
ಮ್ಯಾಂಚೆಸ್ಟರ್(ಜು.16): ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ವೆಸ್ಟ್‌ಇಂಡೀಸ್, ಗುರುವಾರದಿಂದ ಇಲ್ಲಿ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದೆ. ಈಗಾಗಲೇ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತು ಆಘಾತ ಅನುಭವಿಸಿರುವ ಆಂಗ್ಲರ ಪಡೆಗೆ ಮತ್ತೊಂದು ಶಾಕ್ ಎದುರಾಗಿದೆ.
ಹೌದು, ಇಂಗ್ಲೆಂಡ್ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಬಯೋ ಸೆಕ್ಯೂರ್ ಪ್ರೋಟೋಕಾಲ್ ನಿಯಮ ಉಲ್ಲಂಘಿಸಿದ ತಪ್ಪಿಗಾಗಿ ಆರ್ಚರ್ ಮೇಲೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶಿಸ್ತು ಕ್ರಮ ತೆಗೆದುಕೊಂಡಿದ್ದು, ಎರಡನೇ ಪಂದ್ಯದಿಂದ ಕಿಕೌಟ್ ಮಾಡಿದೆ. ಇದೀಗ ಆರ್ಚರ್ ಐದು ದಿನಗಳ ಕಾಲ ಐಸೋಲೇಷನ್‌ನಲ್ಲಿ ಇರಬೇಕಿದ್ದು, ಈ ಅವಧಿಯಲ್ಲಿ ಎರಡು ಬಾರಿ ಕೊರೋನಾ ಟೆಸ್ಟ್‌ಗೆ ಒಳಪಡಬೇಕಾಗಿದೆ. ತಾನು ಮಾಡಿದ ತಪ್ಪಿಗಾಗಿ ಆರ್ಚರ್ ಈಗಾಗಲೇ ಕ್ಷಮೆ ಯಾಚಿಸಿದ್ದಾರೆ.
ಕೊರೋನಾ ಭೀತಿಯ ನಡುವೆ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆರಂಭವಾಗಿದೆ. ಇದರ ಜತೆಗೆ ಬಯೋ ಸೆಕ್ಯೂರ್ ಝೋನ್ ನಿರ್ಮಾಣ ಮಾಡಲಾಗಿದ್ದು, ಈ ವ್ಯಾಪ್ತಿ ಮೀರಿ ಆಟಗಾರರು ಹೊರ ಹೋಗುವಂತಿಲ್ಲ.
ಮೊದಲ ಟೆಸ್ಟ್‌ನಲ್ಲಿ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದ್ದ ವಿಂಡೀಸ್, ಈ ಪಂದ್ಯದಲ್ಲೂ ಜಯಗಳಿಸುವ ವಿಶ್ವಾಸದಲ್ಲಿದೆ. 2014ರ ಬಳಿಕ ಇಂಗ್ಲೆಂಡ್ ತವರಿನಲ್ಲಿ ಸರಣಿ ಸೋತಿಲ್ಲ. ಈ ಪಂದ್ಯಕ್ಕೆ ಜೋ ರೂಟ್ ವಾಪಸಾಗಲಿದ್ದು, ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.
ಕಳೆದ 32 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡವು ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಿಲ್ಲ. ಹೀಗಾಗಿ ಈ ಪಂದ್ಯವನ್ನು ಜಯಿಸಿದರೆ ಟೆಸ್ಟ್ ಸರಣಿ ಗೆಲ್ಲುವುದರ ಜತೆಗೆ ಮ್ಯಾಂಚೆಸ್ಟರ್‌ನಲ್ಲಿ ಮೂರು ದಶಕಗಳ ಬಳಿಕ ವಿಂಡೀಸ್ ಗೆಲುವಿನ ಸಿಹಿ ಉಂಡಂತಾಗಲಿದೆ. 3 ಪಂದ್ಯಗಳ ಸರಣಿಯ ಕೊನೆ ಪಂದ್ಯ ಜು.24ರಿಂದ ಮ್ಯಾಂಚೆಸ್ಟರ್ನಲ್ಲೇ ನಡೆಯಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.