
ಲಾಹೋರ್: ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್)ನಲ್ಲಿ ಭಾನುವಾರ ಕರಾಚಿ ಕಿಂಗ್ಸ್ ವಿರುದ್ಧ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿದ ಲಾಹೋರ್ ಖಲಂದರ್ಸ್ ತಂಡದ ಹಿರಿಯ ಆಟಗಾರ ಫಖರ್ ಜಮಾನ್‌ಗೆ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) 2 ಪಂದ್ಯಗಳಿಗೆ ನಿಷೇಧ ಹೇರಿದೆ.
ಪಂದ್ಯದಲ್ಲಿ ಕರಾಚಿ ಗೆಲುವಿಗೆ ಕೊನೆ ಓವರ್‌ನಲ್ಲಿ 14 ರನ್ ಬೇಕಿದ್ದಾಗ ಲಾಹೋರ್ ನಾಯಕ ಶಾಹೀನ್ ಅಫ್ರಿದಿ, ಜಮಾನ್ ಮತ್ತು ಹ್ಯಾರಿಸ್ ರೌಫ್ ಚರ್ಚೆ ನಡೆಸುತ್ತಿದ್ದರು. ಆಗ ಜಮಾನ್ ಚೆಂಡನ್ನು ಕೈಯಿಂದ ಬಲವಾಗಿ ಒತ್ತುವುದು ಕಂಡುಬಂದಿತ್ತು. ಕೂಡಲೇ ಅಂಪೈರ್‌ಗಳು ಪರಿಶೀಲನೆ ನಡೆಸಿ, ಚೆಂಡು ವಿರೂಪಗೊಳಿಸಿದ್ದು ಪತ್ತೆ ಹಚ್ಚಿದ್ದರು. ಹೀಗಾಗಿ ಕರಾಚಿಗೆ 5 ರನ್ ಪೆನಾಲ್ಟಿ ನೀಡಿ, ಚೆಂಡನ್ನು ಬದಲಾಯಿಸಿದ್ದರು. ಪಂದ್ಯದ ಬಳಿಕ ಜಮಾನ್‌ರನ್ನು ವಿಚಾರಣೆ ನಡೆಸಿದಾಗ ಅವರು ತಮ್ಮ ಮೇಲಿನ ಆರೋಪ ನಿರಾಕರಿಸಿದ್ದರು. ಮಂಗಳವಾರ ಮತ್ತೊಂದು ಸುತ್ತಿನ ವಿಚಾರಣೆಯಲ್ಲಿ ಅವರು ತಪ್ಪಿತಸ್ಥ ಎಂಬುದು ಸಾಬೀತಾಗಿದೆ. ಹೀಗಾಗಿ, ಲಾಹೋರ್ ತಂಡದ ಏ.3 ಹಾಗೂ ಏ.9ರ ಪಂದ್ಯಗಳಿಗೆ ಜಮಾನ್ ಲಭ್ಯವಿರುವುದಿಲ್ಲ.
ಭದ್ರತಾ ನಿಯಮ ಉಲ್ಲಂಘಿಸಿ, ಸಿಕಂದರ್ ರಝಾ ಅವರ ನಾಲ್ವರು ಸಂಬಂಧಿಕರನ್ನು ಹೋಟೆಲ್ ಕೋಣೆಗೆ ಕರೆಸಿಕೊಂಡಿದ್ದಕ್ಕೆ ಲಾಹೋರ್ ತಂಡದ ನಾಯಕ ಶಾಹೀನ್ ಅಫ್ರಿದಿಗೆ ಫ್ರಾಂಚೈಸಿಯು 10 ಲಕ್ಷ ರು. ದಂಡ ವಿಧಿಸಿದೆ. ಆದರೆ ಸಿಕಂದರ್ ಮೇಲೆ ಯಾವುದೆ ದಂಡ ಹೇರಲಾಗಿಲ್ಲ.
ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಎಂ ಮರಿಯಮ್ ಶರೀಫ್ ವಿರುದ್ಧ ಕ್ರಿಕೆಟಿಗ ನಸೀಮ್ ಶಾ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ವಿವಾದವಾದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಕೇಂದ್ರೀಯ ಒಪ್ಪಂದದಲ್ಲಿನ ಆಟಗಾರರಿಗೆ ಕಠಿಣ ಎಚ್ಚರಿಕೆ ನೀಡಿದೆ. ಯಾವುದೇ ಪೂರ್ವಾನುಮತಿ ಇಲ್ಲದೆ ಪೋಸ್ಟ್ ಮಾಡಿದರೆ 1 ಕೋಟಿ ರು.(ಭಾರತದ 33 ಲಕ್ಷ ರು.) ದಂಡ ವಿಧಿಸುವುದಾಗಿ ಎಚ್ಚರಿಸಿದೆ. ‘ಯಾವುದೇ ರಾಜಕೀಯ ಪೋಸ್ಟ್ ಹಾಕಬಾರದು. ಅಂತಹ ಪೋಸ್ಟ್‌ಗಳ ಅಪ್ಲೋಡ್‌ಗೂ ಮುನ್ನ ಪಿಸಿಬಿಯ ಮಾಧ್ಯಮ ವಿಭಾಗದಿಂದ ಅನುಮೋದನೆ ಪಡೆಯಬೇಕು’ ಎಂದಿದೆ. ನಸೀಂಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು 2 ಕೋಟಿ ರು. ದಂಡ ವಿಧಿಸಿತ್ತು.
ಢಾಕಾ: ಬಾಂಗ್ಲಾದಲ್ಲಿ ಐಪಿಎಲ್ ಪ್ರಸಾರಕ್ಕಿದ್ದ ನಿಷೇಧವನ್ನು ಅಲ್ಲಿನ ಸರ್ಕಾರ ತೆರವುಗೊಳಿಸಿದ್ದರೂ ಸ್ಥಳೀಯ ಚಾನೆಲ್ ಜೊತೆಗಿನ ಒಪ್ಪಂದವನ್ನು ಐಪಿಎಲ್ ಪ್ರಸಾರ ಹಕ್ಕನ್ನು ಹೊಂದಿರುವ ಜಿಯೋಸ್ಟಾರ್ ಕೊನೆಗೊಳಿಸಿದ ಕಾರಣ ಬಾಂಗ್ಲಾದೇಶದಲ್ಲಿ ಐಪಿಎಲ್ ಪಂದ್ಯಗಳು ಪ್ರಸಾರಗೊಳ್ಳುವುದಿಲ್ಲ ಎಂದು ತಿಳಿದು ಬಂದಿದೆ.
ಬಾಂಗ್ಲಾದೇಶದ ಸ್ಥಳೀಯ ಚಾನೆಲ್ ಟಿ ಸ್ಪೋರ್ಟ್ಸ್ ಜತೆಗೆ ಜಿಯೋಸ್ಟಾರ್ 2023ರಿಂದ 2027ರ ತನಕ ಐಪಿಎಲ್ ಆವೃತ್ತಿಗಳ ಪ್ರಸಾರಕ್ಕೆ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಸಂಸ್ಥೆಯು ನಿಗದಿಪಡಿಸಿದ ಸಮಯದೊಳದಗೆ ಹಣ ಪಾವತಿಸಲು ನಿರಂತರ ವೈಫಲ್ಯ ಹಿನ್ನೆಲೆ ಜಿಯೋಸ್ಟಾರ್ ಒಪ್ಪಂದ ರದ್ದುಗೊಳಿಸಿದೆ.
ಕ್ರಿಕೆಟಿಗ ಮುಸ್ತಫಿಜುರ್ ರಹ್ಮಾನ್‌ರನ್ನು ಐಪಿಎಲ್ನಿಂದ ಹೊರಹಾಕಿದ್ದಕ್ಕೆ ಆಕ್ರೋಶಗೊಂಡಿದ್ದ ಅಂದಿನ ಬಾಂಗ್ಲಾ ಸರ್ಕಾರ, ತನ್ನ ದೇಶದಲ್ಲಿ ಐಪಿಎಲ್ ಪ್ರಸಾರ ನಿಷೇಧಿಸಿತ್ತು. ಆದರೆ ಇತ್ತೀಚೆಗಷ್ಟೇ ಈ ನಿಷೇಧ ಹಿಂಪಡೆಯಲಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.