ಸ್ಲಿಮ್ ಬೇಕಿದ್ದರೇ ಫ್ಯಾಶನ್ ಶೋಗೆ ಹೋಗಿ..! ಸರ್ಫರಾಜ್ ಕಡೆಗಣನೆ ಕುರಿತ ಆಯ್ಕೆ ಸಮಿತಿಗೆ ಚಾಟಿ ಬೀಸಿದ ಸನ್ನಿ..!

By Naveen KodaseFirst Published Jan 20, 2023, 4:34 PM IST
Highlights

ಸರ್ಫರಾಜ್ ಖಾನ್ ಕಡೆಗಣನೆಗೆ ಸುನಿಲ್ ಗವಾಸ್ಕರ್ ಆಕ್ರೋಶ
ಆಯ್ಕೆ ಸಮಿತಿ ಮೇಲೆ ಕಿಡಿಕಾರಿದ ಮಾಜಿ ನಾಯಕ ಸನ್ನಿ
ಕ್ರಿಕೆಟ್ ಆಡಲು ಗಾತ್ರ ಮುಖ್ಯವಲ್ಲವೆಂದ ಗವಾಸ್ಕರ್

ನವದೆಹಲಿ(ಜ.20): ದೇಶಿ ಕ್ರಿಕೆಟ್‌ನಲ್ಲಿ ರನ್‌ಗಳ ರಾಶಿಯನ್ನೇ ಗುಡ್ಡೆ ಹಾಕಿರುವ ಮುಂಬೈ ಮೂಲದ ಪ್ರತಿಭಾನ್ವಿತ ಬ್ಯಾಟರ್ ಸರ್ಫರಾಜ್ ಖಾನ್ ಅವರನ್ನು ಚೇತನ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆಯ್ಕೆ ಸಮಿತಿ ಕಡೆಗಣಿಸುತ್ತಿರುವುದರ ಬಗ್ಗೆ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ. ಸದ್ಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಸದ್ಯ ಡೆಲ್ಲಿ ವಿರುದ್ದ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸರ್ಫರಾಜ್ ಖಾನ್ ಆಕರ್ಷಕ ಶತಕ ಸಿಡಿಸಿ ಮತ್ತೊಮ್ಮೆ ತಮ್ಮ ಪ್ರತಿಭೆ ಅನಾವರಣ ಮಾಡಿದ್ದರು. ಇದರ ಬೆನ್ನಲ್ಲೇ ಹಲವು ಮಾಜಿ ಕ್ರಿಕೆಟಿಗರು ಸರ್ಫರಾಜ್ ಖಾನ್ ಅವರನ್ನು ಟೀಂ ಇಂಡಿಯಾಗೆ ಆಯ್ಕೆ ಮಾಡದೇ ಇರುವುದರ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. 

ಇದೀಗ, ಲಿಟ್ಲ್‌ ಮಾಸ್ಟರ್ ಖ್ಯಾತಿಯ ಸುನಿಲ್ ಗವಾಸ್ಕರ್, ಮುಂಬೈ ಮೂಲದ ಸರ್ಫರಾಜ್ ಖಾನ್ ಬೆನ್ನಿಗೆ ನಿಂತಿದ್ದು, ಸ್ಲಿಮ್ ಹಾಗೂ ಟ್ರಿಮ್ ಇರುವ ಆಟಗಾರ ಬೇಕಿದ್ದರೇ ಸುಮ್ಮನೇ ಮಾಡೆಲ್‌ಗಳನ್ನು ಹುಡುಕಿ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿಯನ್ನು ಲೇವಡಿ ಮಾಡಿದ್ದಾರೆ.

