ವಿಶ್ವಕಪ್ ಗೆದ್ದ ನಾಯಕ ಸದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ..?

By Naveen KodaseFirst Published Jun 27, 2022, 3:44 PM IST
Highlights

* ಇಯಾನ್ ಮಾರ್ಗನ್ ಸದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಸಾಧ್ಯತೆ
* 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಮಾರ್ಗನ್
* ಸತತ ಫಾರ್ಮ್ ಹಾಗೂ ಫಿಟ್ನೆಸ್‌ ಸಮಸ್ಯೆಯಿಂದ ಬಳಲುತ್ತಿದ್ದ ಮಾರ್ಗನ್

ಲಂಡನ್(ಜೂ.27): ಇಂಗ್ಲೆಂಡ್ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್‌ (Eoin Morgan) ದಯನೀಯ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸುತ್ತಿದ್ದು, ಸದ್ಯದಲ್ಲಿಯೇ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ. 35 ವರ್ಷ ವಯಸ್ಸಿನ ಇಯಾನ್ ಮಾರ್ಗನ್‌, 2019ರಲ್ಲಿ ತವರಿನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. 

2019ರ ಏಕದಿನ ವಿಶ್ವಕಪ್ (2019 World Cup) ಗೆಲುವಿನ ಬಳಿಕ ಇಯಾನ್ ಮಾರ್ಗನ್‌, ಬ್ಯಾಟಿಂಗ್ ಫಾರ್ಮ್ ಸಮಸ್ಯೆ ಎದುರಿಸುತ್ತಾ ಬಂದಿದ್ದಾರೆ. ಇನ್ನು ಇತ್ತೀಚೆಗಷ್ಟೇ ಕ್ರಿಕೆಟ್ ಶಿಶು ಎನಿಸಿಕೊಂಡಿರುವ ನೆದರ್ಲೆಂಡ್ಸ್‌ ಎದುರಿನ ಮೊದಲೆರಡು ಪಂದ್ಯದಲ್ಲಿ ಇಯಾನ್ ಮಾರ್ಗನ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ್ದರು. ಮೂರನೇ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಮಾರ್ಗನ್ ಕಣಕ್ಕಿಳಿದಿರಲಿಲ್ಲ. ಇಯಾನ್ ಮಾರ್ಗನ್, ಪದೇ ಪದೇ ಫಿಟ್ನೆಸ್ ಹಾಗೂ ಫಾರ್ಮ್ ಸಮಸ್ಯೆ ಎದುರಿಸುತ್ತಲೇ ಬಂದಿದ್ದಾರೆ. ಹೀಗಾಗಿ ಮಾರ್ಗನ್ ತಮ್ಮ ಕ್ರಿಕೆಟ್ ಭವಿಷ್ಯದ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ ಎಂದು ದ ಗಾರ್ಡಿಯನ್ ಪತ್ರಿಕೆಯು ವರದಿ ಮಾಡಿದೆ. ಒಂದು ವೇಳೆ ಇಯಾನ್ ಮಾರ್ಗನ್, ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕತ್ವದಿಂದ ಕೆಳಗಿಳಿದರೇ ವಿಕೆಟ್ ಕೀಪರ್ ಬ್ಯಾಟರ್‌ ಜೋಸ್ ಬಟ್ಲರ್ (Jos Buttler), ಪೂರ್ಣ ಪ್ರಮಾಣದಲ್ಲಿ ಇಂಗ್ಲೆಂಡ್ ವೈಟ್ ಬಾಲ್ ತಂಡದ ನಾಯಕರಾಗಿ ನೇಮಕವಾಗುವ ಸಾಧ್ಯತೆಯಿದೆ.

