂದ ಸಂಜೆವರೆಗೂ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ಪಂದ್ಯ ರದ್ದಾದರೂ ಆಗಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅಕ್ಟೋಬರ್ 23ರಂದು ಆಸ್ಪ್ರೇಲಿಯಾ ಕಾಲಮಾನ ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ) ಪಂದ್ಯ ಆರಂಭಗೊಳ್ಳಬೇಕಿದೆ. ಆ ದಿನ 10ರಿಂದ 25 ಮಿಲಿ ಮೀಟರ್ ಮಳೆ ಮುನ್ಸೂಚನೆಯನ್ನು ಅಲ್ಲಿನ ಹವಾಮಾನ ಇಲಾಖೆ ನೀಡಿದೆ. ಪಂದ್ಯ ಫಲಿತಾಂಶ ಕಾಣಲು ಎರಡೂ ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ 5 ಓವರ್ ಆಟ ನಡೆಯಬೇಕು. ಇಲ್ಲವಾದಲ್ಲಿ ಪಂದ್ಯ ರದ್ದು ಎಂದು ಪರಿಗಣಿಸಿ ಅಂಕ ಹಂಚಲಾಗುತ್ತದೆ. ಗುಂಪು ಹಂತದ ಪಂದ್ಯಗಳಿಗೆ ಮೀಸಲು ದಿನದ ವ್ಯವಸ್ಥೆ ಇಲ್ಲ, ಆದರೆ ಸೆಮಿಫೈನಲ್ ಹಾಗೂ ಫೈನಲ್‌ಗೆ ಮೀಸಲು ದಿನವನ್ನು ಐಸಿಸಿ ನಿಗದಿ ಪಡಿಸಿದೆ.
Asia Cup 2023: ಭಾರತಕ್ಕೆ ಪರೋಕ್ಷ ಬೆದರಿಕೆಯೊಡ್ಡಿದ ಪಾಕಿಸ್ತಾನ..!
ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಮಾತ್ರವಲ್ಲ, ಅಕ್ಟೋಬರ್ 22ರಂದು ಸಿಡ್ನಿಯಲ್ಲಿ ನಡೆಯಬೇಕಿರುವ ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಸೂಪರ್-12 ಹಂತದ ಮೊದಲ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ-ಕಿವೀಸ್ ಅಭ್ಯಾಸ ಪಂದ್ಯ ಮಳೆಗೆ ಆಹುತಿ
ಬ್ರಿಸ್ಬೇನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಬುಧವಾರ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ ಮಳೆಗೆ ಬಲಿಯಾಯಿತು. ಪಂದ್ಯ ಒಂದೂ ಎಸೆತ ಕಾಣದೆ ರದ್ದಾಯಿತು. ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ನಡುವಿನ ಅಭ್ಯಾಸ ಪಂದ್ಯದ ವೇಳೆಯೇ ಮಳೆ ಶುರುವಾದ ಕಾರಣ, ಭಾರತ, ನ್ಯೂಜಿಲೆಂಡ್ ತಂಡಗಳು ಮೈದಾನಕ್ಕಿಳಿಯಲಿಲ್ಲ.
ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ, ಹಾಲಿ ವಿಶ್ವ ಚಾಂಪಿಯನ್ ಹಾಗೂ ಆತಿಥೇಯ ಆಸ್ಪ್ರೇಲಿಯಾ ವಿರುದ್ಧ 6 ರನ್ ಗೆಲುವು ಸಾಧಿಸಿತ್ತು. ನ್ಯೂಜಿಲೆಂಡ್ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್ ಸೋಲು ಕಂಡಿತ್ತು. ಆ ಪಂದ್ಯದಲ್ಲಿ ನ್ಯೂಜಿಲೆಂಡ್ ಕೇವಲ 98 ರನ್‌ಗೆ ಆಲೌಟ್ ಆಗಿ ನಿರಾಸೆ ಅನುಭವಿಸಿತ್ತು.
ಅಕ್ಟೋಬರ್ 22ರಂದು ಸೂಪರ್-12 ಹಂತದ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ ಆಸ್ಪ್ರೇಲಿಯಾ ಎದುರಾಗಲಿದ್ದು, ಅಕ್ಟೋಬರ್ 23ರಂದು ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಲಿದೆ.
ಟಿ20 ವಿಶ್ವಕಪ್ ಟೂರ್ನಿ ಅಂಕಿ-ಅಂಶ:
16 ತಂಡಗಳು: ಟಿ20 ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಪಾಲ್ಗೊಂಡಿವೆ.
45 ಪಂದ್ಯಗಳು: ಅರ್ಹತಾ ಸುತ್ತು, ಸೂಪರ್-12 ಸೇರಿ ಟೂರ್ನಿಯಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿವೆ.
28 ದಿನ: ಟೂರ್ನಿಯು ಒಟ್ಟು 28 ದಿನಗಳ ಕಾಲ ನಡೆಯಲಿದೆ. ಅಕ್ಟೋಬರ್ 16ರಿಂದ ನವೆಂಬರ್ 13ರ ವರೆಗೂ ನಿಗದಿಯಾಗಿದೆ.
13 ಕೋಟಿ ರುಪಾಯಿ: ವಿಶ್ವಕಪ್ ಗೆಲ್ಲುವ ತಂಡಕ್ಕೆ 13.18 ಕೋಟಿ ರು. ಬಹುಮಾನ ಮೊತ್ತ ಸಿಗಲಿದೆ. ರನ್ನರ್-ಅಪ್‌ಗೆ 6.59 ಲಕ್ಷ ರು. ಸಿಗಲಿದೆ.
1016 ರನ್: ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಆಟಗಾರ ಲಂಕಾದ ಮಹೇಲಾ ಜಯವರ್ಧನೆ. 31 ಪಂದ್ಯಗಳಲ್ಲಿ 1016 ರನ್ ಗಳಿಸಿದ್ದಾರೆ.
41 ವಿಕೆಟ್: ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಬಾಂಗ್ಲಾದೇಶದ ಶಕೀಬ್ ಅಲ್-ಹಸನ್. 31 ಪಂದ್ಯಗಳಲ್ಲಿ 41 ವಿಕೆಟ್ ಕಬಳಿಸಿದ್ದಾರೆ.