T20 World Cup: ನೆದರ್‌ಲ್ಯಾಂಡ್ ಮಣಿಸಿ ಸೂಪರ್‌ 12 ಹಂತಕ್ಕೆ ಲಗ್ಗೆಯಿಟ್ಟ ಶ್ರೀಲಂಕಾ..!

By Naveen KodaseFirst Published Oct 20, 2022, 1:33 PM IST
Highlights

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟ ಶ್ರೀಲಂಕಾ
ನೆದರ್‌ಲ್ಯಾಂಡ್ಸ್‌ ವಿರುದ್ದ 16 ರನ್‌ಗಳ ರೋಚಕ ಜಯ ಸಾಧಿಸಿದ ಲಂಕಾ
ಮ್ಯಾಕ್ಸ್ ಒ'ಡೌಡ್ ಕೆಚ್ಚೆದೆಯ ಅರ್ಧಶತಕದ ಹೋರಾಟ ವ್ಯರ್ಥ

ಗೀಲಾಂಗ್(ಅ.20): ಮ್ಯಾಕ್ಸ್ ಒ'ಡೌಡ್ ಕೆಚ್ಚೆದೆಯ ಅರ್ಧಶತಕದ ಹೊರತಾಗಿಯೂ ವನಿಂದು ಹಸರಂಗ ಹಾಗೂ ಮಹೀಶ್ ತೀಕ್ಷಣ ಚಾಣಾಕ್ಷ ದಾಳಿಗೆ ತತ್ತರಿಸಿದ ನೆದರ್‌ಲ್ಯಾಂಡ್‌ ತಂಡವು 16 ರನ್‌ಗಳಿಂದ ಶ್ರೀಲಂಕಾಗೆ ಶರಣಾಗಿದೆ. ಇದರೊಂದಿಗೆ ಅರ್ಹತಾ ಸುತ್ತಿನಲ್ಲಿ ಎರಡು ಗೆಲುವು ಸಾಧಿಸಿದ ದಶುನ್ ಶನಕ ನೇತೃತ್ವದ ಶ್ರೀಲಂಕಾ ತಂಡವು ಮೊದಲ ತಂಡವಾಗಿ ಸೂಪರ್ 12 ಹಂತಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಶ್ರೀಲಂಕಾ ನೀಡಿದ್ದ 163 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನೆದರ್‌ಲ್ಯಾಂಡ್ಸ್‌ ತಂಡವು 9 ವಿಕೆಟ್ ಕಳೆದುಕೊಂಡು ಕೇವಲ 146 ರನ್‌ ಗಳಿಸಲಷ್ಟೇ ಶಕ್ತವಾಗಿದೆ.

ಇಲ್ಲಿನ ಸೈಮಂಡ್ಸ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಂಕಾದ ಸವಾಲಿನ ಗುರಿ ಬೆನ್ನತ್ತಿದ ನೆದರ್‌ಲ್ಯಾಂಡ್ಸ್‌ ತಂಡವು ಆರಂಭದಲ್ಲೇ ವಿಕ್ರಂಜಿತ್ ಸಿಂಗ್(7) ವಿಕೆಟ್ ಕಳೆದುಕೊಂಡಿತು. ಇನ್ನು 14 ರನ್ ಗಳಿಸಿದ್ದ ಬಾಸ್ ಡಿ ಲೀಡೆಯನ್ನು ಲಹಿರು ಕುಮಾರ ಪೆವಿಲಿಯನ್ನಿಗಟ್ಟಿದರು. ಕಾಲಿನ್ ಅಕ್ರೆಮನ್‌ ಶೂನ್ಯ ಸುತ್ತಿ ಹಸರಂಗಗೆ ವಿಕೆಟ್ ಒಪ್ಪಿಸಿದರೆ, ಟಾಮ್ ಕೂಪರ್ ಬ್ಯಾಟಿಂಗ್ 16 ರನ್‌ಗಳಿಗೆ ಸೀಮಿತವಾಯಿತು. ನಾಯಕ ಸ್ಕಾಟ್ ಎಡ್ವರ್ಡ್ಸ್‌ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

Sri Lanka beat Netherlands by 16 runs to seal their qualification to the Super 12 stage 👏 | | 📝 https://t.co/k4hjQDFFD9 pic.twitter.com/cC69AJ41Vy

— T20 World Cup (@T20WorldCup)

ಮ್ಯಾಕ್ಸ್ ಒ'ಡೌಡ್ ಏಕಾಂಗಿ ಹೋರಾಟ: ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ, ಮತ್ತೊಂದು ತುದಿಯಲ್ಲಿ ಮ್ಯಾಕ್ಸ್ ಒ'ಡೌಡ್ ಕೆಚ್ಚೆದೆಯ ಬ್ಯಾಟಿಂಗ್ ನಡೆಸುವ ಮೂಲಕ ನೆದರ್‌ಲ್ಯಾಂಡ್ಸ್‌ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಒಟ್ಟು 53 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್ ಒ'ಡೌಡ್ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 71 ರನ್ ಸಿಡಿಸಿದರಾದರೂ, ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ದೊರೆಯದೇ ಹೋಗಿದ್ದರಿಂದ ಪಂದ್ಯವನ್ನು ಕೈಚೆಲ್ಲಬೇಕಾಯಿತು.

ಶ್ರೀಲಂಕಾ ಕ್ರಿಕೆಟ್ ತಂಡದ ಪರ ವನಿಂದು ಹಸರಂಗ ಕೇವಲ 28 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಮತ್ತೋರ್ವ ಸ್ಪಿನ್ನರ್ ಮಹೀಶ್ ತೀಕ್ಷಣ 2 ವಿಕೆಟ್‌ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ವೇಗಿಗಳಾದ ಲಹಿರು ಕುಮಾರ ಹಾಗೂ ಬಿನುರ ಫರ್ನಾಂಡೋ ತಲಾ ಒಂದೊಂದು ವಿಕೆಟ್ ಕಬಳಿಸಿದರು.

T20 World Cup: ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ನಡೆಯೋದೇ ಡೌಟ್..!

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡವು ಎಚ್ಚರಿಕೆಯ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ ಕುಸಾಲ್ ಮೆಂಡಿಸ್ ಹಾಗೂ ಪತುಮ್ ನಿಸ್ಸಾಂಕ ಜೋಡಿಯು 6.3 ಓವರ್‌ಗಳಲ್ಲಿ 36 ರನ್‌ಗಳ ಜತೆಯಾಟವಾಡಿತು. ನಿಸ್ಸಾಂಕ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಧನಂಜಯ್ ಡಿ ಸಿಲ್ವಾ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಲಂಕಾ ತಂಡವು 36 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಕಂಗಾಲಾಗಿತ್ತು. ಆದರೆ ಮೂರನೇ ವಿಕೆಟ್‌ಗೆ ಕುಸಾಲ್ ಮೆಂಡಿಸ್ ಹಾಗೂ ಚರಿತ್ ಅಸಲಂಕಾ ಜೋಡಿ 60 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು.

ಲಂಕಾ ತಂಡದ ಪರ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕುಸಾಲ್ ಮೆಂಡಿಸ್ ಕೇವಲ 44 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 79 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಅಸಲಂಕಾ 30 ಎಸೆತಗಳಲ್ಲಿ 31 ರನ್‌ ಬಾರಿಸಿದರು. ಇನ್ನು ಕೊನೆಯಲ್ಲಿ ಭನುಕಾ ರಾಜಪಕ್ಸಾ 19 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡಿದರು.

click me!