
ಡಬ್ಲಿನ್(ಜೂ.27): ಭಾರತ ಹಾಗೂ ಐರ್ಲೆಂಡ್ (India vs Ireland) ತಂಡಗಳ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ 7 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವು 1-0 ಅಂತರದ ಮುನ್ನಡೆ ಸಾಧಿಸಿದೆ. ಮಳೆಯಿಂದಾಗಿ 12 ಓವರ್‌ಗಳ ಪಂದ್ಯದಲ್ಲಿ 109 ರನ್‌ಗಳ ಸಾಧಾರಣ ಗುರಿ ಪಡೆದಿದ್ದ ಟೀಂ ಇಂಡಿಯಾ (Team India) ಇನ್ನೂ 16 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಇನ್ನು ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ವೇಗದ ಅಸ್ತ್ರ ಉಮ್ರಾನ್ ಮಲಿಕ್ ಕೂಡಾ ಭಾರತ ತಂಡದ ಪರ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದರು. ಇದೆಲ್ಲದರಾಚೆಗೆ ಭುವನೇಶ್ವರ್ ಕುಮಾರ್ ಮಾಡಿದ ವೇಗದ ದಾಳಿ ಕ್ರಿಕೆಟ್ ಅಭಿಮಾನಿಗಳ ಆಶ್ಚರ್ಯಚಕಿತರನ್ನಾಗಿಸಿದೆ.
ಹೌದು, ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ತಂಡವು ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಐರ್ಲೆಂಡ್ ತಂಡದ ಪರ ಪೌಲ್ ಸ್ಟೆರ್ಲಿಂಗ್ ಹಾಗೂ ಆಂಡ್ರ್ಯೂ ಬಲ್ಬಿರ್ನಿ ಇನಿಂಗ್ಸ್ ಆರಂಭಿಸಿದರು. ಪೌಲ್ ಸ್ಟೆರ್ಲಿಂಗ್, ಭುವನೇಶ್ವರ್ ಕುಮಾರ್ (Bhuvneshwar Kumar) ಎಸೆದ ಮೊದಲ ಚೆಂಡನ್ನು ಎದುರಿಸಿದರು. ವಿಕೆಟ್‌ನಿಂದ ಹೊರಹೋಗುತ್ತಿದ್ದ ಚೆಂಡನ್ನು ಬ್ಯಾಟ್‌ನಿಂದ ಟಚ್ ಮಾಡಲು ಸ್ಟೆರ್ಲಿಂಗ್ ಪ್ರಯತ್ನಿಸಲಿಲ್ಲ. ಆದರೆ ಈ ವೇಳೆ ಚೆಂಡಿನ ವೇಗದ ಮಿತಿಯನ್ನು ತೋರಿಸುವ ಸ್ಪೀಡ್ ಗನ್ ಭುವಿ ಎಸೆದ ಮೊದಲ ಚೆಂಡಿನ ವೇಗವನ್ನು ಗಂಟೆಗೆ 201 ಕಿಲೋ ಮೀಟರ್ ಎಂದು ತೋರಿಸಿತು.
ಇದು ಸ್ಪೀಡ್ ಗನ್‌ನಲ್ಲಿ ಕಂಡು ಬಂದ ದೋಷ ಎನ್ನುವುದು ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಭಾಸವಾಯಿತು. ಹೀಗಿದ್ದೂ ನೆಟ್ಟಿಗರೂ ಈ ಅವಕಾಶವನ್ನು ಬಳಸಿಕೊಂಡು ಕೆಲವೊಂದು ಜೋಕ್‌ಗಳನ್ನು ಹರಿಬಿಟ್ಟರು. ಹೀಗಿವೆ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆದ ಭುವನೇಶ್ವರ್ ಕುಮಾರ್ ವೇಗದ ಬೌಲಿಂಗ್ ಮೀಮ್ಸ್‌ಗಳು
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿವೇಗದ ಬೌಲಿಂಗ್ ದಾಳಿ ನಡೆಸಿದ ದಾಖಲೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ (Shoaib Akhtar) ಹೆಸರಿನಲ್ಲಿದೆ. ಅಖ್ತರ್, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರಲ್ಲಿ 161.3 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿರುವುದು ಇಲ್ಲಿಯವರೆಗೆ ದಾಖಲಾಗಿರುವ ಅತಿವೇಗದ ಅಂತಾರರಾಷ್ಟ್ರೀಯ ಎಸೆತ ಎನಿಸಿಕೊಂಡಿದೆ.
ಭಾರತ ಹೇಳಿದಂತೆಯೇ ಎಲ್ಲಾ ನಡೆಯುತ್ತೆ: ಇಂಡಿಯಾವನ್ನು ಕೊಂಡಾಡಿದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ
ಇನ್ನು ಐರ್ಲೆಂಡ್ ಎದುರಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಪ್ರದರ್ಶನದ ಬಗ್ಗೆ ಹೇಳುವುದಾದರೇ, ಭುವಿ, ಐರ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ 3 ಓವರ್ ಬೌಲಿಂಗ್ ಮಾಡಿ ಒಂದು ಮೇಡನ್ ಸಹಿತ ಕೇವಲ 16 ರನ್ ನೀಡಿ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಎದುರು ತವರಿನಲ್ಲಿ ಮುಕ್ತಾಯವಾದ 5 ಪಂದ್ಯಗಳ ಟಿ20 ಸರಣಿಯಲ್ಲೂ ಭುವನೇಶ್ವರ್ ಕುಮಾರ್ ಮಿಂಚಿನ ಬೌಲಿಂಗ್ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದರು. ಇದರೊಂದಿಗೆ ಮುಂಬರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಗೆ ಭಾರತ ತಂಡದೊಳಗೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಭುವನೇಶ್ವರ್ ಕುಮಾರ್ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.
ಇನ್ನೊಂದೆಡೆ ಇತ್ತೀಚೆಗಷ್ಟೇ ಮುಕ್ತಾಯವಾದ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2022) ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಮಾರಕ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದ ಉಮ್ರಾನ್ ಮಲಿಕ್ (Umran Malik), ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳಲು ವಿಫಲವಾದರು. ಉಮ್ರಾನ್ ಮಲಿಕ್, ಐರ್ಲೆಂಡ್ ಎದುರು ಮೊದಲ ಓವರ್‌ನಲ್ಲೇ 14 ರನ್ ನೀಡಿ ದುಬಾರಿಯಾದರು. ಆ ಬಳಿಕ ಉಮ್ರಾನ್ ಮಲಿಕ್‌ಗೆ ಬೌಲಿಂಗ್ ಮಾಡುವ ಅವಕಾಶ ಸಿಗಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.