
ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ ಅನ್ನು ಒಂದು ಧರ್ಮದಂತೆ ಆಚರಿಸುವ ಹುಚ್ಚು ಅಭಿಮಾನಿಗಳ ವರ್ಗವೇ ಇದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ವೈರಲ್ ಆಗುತ್ತಿದ್ದು, ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯ ನೋಡುವುದಕ್ಕಾಗಿ ಹುಡುಗಿಯ ತಂದೆಯೊಬ್ಬ, 70 ಲಕ್ಷ ರುಪಾಯಿ ವಾರ್ಷಿಕ ಸಂಬಳ ಪಡೆಯುವ ವರನ ಜತೆಗಿನ ಮಾತುಕತೆ ಮುಂದೂಡಿದ ಅಪರೂಪದ ಘಟನೆ ನಡೆದಿದೆ. ಇದು ಬೇರೆಲ್ಲೋ ಅಲ್ಲ, ನಮ್ಮದೇ ಉದ್ಯಾನನಗರಿ ಎನಿಸಿಕೊಂಡಿರುವ ಬೆಂಗಳೂರಿನಲ್ಲಿ ಎಂದರೆ ನಿಮಗೂ ಆಶ್ಚರ್ಯವಾಗಬಹುದು.
ಹೌದು, ಈ ಘಟನೆಯ ಕುರಿತಂತೆ ನೈನಾ ಎನ್ನುವ ನೆಟ್ಟಿಗರೊಬ್ಬರು, ಸಾಮಾಜಿಕ ಜಾಲತಾಣವಾದ ಎಕ್ಸ್(ಟ್ವಿಟರ್) ಮೂಲಕ ಈ ಇಂಟ್ರೆಸ್ಟಿಂಗ್ ಸಂಗತಿಯನ್ನು ಹಂಚಿಕೊಂಡಿದ್ದಾರೆ. ವದುವಿನ ಹುಡುಕಾಟದಲ್ಲಿದ್ದ ರಾಹುಲ್ ಎನ್ನುವಾತ ಶಾದಿ.ಕಾಂ ಮೂಲಕ ಪ್ರಿಯಾಂಕ ಎನ್ನುವ ಹುಡುಗಿಯ ತಂದೆಯ ಬಳಿ ತಮ್ಮನ್ನು ತಾವು ಮೆಸೇಜ್ ಮೂಲಕ ಪರಿಚಯಿಸಿಕೊಂಡಿದ್ದಾನೆ. "ಹಲೋ ನಾನು ರಾಹುಲ್. ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್. ಶಾದಿ.ಕಾಂ ಮೂಲಕ ನಿಮ್ಮ ಮಗಳ ಪ್ರೊಫೈಲ್ ಗಮನಿಸಿದೆ. ನನ್ನ ವಾರ್ಷಿಕ ವೇತನ 70 ಲಕ್ಷ ರುಪಾಯಿಗಳು. ನಾನು ನಿಮಗೆ ಹೊಂದಾಣಿಕೆಯಾಗಬಲ್ಲೆ ಎಂದೆನಿಸುತ್ತಿದೆ" ಎಂದು ಸಂದೇಶ ರವಾನಿಸಿದ್ದಾನೆ.
ಇದಕ್ಕೆ ಹುಡುಗಿಯ ತಂದೆ ಅಚ್ಚರಿಯ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ ಗಮನ ಸೆಳೆದಿದ್ದಾರೆ. "ಹೆಲೋ ಥ್ಯಾಂಕ್ಸ್, ನಾನು ಪ್ರಿಯಾಂಕ ತಂದೆ. ಏನೇ ಇದ್ರೂ ಮ್ಯಾಚ್ ಆದ ಮೇಲೆ ಮಾತಾಡೋಣ ಎಂದು ರಿಪ್ಲೇ ಮಾಡಿದ್ದಾರೆ. ಈ ಚಾಟ್ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
10 ವರ್ಷ, 5 ಫೈನಲ್ ಸೋಲು: ನನಸಾಗುತ್ತಾ ಟೀಂ ಇಂಡಿಯಾ ದಶಕದ ಕನಸು?
ಇನ್ನು ಈ ಚಾಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಲವು ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಹುಡುಗಿಯ ತಂದೆಗೆ ತನ್ನ ಮಗಳ ಮದುವೆಗಿಂತ ಇಂಗ್ಲೆಂಡ್ ಎದುರು ಭಾರತ ಗೆಲ್ಲುವುದು ಮುಖ್ಯ ಎನಿಸಿದೆ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಅಂಕಲ್‌ಗೆ ತನ್ನ ಆಧ್ಯತೆ ಏನು ಎನ್ನುವುದು ಸ್ಪಷ್ಟವಾಗಿದೆ. ಮದುವೆ ಮಾತುಕತೆ ಮತ್ತೊಂದು ದಿನ ಕೂಡಾ ಇಟ್ಟುಕೊಳ್ಳಬಹುದು. ಆದರೆ ಸೆಮಿಫೈನಲ್ ಪಂದ್ಯ ಮತ್ತೆ ನೋಡಲು ಸಿಗುವುದಿಲ್ಲ ಅಲ್ಲವೇ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಇನ್ನೋರ್ವ ನೆಟ್ಟಿಗರು, ಈ ಮದುವೆ ಮಾತುಕತೆ ಒಪ್ಪುವುದು ಅಥವಾ ಬಿಡುವುದು ಮ್ಯಾಚ್ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ ಎಂದು ಕಾಲೆಳೆದಿದ್ದಾರೆ.
ಇನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 68 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಮೊದಲು ಬ್ಯಾಟ್ ಮಾಡಿದ್ದ ಭಾರತ ರೋಹಿತ್ ಶರ್ಮಾ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತ್ತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು 103 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಸೋಲೊಪ್ಪಿಕೊಂಡಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.