
ಕಟಕ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 4 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಏಕದಿನ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ಜೋಸ್ ಬಟ್ಲರ್ ಪಡೆಗೆ ಮತ್ತೊಂದು ಶಾಕ್ ಎದುರಾಗಿದ್ದು, ತಂಡದ ಸ್ಪೋಟಕ ಬ್ಯಾಟರ್ ಜೇಕೊಬ್ ಬೆಥೆಲ್ ಗಾಯದ ಸಮಸ್ಯೆಯಿಂದಾಗಿ ಭಾರತ ಎದುರಿನ ಸರಣಿ ಮಾತ್ರವಲ್ಲದೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಬಿದ್ದಿದ್ದಾರೆ. ಇದು ಆರ್‌ಸಿಬಿ ಪಾಳಯದಲ್ಲೂ ಆತಂಕ ಮನೆ ಮಾಡುವಂತೆ ಮಾಡಿದೆ.
ಹೌದು, ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಇದೇ ಫೆಬ್ರವರಿ 19ರಿಂದ ಪಾಕಿಸ್ತಾನದಲ್ಲಿ ಆರಂಭವಾಗಲಿದೆ. ಭಾರತ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದ, ಜೇಕೊಬ್ ಬೆಥೆಲ್ ಎರಡನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಈ ಕುರಿತಂತೆ ಪ್ರತಿಕ್ರಿಯಿಸಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ಬೆಥೆಲ್ ಸ್ನಾಯುಸೆಳೆತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಭಾರತ ಎದುರಿನ ಸರಣಿಯ ಜತೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಬಿದ್ದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರೋಹಿತ್ ಶರ್ಮಾ ಗರ್ಜನೆಗೆ ಇಂಗ್ಲೆಂಡ್ ಢಮಾರ್! ಏಕದಿನ ಸರಣಿ ಗೆದ್ದ ಭಾರತ
ಇಂಗ್ಲೆಂಡ್‌ಗೆ ಬಿಗ್ ಶಾಕ್:
ಪ್ರತಿಭಾನ್ವಿತ ಎಡಗೈ ಬ್ಯಾಟರ್ ಆಗಿರುವ 22 ವರ್ಷದ ಜೇಕೊಬ್ ಬೆಥೆಲ್ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆಗೆ ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುವುದು ಅನುಮಾನ ಎನಿಸಿದ್ದರಿಂದಾಗಿ ಪ್ರತಿಷ್ಟಿತ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಭಾರತ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಬೆಥೆಲ್ ತಮ್ಮ ಆಲ್ರೌಂಡ್ ಆಟದ ಮೂಲಕ ಗಮನ ಸೆಳೆದಿದ್ದರು. ಬ್ಯಾಟಿಂಗ್‌ನಲ್ಲಿ ಆಕರ್ಷಕ 51 ರನ್ ಗಳಿಸಿದ್ದ ಬೆಥೆಲ್, ತಮ್ಮ ಎಡಗೈ ಸ್ಪಿನ್ ಮೂಲಕ 18 ರನ್ ನೀಡಿ ಒಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡಿದ್ದರು. ಉತ್ತಮ ಲಯದಲ್ಲಿದ್ದ ಬೆಥೆಲ್ ಅನುಪಸ್ಥಿತಿ ಇಂಗ್ಲೆಂಡ್ ತಂಡವನ್ನು ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಾಡುವ ಸಾಧ್ಯತೆಯಿದೆ.
ಇದೀಗ ಇಂಗ್ಲೆಂಡ್ ತಂಡವು ಜೇಕೊಬ್ ಬೆಥೆಲ್ ಬದಲಿಗೆ ಸೋಮರ್‌ಸೆಟ್‌ನ ಆಲ್ರೌಂಡರ್ ಟಾಮ್ ಬಾಂಟನ್ ಅವರನ್ನು ಭಾರತಕ್ಕೆ ಕರೆಸಿಕೊಂಡಿದೆ. ಮೂರನೇ ಪಂದ್ಯದಲ್ಲಿ ಟಾಮ್ ಬಾಂಟನ್ ಇಂಗ್ಲೆಂಡ್ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ 15ರ ಬಳಗದ ತಂಡದಲ್ಲಿ ಅಂತಿಮ ಹಂತದ ಬದಲಾವಣೆಗೆ ಫೆಬ್ರವರಿ 12ರ ವರಗೆ ಕಾಲಾವಕಾಶವಿದೆ. ಬೆಥೆಲ್ ಬದಲಿಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಇಂಗ್ಲೆಂಡ್ ತಂಡವನ್ನು ಕೂಡಿಕೊಳ್ಳುವವರು ಯಾರು ಎನ್ನುವ ಕುತೂಹಲ ಜೋರಾಗಿದೆ.
ಕೇವಲ 73 ಸೆಕೆಂಡ್‌ನಲ್ಲೇ ಓವರ್ ಮುಗಿಸಿ ರವೀಂದ್ರ ಜಡೇಜಾ ಹೊಸ ದಾಖಲೆ!
ಆರ್‌ಸಿಬಿ ಪಾಳಯದಲ್ಲೂ ಆತಂಕ:
ಮುಂಬರುವ ಮಾರ್ಚ್ 21ರಿಂದ ಆರಂಭವಾಗಲಿರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸಾಕಷ್ಟು ನಿರೀಕ್ಷೆಯಿಟ್ಟು ಜೇಕೊಬ್ ಬೆಥೆಲ್ ಅವರನ್ನು ಖರೀದಿಸಿತ್ತು. 1.25 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಜೇಕೊಬ್ ಬೆಥೆಲ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು 2.60 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ವಿಲ್ ಜ್ಯಾಕ್ಸ್ ಅವರ ಸ್ಥಾನವನ್ನು ಬೆಥೆಲ್ ತುಂಬಲಿದ್ದಾರೆ ಎನ್ನುವಂತಹ ಮಾತುಗಳು ಕೇಳಿಬಂದಿದ್ದವು. ಆದರೆ ಬೆಥೆಲ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು ಐಪಿಎಲ್ ವೇಳೆಗಾದರೂ ಫಿಟ್ ಆಗುತ್ತಾರೆಯೇ ಎನ್ನುವುದರ ಬಗ್ಗೆ ಯಾವುದೇ ಖಚಿತತೆ ಇಲ್ಲ. ಹೀಗಾಗಿ ಆರ್‌ಸಿಬಿ ಪಾಳಯದಲ್ಲಿ ಈಗಲೇ ಆತಂಕ ಮನೆ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.