ಬೆಂಗಳೂರಿನಲ್ಲಿ ನಡೆಯುತ್ತಿರವ ದುಲೀಪ್ ಟ್ರೋಫಿ ಸೆಮಿಫೈನಲ್
ಉತ್ತರ ವಲಯ ಎದುರು ದಕ್ಷಿಣ ವಲಯಕ್ಕೆ 3 ರನ್ ಇನಿಂಗ್ಸ್ ಹಿನ್ನಡೆ
ಆಕರ್ಷಕ ಅರ್ಧಶತಕ ಚಚ್ಚಿದ ಉಪನಾಯಕ ಮಯಾಂಕ್ ಅಗರ್‌ವಾಲ್
ಬೆಂಗಳೂರು(ಜು.07): ಮಾರಕ ದಾಳಿ ಮೂಲಕ ಉತ್ತರ ವಲಯವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರೂ ಬ್ಯಾಟಿಂಗ್ ವೈಫಲ್ಯಕ್ಕೊಳಗಾದ ದಕ್ಷಿಣ ವಲಯ ತಂಡ ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದೆ. ಉಪನಾಯಕ ಮಯಾಂಕ್ ಅಗರ್‌ವಾಲ್(76) ಸಮಯೋಚಿತ ಅರ್ಧಶತಕದ ಹೊರಯಾಗಿಯೂ ದಕ್ಷಿಣ ವಲಯ 3 ರನ್ ರೋಚಕ ಹಿನ್ನಡೆ ಅನುಭವಿಸಿತು.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಉತ್ತರ ವಲಯದ 198 ರನ್‌ಗೆ ಉತ್ತವಾಗಿ ದಕ್ಷಿಣ ವಲಯ ತಂಡ 195 ರನ್‌ಗೆ ಆಲೌಟಾಗಿ 3 ರನ್ ಮುನ್ನಡೆ ಬಿಟ್ಟುಕೊಟ್ಟಿತು. ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿರುವ ಉತ್ತರ ವಲಯ 2ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 51 ರನ್ ಗಳಿಸಿದ್ದು, 54 ರನ್ ಮುನ್ನಡೆಯಲ್ಲಿದೆ.
undefined
ಮಯಾಂಕ್ ಆಸರೆ: ಮೊದಲ ದಿನವೇ 35 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ವಲಯಕ್ಕೆ ಗುರುವಾರ ಕನ್ನಡಿಗ ಮಯಾಂಕ್ ಅಗರ್‌ವಾಲ್ ಅಸರೆಯಾದರು. 5ನೇ ವಿಕೆಟ್‌ಗೆ ತಿಲಕ್ ವರ್ಮಾ ಜೊತೆ 110 ರನ್ ಜೊತೆಯಾಟವಾಡಿ ತಂಡವನ್ನು ಕಡಿಮೆ ಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಆದರೆ ಅವರಿಗೆ ಉತ್ತರ ವಲಯದ ನಾಯಕ ಜಯಂತ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ತಿಲಕ್ ವರ್ಮಾ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಸಾಯಿ ಕಿಶೋರ್(21), ವಾಷಿಂಗ್ಟನ್ ಸುಂದರ್(12) ಮಾತ್ರ ಎರಡಂಕಿ ಮೊತ್ತ ದಾಟಿದರು. ಉತ್ತರ ವಲಯ ಪರ ಜಯಂತ್, ವೈಭವ್ ಅರೋರಾ ತಲಾ 3 ವಿಕೆಟ್ ಪಡೆದರು.
