ಟಿ20 ವಿಶ್ವಕಪ್ ಪಂದ್ಯಗಳು ನಡೆಯೋ ಸ್ಟೇಡಿಯಂ ಖಾಲಿ ಖಾಲಿ...! ಯಾಕೆ ಹೀಗೆ?

By Suvarna News  |  First Published Jun 8, 2024, 12:33 PM IST

ಅಮೆರಿಕ-ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಆರಂಭವಾಗಿ ವಾರ ಕಳೆದಿದೆ. ಆದರೂ ಈ ಸಲದ ವಿಶ್ವಕಪ್‌ಗೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಐಸಿಸಿ ಪಾಲಿಗೆ ಚಿನ್ನದ ಮೊಟ್ಟೆಯಾಗಿರುವ ಟೀಂ ಇಂಡಿಯಾದ ಪಂದ್ಯವೇ ಖಾಲಿ ಸ್ಟೇಡಿಯಂನಲ್ಲಿ ನಡೆದಿದೆ.


ಬೆಂಗಳೂರು: ಟಿ20 ವಿಶ್ವಕಪ್ ನಡೆಯುತ್ತಿದೆ. ಹೌದಾ ಅಂತ ಹುಬ್ಬೇರಿಸಬೇಡಿ.! ಅಮೆರಿಕ-ವೆಸ್ಟ್ ಇಂಡೀಸ್ನಲ್ಲಿ 9ನೇ ಸೀಸನ್ ಟಿ20 ವಿಶ್ವಕಪ್ ಆರಂಭವಾಗಿ ವಾರ ಕಳೆದಿದೆ. ಆದ್ರೂ ಎಲ್ಲಿಯೂ ಸುದ್ದಿ ಮತ್ತು ಸದ್ದಿಲ್ಲ. ಇದಕ್ಕೆ ಕಾರಣ ಮೂರು. ಈ ಮೂರು ರೀಸನ್ನಿಂದ ಐಸಿಸಿಗೆ ಕೋಟಿ ಕೋಟಿ ಲಾಸ್ ಆದ್ರೂ ಆಶ್ಚರ್ಯವಿಲ್ಲ. ಈಗ ಐಸಿಸಿಯನ್ನು ಭಾರತ-ಪಾಕಿಸ್ತಾನ ಪಂದ್ಯವೇ ಕಾಪಾಡಬೇಕು.

ಟೀಂ ಇಂಡಿಯಾ ಪಂದ್ಯಗಳನ್ನೇ ನೋಡೋರು ಗತಿಯಿಲ್ಲ..!

Tap to resize

Latest Videos

ಅಮೆರಿಕ-ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಆರಂಭವಾಗಿ ವಾರ ಕಳೆದಿದೆ. ಆದರೂ ಈ ಸಲದ ವಿಶ್ವಕಪ್‌ಗೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಐಸಿಸಿ ಪಾಲಿಗೆ ಚಿನ್ನದ ಮೊಟ್ಟೆಯಾಗಿರುವ ಟೀಂ ಇಂಡಿಯಾದ ಪಂದ್ಯವೇ ಖಾಲಿ ಸ್ಟೇಡಿಯಂನಲ್ಲಿ ನಡೆದಿದೆ. ಹೌದು, ಐರ್ಲೆಂಡ್ ವಿರುದ್ಧದ ಪಂದ್ಯವೇ ಇದಕ್ಕೆ ಸಾಕ್ಷಿ. ನ್ಯೂಯಾರ್ಕ್‌ನಲ್ಲಿ ನಡೆದ ಪಂದ್ಯಕ್ಕೆ ಅಭಿಮಾನಿಗಳ ಕೊರತೆ ಎದ್ದು ಕಾಣುತ್ತಿತ್ತು. ಕಾರಣ ಟೀಂ ಇಂಡಿಯಾದ ಪಂದ್ಯಗಳ ಟಿಕೆಟ್ ದರ ದುಬಾರಿಯಾಗಿರುವುದು ಮತ್ತು ಐಸಿಸಿಯ ಕಳಪೆ ಮಾರ್ಕೆಟಿಂಗ್ ಯೋಜನೆ ಎಂದು ಹೇಳಲಾಗುತ್ತಿದೆ. 

ಖಾಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯಗಳು

ಸದ್ಯ ನಡೆದಿರುವ ಪಂದ್ಯಗಳಲ್ಲಿ ಒಂದು ಪಂದ್ಯಕ್ಕೂ ಸ್ಟೇಡಿಯಂ ಭರ್ತಿಯಾಗಿಲ್ಲ. ಉಳಿದ ಮ್ಯಾಚ್ಗಳಲ್ಲೂ ಇದೇ ಕಥೆಯಾದರೆ ಈ ಬಾರಿ ಐಸಿಸಿ ಬೊಕ್ಕಸಕ್ಕೆ ಭಾರಿ ನಷ್ಟವಾಗಲಿದೆ. ಹೊಡಿಬಡಿ ಆಟದಿಂದಾಗಿ ಅಭಿಮಾನಿಗಳಿಗೆ ಮನರಂಜನೆ ನೀಡುವುದೇ ಟಿ20 ಮಾದರಿ. ಹೀಗಾಗಿ ಈ ಬಾರಿ 2 ದೇಶಗಳಲ್ಲಿ ಟಿ20 ವಿಶ್ವಕಪ್ ಆಯೋಜಿಸುವ ಮೂಲಕ ಭರ್ಜರಿ ಲಾಭ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದ್ದ ಐಸಿಸಿಯ ಯೋಜನೆ ಉಲ್ಟಾ ಹೊಡೆದಿದೆ. ಇದುವರೆಗೆ ನಡೆದಿರುವ 12 ಪಂದ್ಯಗಳೂ ಭಾಗಶಃ ಖಾಲಿ ಕ್ರೀಡಾಂಗಣದಲ್ಲೇ ನಡೆದಿವೆ. ಇದಕ್ಕೆ ಪ್ರಮುಖ ಕಾರಣ ಐಸಿಸಿ ನಿಗದಿಪಡಿಸಿರುವ ಟಿಕೆಟ್ ದರ.

ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಪಾಕ್ ವೇಗಿ..? ಅಮೆರಿಕ ಎದುರು ಪಾಕ್ ಮೋಸದಾಟ..!

ಟಿಕೆಟ್ ದುಬಾರಿ, ಸೌಲಭ್ಯವೂ ಇಲ್ಲ..!

ಭಾರತ-ಐರ್ಲೆಂಡ್ ಪಂದ್ಯಕ್ಕೆ ಕ್ರೀಡಾಂಗಣದ ಪ್ರೀಮಿಯಂ ಉತ್ತರ ಮತ್ತು ದಕ್ಷಿಣ ಸ್ಟ್ಯಾಂಡ್‌ಗಳ ಟಿಕೆಟ್‌ಗಳ ಬೆಲೆ ಸುಮಾರು ಒಂದು ಸಾವಿರ ಯುಎಸ್‌ ಡಾಲರ್‌ ಅಂದರೆ 83 ಸಾವಿರ ರೂಪಾಯಿ ನಿಗದಿಪಡಿಸಲಾಗಿತ್ತು. ಆದರೆ ಈ ಟಿಕೆಟ್‌ಗಳನ್ನು ಯಾರೂ ಖರೀದಿಸಿರಲಿಲ್ಲ. ಅಲ್ಲದೆ ಸ್ಟೇಡಿಯಂನಲ್ಲಿ ಅಳವಡಿಸಿದ್ದ ಪರದೆಯ ಸುತ್ತಲೂ ಖಾಲಿ ಆಸನಗಳು ಇದ್ದಿದ್ದರಿಂದ ಪಂದ್ಯ ನೇರ ಪ್ರಸಾರ ಮಾಡುವವರಿಗೂ ಮುಜುಗರ ತಂದಿತ್ತು. 34 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಸುಮಾರು 20 ಸಾವಿರ ಪ್ರೇಕ್ಷಕರು ಹಾಜರಿದ್ದರು. ಪಂದ್ಯ ನೋಡಲು ಬಂದವರು ಸಹ ಸ್ಟೇಡಿಯಂನಲ್ಲಿನ ವ್ಯವಸ್ಥೆ, ಸೌಲಭ್ಯಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದರು.

