* ದುಲೀಪ್ ಟ್ರೋಫಿ ಟೂರ್ನಿ ಫೈನಲ್‌ಗೆ ಲಗ್ಗೆಯಿಟ್ಟ ದಕ್ಷಿಣ ವಲಯ, ಪೂರ್ವ ವಲಯ
* ಆಕರ್ಷಕ ಬ್ಯಾಟಿಂಗ್ ಮೂಲಕ ಮಿಂಚಿದ ಮಯಾಂಕ್ ಅಗರ್‌ವಾಲ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ
* ಕೇಂದ್ರ ವಲಯ ಎದುರು ಡ್ರಾ ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟ ಪಶ್ಚಿಮ ವಲಯ
ಬೆಂಗಳೂರು
ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕಳೆದ ಬಾರಿಯಂತೆಯೇ ಈ ಬಾರಿಯೂ ದಕ್ಷಿಣ ಹಾಗೂ ಪಶ್ಚಿಮ ವಲಯಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಶನಿವಾರ ಮುಕ್ತಾಯಗೊಂಡ ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯ ತಂಡ ಉತ್ತರ ವಲಯವನ್ನು 2 ವಿಕೆಟ್‌ಗಳಿಂದ ರೋಚಕವಾಗಿ ಮಣಿಸಿ ಫೈನಲ್‌ಗೇರಿತು.
undefined
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ವಲಯದ ಗೆಲುವಿಗೆ 215 ರನ್ ಗುರಿ ನಿಗದಿಪಡಿಸಲಾಗಿತ್ತು. 3ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 21 ರನ್ ಗಳಿಸಿದ್ದ ತಂಡಕ್ಕೆ ಕೊನೆ ದಿನವಾದ ಶನಿವಾರ 194 ರನ್ ಗಳಿಸಬೇಕಿತ್ತು. ಮಯಾಂಕ್ ಅಗರ್‌ವಾಲ್ ಮತ್ತೆ ತಂಡಕ್ಕೆ ಆಸರೆಯಾಗಿ 54 ರನ್ ಸಿಡಿಸಿದರು. ನಾಯಕ ಹನುಮ ವಿಹಾರಿ 43, ರಿಕ್ಕಿ ಭುಯಿ 34 ರನ್ ಕೊಡುಗೆ ನೀಡಿದರು. ಆದರೆ 191ಕ್ಕೆ 4 ವಿಕೆಟ್ ಕಳೆದುಕೊಂಡು ಗೆಲುವಿನ ಸನಿಹಕ್ಕೆ ಬಂದಿದ್ದ ದಕ್ಷಿಣ ತಂಡ ಬಳಿಕ 22 ರನ್ ಗಳಿಸುವಷ್ಟರಲ್ಲಿ ಮತ್ತೆ 4 ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೊಳಗಾಯಿತು. ಆದರೆ ಸಾಯಿ ಕಿಶೋರ್ 15 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಪಂದ್ಯಕ್ಕೆ ಹಲವು ಬಾರಿ ಮಳೆ ಅಡ್ಡಿಪಡಿಸಿದ್ದರಿಂದ ಉತ್ತರತಂಡ ಪಂದ್ಯ ಡ್ರಾಗೊಳ್ಳುವ ನಿರೀಕ್ಷೆಯಲ್ಲಿತ್ತು. ಪಂದ್ಯ ಡ್ರಾ ಆಗಿದ್ದರೆ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಉತ್ತರ ಫೈನಲ್‌ಗೇರುತ್ತಿತ್ತು.
Duleep Trophy ಆರ್‌ಸಿಬಿ ವೇಗಿ ವೈಶಾಖ್ ಮಾರಕ ದಾಳಿ: ದಕ್ಷಿಣ ವಲಯಕ್ಕೆ ಜಯದ ನಿರೀಕ್ಷೆ!
ಸ್ಕೋರ್: ಉತ್ತರ ವಲಯ 198/10, ಮತ್ತು 211/10
ದಕ್ಷಿಣ ವಲಯ 195/10 ಮತ್ತು 219/8(ಮಯಾಂಕ್ 54, ವಿಹಾರಿ 43, ಹರ್ಷಿತ್ ರಾಣಾ 3-84)
ಪಂದ್ಯಶ್ರೇಷ್ಠ: ಮಯಾಂಕ್ ಅಗರ್‌ವಾಲ್
ದಕ್ಷಿಣಕ್ಕೆ 24ನೇ ಫೈನಲ್
1961ರಲ್ಲಿ ಆರಂಭಗೊಂಡ ಟೂರ್ನಿಯಲ್ಲಿ ದಕ್ಷಿಣ ವಲಯ ಈವರೆಗೆ 23 ಬಾರಿ ಫೈನಲ್‌ಗೇರಿದ್ದು, 13 ಬಾರಿ ಚಾಂಪಿಯನ್ ಆಗಿದೆ. ಪಶ್ಚಿಮ ವಲಯ 33 ಸಲ ಫೈನಲ್ ತಲುಪಿ 18 ಬಾರಿ ಪ್ರಶಸ್ತಿ ಗೆದ್ದಿದೆ. ಕಳೆದ ಬಾರಿಯೂ ಉಭಯ ತಂಡಗಳೇ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಪಶ್ಚಿಮ ಚಾಂಪಿಯನ್ ಆಗಿತ್ತು. ಈ ಬಾರಿಯ ಫೈನಲ್ ಜು.12ಕ್ಕೆ ಆರಂಭಗೊಳ್ಳಲಿದೆ.
ಡ್ರಾ ಆದ್ರೂ ಫೈನಲ್ ಪ್ರವೇಶಿಸಿದ ಪಶ್ಚಿಮ
ಆಲೂರಿನಲ್ಲಿ ಕೇಂದ್ರ ಹಾಗೂ ಪಶ್ಚಿಮ ವಲಯಗಳ ನಡುವಿನ ಮತ್ತೊಂದು ಸೆಮೀಸ್ ಪಂದ್ಯ ಡ್ರಾಗೊಂಡಿತು. ಆದರೆ ಮೊದಲ ಇನ್ನಿಂಗ್ಸ್ ಆಧಾರದ ಮೇಲೆ ಪಶ್ಚಿಮ ಫೈನಲ್‌ಗೇರಿತು. 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 9 ವಿಕೆಟ್‌ಗೆ 292 ರನ್ ಗಳಿಸಿದ್ದ ಪಶ್ಚಿಮ ತಂಡ ಕೊನೆ ದಿನ ಅದಕ್ಕೆ 5 ರನ್ ಸೇರಿಸಿ ಆಲೌಟ್ ಆಯಿತು. ಇದರೊಂದಿಗೆ ಕೇಂದ್ರಕ್ಕೆ ಗೆಲುವಿಗೆ 390 ರನ್ ಗುರಿ ಲಭಿಸಿತು. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಿದ್ದರಿಂದ ಕೇಂದ್ರ ತಂಡ 35 ಓವರ್‌ಗಳಲ್ಲಿ 4 ವಿಕೆಟ್‌ಗೆ 128 ರನ್ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು.