
ವೆಲ್ಲಿಂಗ್ಟನ್(ಮಾ.01): ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಫಾಲೋ-ಆನ್‌ಗೆ ತುತ್ತಾಗಿ ಸೋಲಿನ ಭೀತಿಗೊಳಗಾಗಿದ್ದರೂ ನ್ಯೂಜಿಲೆಂಡ್ ಅಧ್ಬುತ ರೀತಿಯಲ್ಲಿ ಕಮ್ಬ್ಯಾಕ್ ಮಾಡಿ 1 ರನ್ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿತು.
ಗೆಲುವಿಗೆ 258 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ 4ನೇ ದಿನ 1ಕ್ಕೆ 48 ರನ್ ಗಳಿಸಿತ್ತು. ಕೊನೆ ದಿನ ಕೊನೆವರೆಗೆ ಹೋರಾಡಿದರೂ ವೀರೋಚಿತ ಸೋಲು ಕಂಡಿತು. 80ಕ್ಕೆ 5 ವಿಕೆಟ್ ಕಳೆದುಕೊಂಡರೂ ರೂಟ್(95)-ಬೆನ್ ಸ್ಟೋಕ್ಸ್(33) 6ನೇ ವಿಕೆಟ್ಗೆ 121 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕೊನೆಯಲ್ಲಿ ಬೆನ್ ಫೋಕ್ಸ್ 35 ರನ್ ಸಿಡಿಸಿದರೂ ತಂಡಕ್ಕೆ ಜಯ ದಕ್ಕಲಿಲ್ಲ. 2 ರನ್ ಬೇಕಿದ್ದಾಗ ವ್ಯಾಗ್ನರ್ ಎಸೆತದಲ್ಲಿ ಆ್ಯಂಡರ್ಸನ್ ವಿಕೆಟ್ಕೀಪರ್ ಬ್ಲಂಡೆಲ್ಗೆ ಕ್ಯಾಚ್ ನೀಡುವುದರೊಂದಿಗೆ ಕಿವೀಸ್ ಜಯಸಾಧಿಸಿತು ವ್ಯಾಗ್ನರ್ 4 ವಿಕೆಟ್ ಕಿತ್ತರು. ಇಂಗ್ಲೆಂಡ್ ಮೊದಲ ಇನ್ನಿಂಗ್್ಸನಲ್ಲಿ 8ಕ್ಕೆ 435 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಬಳಿಕ ಕಿವೀಸ್ ಕೇವಲ 209ಕ್ಕೆ ಆಲೌಟಾಗಿ ಫಾಲೋ-ಆನ್‌ಗೆ ತುತ್ತಾಗಿ, 2ನೇ ಇನ್ನಿಂಗ್್ಸನಲ್ಲಿ 483ಕ್ಕೆ ಆಲೌಟಾಯಿತು.
1 ರನ್ ಗೆಲುವು: ಕಿವೀಸ್ 2ನೇ ತಂಡ
ಟೆಸ್ಟ್‌ನಲ್ಲಿ ತಂಡವೊಂದು 1 ರನ್‌ನಿಂದ ಗೆಲುವು ಸಾಧಿಸಿದ್ದು ಇದು 2ನೇ ಬಾರಿ. ಈ ಮೊದಲು 30 ವರ್ಷಗಳ ಹಿಂದೆ ಅಂದರೆ 1993ರಲ್ಲಿ ಆಸ್ಪ್ರೇಲಿಯಾವನ್ನು ವೆಸ್ಟ್ಇಂಡೀಸ್ 1 ರನ್‌ನಿಂದ ಮಣಿಸಿತ್ತು.
ಫಾಲೋಆನ್ ಬಳಿಕ ಗೆದ್ದ 3ನೇ ತಂಡ ಕಿವೀಸ್
ಫಾಲೋ-ಆನ್‌ಗೆ ಗುರಿಯಾದರೂ ಪಂದ್ಯ ಗೆದ್ದಿದ್ದು ಇದು 4ನೇ ಬಾರಿ. ಈ ಪೈಕಿ ಇಂಗ್ಲೆಂಡ್ 2 ಬಾರಿ ಸಾಹಸ ಮಾಡಿದೆ. 1894 ಹಾಗೂ 1981ರಲ್ಲಿ ಆಸೀಸ್ ವಿರುದ್ಧ ಇಂಗ್ಲೆಂಡ್ ಕ್ರಮವಾಗಿ 10 ಹಾಗೂ 18 ರನ್ ಗೆಲುವು ಸಾಧಿಸಿತ್ತು. 2001ರಲ್ಲಿ ಭಾರತ ತಂಡ ಆಸೀಸ್ ವಿರುದ್ಧ ಫಾಲೋ-ಆನ್‌ಗೆ ತುತ್ತಾದರೂ 171 ರನ್ ಜಯಗಳಿಸಿತ್ತು.
ಹೇಗಿತ್ತು ಎರಡನೇ ಟೆಸ್ಟ್ ಪಂದ್ಯ
ವೆಲ್ಲಿಂಗ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. ಬಜ್‌ಬಾಲ್ ಶೈಲಿ ಅಳವಡಿಸಿಕೊಂಡಿರುವ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ಹ್ಯಾರಿ ಬ್ರೂಕ್(186) ಹಾಗೂ ಮಾಜಿ ನಾಯಕ ಜೋ ರೂಟ್ 158* ಬಾರಿಸಿದ ಅಮೋಘ ಶತಕಗಳ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 435 ರನ್‌ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಆತಿಥೇಯ ನ್ಯೂಜಿಲೆಂಡ್ ತಂಡವು ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಆಂಡರ್‌ಸನ್ ಮಾರಕ ದಾಳಿಗೆ ತತ್ತರಿಸಿ ಕೇವಲ 209 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ನ್ಯೂಜಿಲೆಂಡ್ ತಂಡವು 226 ರನ್‌ಗಳ ಬೃಹತ್ ಹಿನ್ನಡೆ ಅನುಭವಿಸಿದ್ದರಿಂದ ಇಂಗ್ಲೆಂಡ್ ತಂಡವು ಆತಿಥೇಯರ ಮೇಲೆ ಫಾಲೋ ಆನ್ ಹೇರಿತು.
Eng vs NZ: ಕಿವೀಸ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕೇನ್ ವಿಲಿಯಮ್ಸನ್..!
ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್‌ಗೆ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಆಕರ್ಷಕ ಶತಕ(132), ಆರಂಭಿಕರಾದ ಟಾಮ್ ಲೇಥಮ್(83), ಡೆವೊನ್ ಕಾನ್‌ವೇ(61), ಡೇರಲ್ ಮಿಚೆಲ್(54) ಹಾಗೂ ಟಾಮ್ ಬ್ಲಂಡೆಲ್(90) ಅವರ ಕೆಚ್ಚೆದೆಯ ಅರ್ಧಶತಕಗಳ ನೆರವಿನಿಂದ 483 ರನ್ ಬಾರಿಸಿ ಸರ್ವಪತನ ಕಂಡಿತು. ಈ ಮೂಲಕ ಇಂಗ್ಲೆಂಡ್‌ಗೆ ಎರಡನೇ ಟೆಸ್ಟ್ ಗೆಲ್ಲಲು 258 ರನ್‌ಗಳ ಗುರಿ ನೀಡಿತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಜೋ ರೂಟ್(95) ಶತಕ ವಂಚಿತ ಬ್ಯಾಟಿಂಗ್ ಹೊರತಾಗಿಯೂ 256 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ರೋಚಕ ಸೋಲು ಅನುಭವಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.