ಭಾರತ-ಪಾಕ್ ಪಂದ್ಯದ ಟಿಕೆಟ್ ಸೋಲ್ಟ್ ಔಟ್ ಆಗಿಲ್ಲ

ನಾಳೆ ನ್ಯೂಯಾರ್ಕ್ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ ಎಂದು ಹೇಳಲಾಗಿತ್ತು. ಆದ್ರೀಗ ಇನ್ನೂ ಟಿಕೆಟ್ಸ್ ಇವೆ ಅನ್ನೋ ಸುದ್ದಿ ಇದೆ. ಬದ್ಧವೈರಿಗಳ ಕಾಳಗಕ್ಕಾದ್ರೂ ಸ್ಟೇಡಿಯಂ ಭರ್ತಿಯಾಗಲಿ ಅಂತ ಐಸಿಸಿ ಪಾರ್ಥಿಸುವಂತಾಗಿದೆ. ಇದಕ್ಕೆಲ್ಲಾ ಇನ್ನೊಂದು ಕಾರಣ ನ್ಯೂಯಾರ್ಕ್‌ ಸ್ಟೇಡಿಯಂನ ಕೆಟ್ಟ ಪಿಚ್. ಇಲ್ಲಿ ನಡೆದಿರುವ ಪಂದ್ಯಗಳಲ್ಲಿ ರನ್ನೇ ಬಂದಿಲ್ಲ. 

ಅಮೆರಿಕ ಟೀಂ ಯಶಸ್ಸಿನ ಹಿಂದೆ ಭಾರತೀಯರ ಪಾತ್ರ; ಐತಿಹಾಸಿಕ ಗೆಲುವಿನ ಹಿಂದೆ ಬರೋಬ್ಬರಿ 7 ಮಂದಿ ಭಾರತೀಯರು..!

ಐಸಿಸಿಗೆ ಅಮೆರಿಕವೇ ಮುಳುವಾಗುಯ್ತಾ..?

ಟಿ20 ವಿಶ್ವಕಪ್ ಅನ್ನು ಅಮೆರಿಕದಲ್ಲಿ ಆಯೋಜಿಸುವ ಐಸಿಸಿ ನಿರ್ಧಾರ ಯಾಕೋ ಕೈಕೊಡುವಂತೆ ಕಾಣ್ತಿದೆ. ಭಾರತ-ಪಾಕ್ ಪಂದ್ಯಕ್ಕೆ ಸ್ಟೇಡಿಯಂಗೆ ಜನ ಬರದಿದ್ದರೆ ಉಳಿದ ಪಂದ್ಯಗಳಿಗೆ ಎಲ್ಲಿಂದ ಬರ್ತಾರೆ. ಪ್ರೇಕ್ಷಕರನ್ನು ಕ್ರೀಡಾಂಗಣಕ್ಕೆ ಕರೆತರಲು ಸಂಘಟಕರು ಹೆಣಗಾಡುತ್ತಿದ್ದಾರೆ.  ಮಾರುಕಟ್ಟೆಯನ್ನು ಸಂಶೋಧಿಸದೆ ಅಮೆರಿಕದಲ್ಲಿ ವಿಶ್ವಕಪ್ ನಡೆಸಲು ಐಸಿಸಿ ಆತುರದ ನಿರ್ಧಾರಕೈಗೊಂಡಿರುವುದು ಹಿನ್ನಡೆಯಾಗುವ ಸಾಧ್ಯತೆಯೂ ಇದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!