
ನವದೆಹಲಿ(ಫೆ.02):2021-22ರ ಕೇಂದ್ರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾರತ ಕ್ರಿಕೆಟ್ ತಂಡದ ಸಾಧನೆಯನ್ನು ಕೊಂಡಾಡಿದ್ದಾರೆ.
ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕವಾದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆದ್ದಿದ್ದನ್ನು ನೆನಪಿಸಿಕೊಂಡ ನಿರ್ಮಲಾ ಸೀತಾರಾಮನ್, ಈ ಸಂದರ್ಭದಲ್ಲಿ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಯಶಸ್ಸು ಸಾಧಿಸಿದಾಗ ಕ್ರಿಕೆಟ್ ಪ್ರೇಮಿಗಳ ದೇಶವಾದ ನಮಗೆ ಆದ ಸಂತೋಷವನ್ನು ನೆನಪು ಮಾಡಿಕೊಳ್ಳದೇ ಇರಲು ಸಾಧ್ಯವಾಗುತ್ತಿಲ್ಲ. ಟೀಂ ಇಂಡಿಯಾದ ಹೋರಾಟ, ನಮ್ಮ ಜನರಲ್ಲಿ ಅದರಲ್ಲೂ ಪ್ರಮುಖವಾಗಿ ಯುವಕರಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ತವಕ ಹಾಗೂ ಯಶಸ್ವಿಯಾಗಬೇಕು ಎನ್ನುವ ದಾಹ ಎಷ್ಟಿದೆ ಎನ್ನುವುದನ್ನು ತೋರಿಸಿತು ಎಂದಿದ್ದಾರೆ.
ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಟೀಂ ಇಂಡಿಯಾ, ಅದಾದ ಬಳಿಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಿದ್ದರು. ರಹಾನೆ ನಾಯಕತ್ವದಲ್ಲಿ ಮೆಲ್ಬರ್ನ್‌ನಲ್ಲಿ ಜಯ, ಸಿಡ್ನಿ ಟೆಸ್ಟ್‌ನಲ್ಲಿ ಡ್ರಾ ಹಾಗೂ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ರೋಚಕ ಗೆಲುವು ದಾಖಲಿಸಿ ಟೆಸ್ಟ್ ಸರಣಿ ಗೆದ್ದು ಬೀಗಿತ್ತು.
ಮನ್ ಕೀ ಬಾತ್‌ನಲ್ಲಿ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
ಭಾನುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ತಮ್ಮ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಭಾರತ ತಂಡದ ಸಾಧನೆಯನ್ನು ಹೊಗಳಿದ್ದರು. ಈ ತಿಂಗಳಿನಲ್ಲಿ ಕ್ರಿಕೆಟ್ ಪಿಚ್‌ನಲ್ಲಿ ನಮಗೆ ಒಳ್ಳೆಯ ಸುದ್ದಿ ಹೊರಬಿದ್ದಿದೆ. ಆರಂಭಿಕ ಹಿನ್ನಡೆಯ ಹೊರತಾಗಿಯೂ ಕಠಿಣ ಪರಿಶ್ರಮ ಹಾಗೂ ತಂಡವಾಗಿ ಭಾರತ ತಂಡ ಆಡಿದ ರೀತಿ ನಿಜಕ್ಕೂ ಸ್ಪೂರ್ತಿದಾಯಕವಾಗಿತ್ತು ಎಂದು ಮೋದಿ ಹೇಳಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.