Duleep Trophy: ವಿದ್ವತ್ ಕಾವೇರಪ್ಪ ಮಾರಕ ದಾಳಿಗೆ ಉತ್ತರ ತತ್ತರ
ಬಳಿಕ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಉತ್ತರ ವಲಯ ಧ್ರುವ್ ಶೋರೆ (05) ಹಾಗೂ ಪ್ರಶಾಂತ್ ಚೋಪ್ರಾ ವಿಕೆಟ್ ಅನ್ನು ಬೇಗನೇ ಕಳೆದುಕೊಂಡಿತು. ಧ್ರುವ್‌ಗೆ ವೈಶಾಖ್, ಪ್ರಶಾಂತ್‌ಗೆ ವಿದ್ವತ್ ಕಾವೇರಪ್ಪ ಪೆವಿಲಿಯನ್ ಹಾದಿ ತೋರಿಸಿದರು. ಅಂಕಿತ್ ಕಾಲ್ಸಿ(21) ಹಾಗೂ ಪ್ರಭ್‌ಸಿಮ್ರನ್ ಸಿಂಗ್(06) ಕ್ರೀಸ್‌ನಲ್ಲಿದ್ದಾರೆ.
ಸ್ಕೋರ್:
ಉತ್ತರ ವಲಯ 198/10, ದಕ್ಷಿಣ ವಲಯ 195/10 (ಮಯಾಂಕ್ 76, ತಿಲಕ್ 46, ಜಯಂತ್ 3-38)
ಉತ್ತರ ವಲಯ(2ನೇ ದಿನದಂತ್ಯಕ್ಕೆ) 51/2 (ಅಂಕಿತ್ 21, ಪ್ರಶಾಂತ್ 19, ಕಾವೇರಪ್ಪ 1-17)
ಪಶ್ಚಿಮ ವಲಯಕ್ಕೆ ದೊಡ್ಡ ಮುನ್ನಡೆ
ಬೆಂಗಳೂರು: ಆಲೂರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮತ್ತೊಂದು ಸೆಮೀಸ್ ಪಂದ್ಯದಲ್ಲಿ ಕೇಂದ್ರ ವಲಯ ವಿರುದ್ಧ ಪಶ್ಚಿಮ ವಲಯ ಮುನ್ನಡೆ ಪಡೆಯಲು ಯಶಸ್ವಿಯಾಗಿದೆ. ಮೊದಲ ದಿನ 8 ವಿಕೆಟ್‌ಗೆ 216 ರನ್ ಗಳಿಸಿದ್ದ ಪಶ್ಚಿಮ ವಲಯ ಗುರುವಾರ 220ಕ್ಕೆ ಆಲೌಟಾಯಿತು. ಶಿವಂ ಮಾವಿ 6 ವಿಕೆಟ್ ಕಿತ್ತರು. ಬಳಿಕ ಕೇಂದ್ರ ವಲಯ ಕೇವಲ 128ಕ್ಕೆ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿತು.
ರಿಂಕು ಸಿಂಗ್(48), ಧ್ರುವ್ ಜುರೆಲ್(46) ಹೊರತುಪಡಿಸಿ ಉಳಿದ ಯಾವ ಬ್ಯಾಟರ್‌ಗೂ ಪಶ್ಚಿಮ ವಲಯದ ಬೌಲರ್‌ಗಳ ಬಿಗು ದಾಳಿಯನ್ನು ಸಮರ್ಥವಾಗಿ ಎದುರಿಸಲಾಗಲಿಲ್ಲ. ಅರ್ಜನ್ ನಾಗ್ವಸ್‌ವಾಲಾ 5 ವಿಕೆಟ್ ಪಡೆದರು. 2ನೇ ಇನ್ನಿಂಗ್ಸ್ ಆರಂಭಿಸಿದ ಪಶ್ಚಿಮ ವಲಯ 2ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 149 ರನ್ ಕಲೆಹಾಕಿದ್ದು, 241 ರನ್ ಮುನ್ನಡೆಯಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವಿಫಲರಾಗಿದ್ದ ಸೂರ್ಯಕುಮಾರ್ 52, ಚೇತೇಶ್ವರ್ ಪೂಜಾರ ಔಟಾಗದೆ 50 ರನ್ ಗಳಿಸಿ ತಂಡವನ್ನು ಮೇಲೆತ್ತಿದರು.