
ಕರಾಚಿ(ಸೆ.15): ಪಾಕಿಸ್ತಾನ ವಿರುದ್ದ ಐತಿಹಾಸಿಕ 7 ಪಂದ್ಯಗಳ ಟಿ20 ಸರಣಿಯನ್ನಾಡಲು ಇಂಗ್ಲೆಂಡ್ ಕ್ರಿಕೆಟ್ ತಂಡವು, ಕರಾಚಿಗೆ ಬಂದಿಳಿದಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡವು ಬರೋಬ್ಬರಿ 17 ವರ್ಷಗಳ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ನೆಲದಲ್ಲಿ ದ್ವಿಪಕ್ಷೀಯ ಸರಣಿಯನ್ನಾಡಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಆಡಲಿರುವ ಕೊನೆಯ ಟಿ20 ಸರಣಿ ಇದಾಗಲಿದೆ.
ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ನೇತೃತ್ವದ ತಂಡವು ತಮ್ಮ ಚಾರ್ಟೆಡ್ ವಿಮಾನದ ಮೂಲಕ ಕರಾಚಿ ಏರ್‌ಪೋರ್ಟ್‌ಗೆ ಬಂದಿಳಿದಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳು, ಇಂಗ್ಲೆಂಡ್ ತಂಡವನ್ನು ಕರಾಚಿ ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದರು. ಇಂಗ್ಲೆಂಡ್ ಕ್ರಿಕೆಟ್ ತಂಡವು ಕರಾಚಿ ಹಾಗೂ ಲಾಹೋರ್‌ನಲ್ಲಿ ಪಾಕಿಸ್ತಾನ ವಿರುದ್ದ 7 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಸೆಪ್ಟೆಂಬರ್ 20, 22, 23 ಹಾಗೂ 25ರಂದು ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಮೊದಲ 4 ಟಿ20 ಪಂದ್ಯಗಳು ನಡೆದರೇ, ಲಾಹೋರ್‌ನ ಗಢಾಫಿ ಸ್ಟೇಡಿಯಂನಲ್ಲಿ ಇನ್ನುಳಿದ ಮೂರು ಪಂದ್ಯಗಳು(ಸೆಪ್ಟೆಂಬರ್ 28, 30 ಹಾಗೂ ಅಕ್ಟೋಬರ್ 02) ನಡೆಯಲಿವೆ. ಇನ್ನು 7 ಪಂದ್ಯಗಳ ಟಿ20 ಸರಣಿಯನ್ನು ಮುಗಿಸಿ ಇಂಗ್ಲೆಂಡ್ ತಂಡವು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಟಿ20 ವಿಶ್ವಕಪ್ ಮುಗಿಸಿಕೊಂಡು ಮತ್ತೆ ಪಾಕಿಸ್ತಾನಕ್ಕೆ ವಾಪಸ್ಸಾಗಲಿರುವ ಇಂಗ್ಲೆಂಡ್ ತಂಡವು, ಡಿಸೆಂಬರ್‌ನಲ್ಲಿ ಪಾಕಿಸ್ತಾನ ಎದುರು 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ICC T20 World Cup: ಇಂಡೋ-ಪಾಕ್ ಪಂದ್ಯದ ಹೆಚ್ಚುವರಿ ಟಿಕೆಟ್ಸ್ ಕೆಲವೇ ನಿಮಿಷಗಳಲ್ಲಿ ಸೋಲ್ಡೌಟ್..!
ಇಂಗ್ಲೆಂಡ್ ಕ್ರಿಕೆಟ್ ತಂಡವು ಕರಾಚಿ ಏರ್ಪೋರ್ಟ್‌ನಿಂದ ನೇರವಾಗಿ ಈ ಮೊದಲೇ ನಿಗದಿಯಾಗಿದ್ದ ಹೋಟೆಲ್‌ಗೆ ತೆರಳಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇಂಗ್ಲೆಂಡ್ ಕ್ರಿಕೆಟ್ ತಂಡವು 2005ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನದಲ್ಲಿ ಕ್ರಿಕೆಟ್ ಪಂದ್ಯಗಳನ್ನಾಡಿತ್ತು. ಇದಾದ ಬಳಿಕ ನಾನಾ ಕಾರಣಗಳಿಂದಾಗಿ ಪಾಕ್ ನೆಲದಲ್ಲಿ ಕ್ರಿಕೆಟ್ ಸರಣಿಯನ್ನಾಡಲು ಇಂಗ್ಲೆಂಡ್ ತಂಡವು ತಂಡವು ಹಿಂದೇಟು ಹಾಕಿತ್ತು. ಇನ್ನು ಕಳೆದ ಕೆಲ ವರ್ಷಗಳಿಂದ ಇಂಗ್ಲೆಂಡ್ ತಂಡದ ಕೆಲವು ಆಟಗಾರರು ಪಾಕಿಸ್ತಾನದಲ್ಲಿ ನಡೆಯುವ ಪಾಕಿಸ್ತಾನ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಶ್ರೀಲಂಕಾ ವಿರುದ್ದ ಮುಗ್ಗರಿಸುವ ಮೂಲಕ ಟ್ರೋಫಿ ಜಯಿಸಲು ವಿಫಲವಾಗಿತ್ತು. ಇದೀಗ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ತವರಿನಲ್ಲಿ ಬಲಿಷ್ಠ ಇಂಗ್ಲೆಂಡ್ ಎದುರು ಭರ್ಜರಿ ಪ್ರದರ್ಶನ ತೋರುವ ಮೂಲಕ ಚುಟುಕು ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ದತೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ.
2021ರ ಅಕ್ಟೋಬರ್ ತಿಂಗಳಿನಲ್ಲಿ, ಇಂಗ್ಲೆಂಡ್ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಪಾಕಿಸ್ತಾನ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಆಟಗಾರರ ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೋವಿಡ್ ಕಟ್ಟುನಿಟ್ಟಾದ ಬಯೋಬಬಲ್ ವ್ಯವಸ್ಥೆಯಲ್ಲಿರುವ ಇಂಗ್ಲೆಂಡ್ ಆಟಗಾರರು ಹಿಂದೇಟು ಹಾಕಿದ್ದರಿಂದ ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್ ತಂಡವು ಪಾಕ್ ಪ್ರವಾಸದಿಂದ ಹಿಂದೆ ಸರಿದಿತ್ತು. ಇದು ಭದ್ರತೆಯ ನೆಪವೊಡ್ಡಿ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಪಾಕಿಸ್ತಾನದಲ್ಲಿ ಸರಣಿಯನ್ನಾಡಲು ಹಿಂದೆ ಸರಿದ ಮೂರು ದಿನಗಳ ಬಳಿಕ ಇಂಗ್ಲೆಂಡ್ ಈ ನಿರ್ಧಾರವನ್ನು ಪ್ರಕಟಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.