" ಶತಕಗಳ ಮೇಲೆ ಶತಕ ಸಿಡಿಸುತ್ತಾ ಇರುವ ಅವರು ಮೈದಾನದಿಂದ ಮತ್ತೆ ಹೊರಗುಳಿಯಬಾರದು. ಆತ ಕ್ರಿಕೆಟ್ ಆಡಲು ಫಿಟ್‌ ಆಗಿದ್ದಾನೆಯೇ ಎನ್ನುವುದಷ್ಟೇ ಮುಖ್ಯವಾಗುತ್ತದೆ. ನೀವು ನೋಡಲು ಸ್ಲಿಮ್ ಹಾಗೂ ಟ್ರಿಮ್ ಆಗಿರುವ ಆಟಗಾರ ಬೇಕೆಂದರೇ, ಫ್ಯಾಷನ್ ಶೋಗೆ ಹೋಗಿ ಅಲ್ಲಿನ ಕೆಲವು ಮಾಡೆಲ್‌ಗಳನ್ನು ಆರಿಸಿಕೊಳ್ಳಿ, ಅವರ ಕೈಗೆ ಬಾಲ್ ಹಾಗೂ ಬ್ಯಾಟ್ ನೀಡಿ ತಂಡಕ್ಕೆ ಆಯ್ಕೆ ಮಾಡಿ. ಕ್ರಿಕೆಟಿಗರು ಯಾವುದೇ ಆಕಾರದಲ್ಲಿರಬಹುದು. ಅವರ ಗಾತ್ರದ ಬಗ್ಗೆ ಯೋಚಿಸಲು ಹೋಗಬೇಡಿ ಬದಲಾಗಿ ಆತ ಎಷ್ಟು ರನ್ ಗಳಿಸಿದ್ದಾನೆ ಅಥವಾ ವಿಕೆಟ್‌ ಕಬಳಿಸಿದ್ದಾನೆ ಎನ್ನುವುದನ್ನು ನೋಡಿ ಎಂದು ಇಂಡಿಯಾ ಟುಡೆಗೆ ನೀಡಿದ ಪ್ರತಿಕ್ರಿಯೆಯಲ್ಲಿ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.

ದೇಶಿ ಕ್ರಿಕೆಟ್‌ನಲ್ಲಿ ಶತಕಗಳ ಮೇಲೆ ಶತಕ ಸಿಡಿಸುತ್ತಾ ಸಾಗಿರುವ ಸರ್ಫರಾಜ್ ಖಾನ್ ಅವರು ಮುಂಬರುವ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡಿದಾಗ ಸರ್ಫರಾಜ್‌ ಖಾನ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿರಲಿಲ್ಲ. 

ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗದ್ದಕ್ಕೆ ಸರ್ಫರಾಜ್‌ ಖಾನ್‌ ಬೇಸರ..! ನನಗೇಕೆ ಸ್ಥಾನ ಸಿಗುತ್ತಿಲ್ಲ?

ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಸರ್ಫರಾಜ್ ಖಾನ್, ಅಂದು ರಾತ್ರಿಯಿಡಿ ಅತ್ತಿದ್ದೇನೆ ಹಾಗೂ ನಿದ್ರೆ ಮಾಡಿರಲಿಲ್ಲ ಎಂದು ಅಸಹಾಯಕರಾಗಿ ನುಡಿದಿದ್ದರು. " ಆಸ್ಟ್ರೇಲಿಯಾ ಎದುರಿನ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದ್ದಾಗ, ಅಲ್ಲಿ ನನ್ನ ಹೆಸರಿರಲಿಲ್ಲ. ಇದು ನೋಡಿ ನನಗೆ ತೀರಾ ನಿರಾಸರಯಾಯಿತು. ನಾವು ಗುವಾಹಟಿಯಿಂದ ಡೆಲ್ಲಿಗೆ ಪ್ರಯಾಣ ಬೆಳೆಸಿದಾಗ, ನಾನು ಏಕಾಂಗಿ ಎನ್ನುವಂತಹ ಭಾವನೆ ಬರತೊಡಗಿತು. ನಾನು ಅಲ್ಲಿಯೇ ಅತ್ತಿದ್ದೇನೆ ಎಂದು ಟೈಮ್ಸ್‌ ಆಫ್‌ ಇಂಡಿಯಾಗೆ ನೀಡಿದ ಪ್ರತಿಕ್ರಿಯೆಯಲ್ಲಿ ಸರ್ಫರಾಜ್ ಖಾನ್ ತಿಳಿಸಿದ್ದರು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ: 

ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್‌ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್‌ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್

ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಗೆ ಭಾರತ ತಂಡ ಹೀಗಿದೆ:

ರೋಹಿತ್‌ ಶರ್ಮಾ, ಕೆ ಎಲ್ ರಾಹುಲ್‌, ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್‌, ಇಶಾನ್ ಕಿಶನ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್, ಜಯದೇವ್ ಉನಾದ್ಕತ್‌.

click me!