ಇಂಗ್ಲೆಂಡ್ ಕ್ರಿಕೆಟ್ ತಂಡವು ಸೀಮಿತ ಓವರ್‌ಗಳ ಸರಣಿಗೆ ಬಲಿಷ್ಠ ಮಧ್ಯಮ ಕ್ರಮಾಂಕವನ್ನು ಹೊಂದಿದೆ. ಇಂಗ್ಲೆಂಡ್ ತಂಡವು ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್ (Joe Root), ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್‌ (Ben Stokes), ಜಾನಿ ಬೇರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್ ಅವರಂತಹ ವಿಸ್ಪೋಟಕ ಬ್ಯಾಟರ್‌ಗಳನ್ನು ಹೊಂದಿದೆ. ಮುಂಬರುವ 2023ನೇ ಸಾಲಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಭಾರತದಲ್ಲಿ ನಡೆಯುವುದರಿಂದಾಗಿ, ಚಾಂಪಿಯನ್ ಪಟ್ಟವನ್ನು ತನ್ನಲ್ಲಿಯೇ ಉಳಿಸಿಕೊಳ್ಳಬೇಕಿದ್ದರೇ ಇಂಗ್ಲೆಂಡ್ ಕ್ರಿಕೆಟ್ ತಂಡವು ಈಗಿನಿಂದಲೇ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.

ನಾಯಕನಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ದಿಕ್ಕನ್ನೇ ಬದಲಿಸಿದ್ದ ಇಯಾನ್ ಮಾರ್ಗನ್

ಇತ್ತೀಚೆಗಿನ ಸಂದರ್ಶನಗಳಲ್ಲಿ ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್‌, ಲಿಯಾಮ್ ಲಿವಿಂಗ್‌ಸ್ಟೋನ್‌ ಹಾಗೂ ಹೊಸ ಇಂಗ್ಲೆಂಡ್ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ಹೆಡ್ ಕೋಚ್ ಮ್ಯಾಥ್ಯೂ ಮೋಟ್ ಕೂಡಾ ಇಯಾನ್ ಮಾರ್ಗನ್ ಅವರನ್ನು ಸಮರ್ಥಿಸಿಕೊಂಡಿದ್ದರು. ಇಂಗ್ಲೆಂಡ್ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕನಾಗಿ ಕಳೆದ 28 ಪಂದ್ಯಗಳಿಂದ ಇಯಾನ್ ಮಾರ್ಗನ್ ಕೇವಲ ಎರಡು ಬಾರಿ ಮಾತ್ರ ಅರ್ಧಶತಕ ಬಾರಿಸಿದ್ದಾರೆ. ಹೀಗಾಗಿ ಇಂಗ್ಲೆಂಡ್‌ನಂತಹ ಬಲಿಷ್ಠ ತಂಡವನ್ನು ಮುನ್ನಡೆಸುವಾಗ ಇಷ್ಟು ಕಳಪೆ ಪ್ರದರ್ಶನದೊಂದಿಗೆ ತಂಡದಲ್ಲಿ ಮುಂದುವರೆಯುವುದು ತಮಗೂ ಒಳ್ಳೆಯದಲ್ಲ ಎನ್ನುವ ಭಾವನೆ ಇಯಾನ್‌ ಮಾರ್ಗನ್ ಬಳಿ ಸುಳಿದಾಡಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಹೂಡಾ ಆರ್ಭಟ, ಐರ್ಲೆಂಡ್ ಮಣಿಸಿ ಶುಭಾರಂಭ ಮಾಡಿದ ಟೀಂ ಇಂಡಿಯಾ

2015ರ ಐಸಿಸಿ ಏಕದಿನ ವಿಶ್ವಕಪ್ ಮುಕ್ತಾಯವಾಗುತ್ತಿದ್ದಂತೆಯೇ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಆಲಿಸ್ಟರ್ ಕುಕ್ ಅವರಿಂದ ಇಯಾನ್ ಮಾರ್ಗನ್ ಇಂಗ್ಲೆಂಡ್ ಸೀಮಿತ ಓವರ್‌ಗಳ ನಾಯಕತ್ವವನ್ನು ಸ್ವೀಕರಿಸಿದ್ದರು. ಆದರೆ ಕೇವಲ ನಾಲ್ಕು ವರ್ಷಗಳೊಳಗಾಗಿ ಬಲಿಷ್ಠ ತಂಡವನ್ನು ಕಟ್ಟಿ ಇಂಗ್ಲೆಂಡ್‌ಗೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಡುವಲ್ಲಿ ಇಯಾನ್ ಮಾರ್ಗನ್ ಯಶಸ್ವಿಯಾಗಿದ್ದರು.

click me!