
ನವದೆಹಲಿ(ಮೇ.10): ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಅಕ್ಟೋಬರ್ 05ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿವೆ. ಇನ್ನು ಫೈನಲ್ ಪಂದ್ಯವು ಇದೇ ಮೈದಾನದಲ್ಲಿ ನವೆಂಬರ್ 19ರಂದು ಜರುಗಲಿದೆ.
ಬಲ್ಲ ಮೂಲಗಳ ಪ್ರಕಾರ, ಭಾರತ ಕ್ರಿಕೆಟ್ ತಂಡವು ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು, ಈ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಮೈದಾನ ಆತಿಥ್ಯ ವಹಿಸುವ ಸಾಧ್ಯತೆಯಿದೆ. ಇನ್ನು ಏಕದಿನ ವಿಶ್ವಕಪ್ ಟೂರ್ನಿಯ ಬಹುನಿರೀಕ್ಷಿತ ಪಂದ್ಯವಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಅಕ್ಟೋಬರ್ 15ರಂದು ನಡೆಯುವ ಸಾಧ್ಯತೆಯಿದ್ದು, ಈ ಪಂದ್ಯಕ್ಕೆ ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸದ್ಯದಲ್ಲಿಯೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಎಲ್ಲವೂ ಅಂದುಕೊಂಡಂತೆ ಆದರೆ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮುಗಿಯುತ್ತಿದ್ದಂತೆಯೇ ಏಕದಿನ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ನಿಚ್ಚಳವಾಗಿದೆ.
ಇನ್ನು ಮಹತ್ತರ ಬೆಳವಣಿಗೆಯೊಂದರಲ್ಲಿ ಏಕದಿನ ವಿಶ್ವಕಪ್ ಟೂರ್ನಿಗೆ ಪಾಲ್ಗೊಳ್ಳುವ ಸಲುವಾಗಿ ಭಾರತ ಪ್ರವಾಸ ಮಾಡಲು ಪಾಕಿಸ್ತಾನ ಒಪ್ಪಿಕೊಂಡಿದೆ. ಏಷ್ಯಾಕಪ್ ಟೂರ್ನಿಯ ಆಯೋಜನೆಯ ಕುರಿತಂತೆ ಇನ್ನೂ ಗೊಂದಲಗಳು ಇರುವುದರ ನಡುವೆಯೂ ಪಾಕಿಸ್ತಾನ ತಂಡವು ಭಾರತ ಪ್ರವಾಸ ಮಾಡಲಿದೆ ಎಂದು ತಿಳಿದುಬಂದಿದೆ.
ಸದ್ಯದ ವರದಿಗಳ ಪ್ರಕಾರ ಪಾಕಿಸ್ತಾನ ತಂಡವು ತನ್ನ ಪಾಲಿನ ಬಹುತೇಕ ಪಂದ್ಯಗಳನ್ನು ಅಹಮದಾಬಾದ್, ಹೈದರಾಬಾದ್, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಆಡಲಿದೆ. ಪಾಕಿಸ್ತಾನದ ಪಂದ್ಯಗಳನ್ನು ದಕ್ಷಿಣದ ರಾಜ್ಯಗಳಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಎಲ್ಲಾ ತಂಡಗಳು ಒಟ್ಟು 9 ಲೀಗ್ ಪಂದ್ಯಗಳನ್ನು ಆಡಲಿದ್ದು, ನಾಗ್ಪುರ, ಬೆಂಗಳೂರು, ತಿರುವನಂತಪುರಂ, ಮುಂಬೈ, ಡೆಲ್ಲಿ, ಲಖನೌ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ರಾಜ್‌ಕೋಟ್, ಇಂದೋರ್ ಹಾಗೂ ಧರ್ಮಶಾಲಾದಲ್ಲಿ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕಾಗಿ ತಂಡಗಳು ಕಾದಾಡಲಿವೆ. ಈ ಎಲ್ಲಾ ನಗರಗಳ ಪೈಕಿ ಕೇವಲ 7 ನಗರಗಳ ಸ್ಟೇಡಿಯಂಗಳಲ್ಲಿ ಮಾತ್ರ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳನ್ನು ಆಡಲಿದೆ. ಅಹಮದಾಬಾದ್‌ನಲ್ಲಿ ಭಾರತ ತಂಡವು ಎರಡು ಪಂದ್ಯಗಳನ್ನಾಡುವ ಸಾಧ್ಯತೆಯಿದೆ.
ODI World Cup 2023: ಇಂಡೋ-ಪಾಕ್ ಕದನಕ್ಕೆ ಮೋದಿ ಸ್ಟೇಡಿಯಂ ಆತಿಥ್ಯ..! ಬೆಂಗ್ಳೂರರಿಗೂ ಗುಡ್ ನ್ಯೂಸ್
ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳುತ್ತಿದ್ದು, 48 ಪಂದ್ಯಗಳನ್ನಾಡಲಿವೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಈಗಾಗಲೇ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿವೆ. ಇನ್ನು ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ತಂಡ ಕೂಡಾ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆಯಲು ಯಶಸ್ವಿಯಾಗಿದೆ.
ಇನ್ನೆರಡು ಸ್ಥಾನಗಳಿಗಾಗಿ ಜೂನ್ ಹಾಗೂ ಜುಲೈನಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಜಿಂಬಾಬ್ವೆಯಲ್ಲಿ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ಗಳಾದ ವೆಸ್ಟ್ ಇಂಡೀಸ್, ಶ್ರೀಲಂಕ ಸೇರಿದಂತೆ ಆತಿಥೇಯ ಜಿಂಬಾಬ್ವೆ, ನೆದರ್‌ಲೆಂಡ್ಸ್, ಐರ್ಲೆಂಡ್, ನೇಪಾಳ, ಓಮನ್, ಸ್ಕಾಟ್ಲೆಂಡ್, ಯುಎಇ ತಂಡಗಳು ಸೆಣಸಾಡಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.