16ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಿದ್ದತೆ ಆರಂಭಿಸಿದ ಎಂ ಎಸ್ ಧೋನಿ
2023ರ ಐಪಿಎಲ್ ಟೂರ್ನಿ ಮಾರ್ಚ್ ಕೊನೆಯ ವಾರ ಆರಂಭವಾಗುವ ಸಾಧ್ಯತೆ
ಎರಡೂವರೆ ತಿಂಗಳು ಮುಂಚಿತವಾಗಿಯೇ ಅಭ್ಯಾಸ ಆರಂಭಿಸಿದ ಮಹಿ
ಚೆನ್ನೈ(ಜ.20): ಬಹುನಿರೀಕ್ಷಿತ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೀಗ ಎಲ್ಲರಿಗಿಂತ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಮುಂಬರುವ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಇನ್ನೂ ಎರಡೂವರೆ ತಿಂಗಳುಗಳು ಬಾಕಿ ಇವೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ಮಹಿ, ಇದೀಗ, ಐಪಿಎಲ್‌ಗಾಗಿ ಭರ್ಜರಿ ಸಿದ್ದತೆ ಆರಂಭಿಸಿದ್ದಾರೆ. ಧೋನಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ವಿಡಿಯೋವೊಂದನ್ನು ಧೋನಿ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋವೀಗ ವೈರಲ್ ಆಗುತ್ತಿದೆ.
ನೆಟ್ಸ್‌ನಲ್ಲಿಯೂ ಬಿರುಸಾಗಿ ಬಾರಿಸುವ ಅಭ್ಯಾಸ ನಡೆಸುವ ಧೋನಿ, ಭರ್ಜರಿ ಸಿಕ್ಸರ್ ಸಿಡಿಸುವ ತಯಾರಿ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, ಮ್ಯಾಚ್ ಫಿನಿಶರ್ ಆಗಿಯೂ ಸೈ ಎನಿಸಿಕೊಂಡಿದ್ದಾರೆ.
ಹೀಗಿದೆ ನೋಡಿ ಧೋನಿ ಅಭ್ಯಾಸ:
MS Dhoni practicing at nets ahead of IPL 2023 !! 😍💥 • • pic.twitter.com/Ai1FGVosGP
— Nithish MSDian 🦁 (@thebrainofmsd)16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು, ಬಹುತೇಕ ಧೋನಿ ಪಾಲಿಗೆ ಕೊನೆಯ ಐಪಿಎಲ್ ಎನಿಸಿಕೊಳ್ಳುವ ಸಾಧ್ಯತೆಯಿದೆ. ಕಳೆದ ವರ್ಷ ನಡೆದ ಐಪಿಎಲ್ ಪಂದ್ಯದ ಮಾತುಕತೆ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ, ತಮ್ಮ ಎರಡನೇ ತವರು ಎನಿಸಿಕೊಂಡಿರುವ ಚೆನ್ನೈನಲ್ಲಿ ಹಳದಿ ಜೆರ್ಸಿಯಲ್ಲಿ ಕೊನೆಯ ಐಪಿಎಲ್ ಪಂದ್ಯವನ್ನು ಆಡಬಯಸಿದ್ದರು. ಕಳೆದೆರಡು ವರ್ಷ ಕೋವಿಡ್ ಕಾರಣದಿಂದಾಗಿ ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳು ನಡೆದಿರಲಿಲ್ಲ. 2020ರ ಸಂಪೂರ್ಣ ಐಪಿಎಲ್ ಟೂರ್ನಿಯು ಯುಎಇನಲ್ಲಿ ಜರುಗಿತ್ತು. ಇನ್ನು 2021ರ ಐಪಿಎಲ್ ಟೂರ್ನಿಯು ಅರ್ಧಭಾಗ ಭಾರತದಲ್ಲಿ ಇನ್ನರ್ಧ ಭಾಗ ಯುಎಇನಲ್ಲಿ ಜರುಗಿತ್ತು.
IPL 2023: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಹೆಸರಿನಲ್ಲಿವೆ ಯಾರೂ ಮುರಿಯಲಾರದ 4 ದಾಖಲೆಗಳು..!
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡಗಳಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಒಂದೆನಿಸಿದೆ. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 4 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಐದನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದೀಗ ಐಪಿಎಲ್ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬೆನ್ ಸ್ಟೋಕ್ಸ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದು, ಇನ್ನಷ್ಟು ಬಲಾಢ್ಯವಾಗಿ ಗುರುತಿಸಿಕೊಂಡಿದೆ.
ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಯ ವಿವರ ಹೀಗಿದೆ ನೋಡಿ
* ಬೆನ್ ಸ್ಟೋಕ್ಸ್ - ಆಲ್ರೌಂಡರ್- 16.25 ಕೋಟಿ ರುಪಾಯಿ
* ಕೈಲ್ ಜೇಮಿಸನ್ - ವೇಗದ ಬೌಲರ್ -1 ಕೋಟಿ ರುಪಾಯಿ
* ನಿಶಾಂತ್ ಸಿಂಧು - ಬ್ಯಾಟರ್ - 60 ಲಕ್ಷ ರುಪಾಯಿ
* ಅಜಿಂಕ್ಯ ರಹಾನೆ - ಬ್ಯಾಟರ್ - 50 ಲಕ್ಷ ರುಪಾಯಿ
* ಭಗತ್ ವರ್ಮಾ - ಆಲ್ರೌಂಡರ್ - 20 ಲಕ್ಷ ರುಪಾಯಿ
* ಅಜಯ್ ಮಂಡಲ್ - ಆಲ್ರೌಂಡರ್ - 20 ಲಕ್ಷ ರುಪಾಯಿ
* ಶೇಕ್ ರಶೀದ್ - ಬ್ಯಾಟರ್ - 20 ಲಕ್ಷ ರುಪಾಯಿ
ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರೀಟೈನ್ ಮಾಡಿಕೊಂಡ ವಿವರ:
ಎಂ ಎಸ್ ಧೋನಿ (ನಾಯಕ), ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಸಿಂಘ್ ಚೌಧರಿ, ಮತೀಶ ಚೌಧರಿ. , ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