ಸರ್‌ ಡಾನ್ ಬ್ರಾಡ್ಮನ್‌ ಭಾರತ ವಿರುದ್ದ ಪಂದ್ಯದಲ್ಲಿ ಧರಿಸಿದ್ದ ಬ್ಯಾಗಿ ಗ್ರೀನ್ ₹2.63 ಕೋಟಿಗೆ ಹರಾಜು!

By Naveen Kodase  |  First Published Dec 4, 2024, 1:59 PM IST

ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ಅವರ ಬ್ಯಾಗಿ ಗ್ರೀನ್ ಕ್ಯಾಪ್ ದೊಡ್ಡ ಮೊತ್ತಕ್ಕೆ ಹರಾಜಾಗಿದೆ. ಭಾರತ ವಿರುದ್ದದ ಸರಣಿಯ ವೇಳೆ ಬ್ರಾಡ್ಮನ್ ಈ ಬ್ಯಾಗಿ ಗ್ರೀನ್ ಧರಿಸಿದ್ದರು ಎನ್ನುವುದು ವಿಶೇಷ.


ಸಿಡ್ನಿ: ಕ್ರಿಕೆಟ್‌ ದಂತಕಥೆ ಸರ್ ಡಾನ್ ಬ್ರಾಡ್ಮನ್‌ನ 'ಬ್ಯಾಗಿ ಗ್ರೀನ್' (ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅಧಿಕೃತ ಕ್ಯಾಪ್) ಮಂಗಳವಾರ ಬರೋಬ್ಬರಿ 4,79,700 ಆಸ್ಟ್ರೇಲಿಯನ್ ಡಾಲರ್ಸ್‌ (ಅಂದಾಜು 2.63 ಕೋಟಿ ರು.)ಗೆ ಹರಾಜಾಗಿದೆ. ಇಲ್ಲಿನ ಬೊನ್‌ಹ್ಯಾಮ್ಸ್ ಸಂಸ್ಥೆಯು ಹರಾಜು ಪ್ರಕ್ರಿಯೆಯನ್ನು ನಡೆಸಿದೆ. ಕ್ಯಾಪ್ ಅನ್ನು ಖರೀದಿಸಿದವರು ವಿವರ ಬಹಿರಂಗಗೊಂಡಿಲ್ಲ.

1947-48ರಲ್ಲಿ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಆಡಿದ್ದ ಟೆಸ್ಟ್ ಸರಣಿ ವೇಳೆ ಬ್ರಾಡ್ಮನ್ ಈ ಕ್ಯಾಪ್ ಧರಿಸಿದ್ದರು. ಅವರು ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಕೊನೆಯ ಟೆಸ್ಟ್ ಸರಣಿ ಅದಾಗಿತ್ತು. ಆ ಸರಣಿಯಲ್ಲಿ 6 ಇನ್ನಿಂಗ್ಸ್‌ಗಳಿಂದ ಬ್ರಾಡ್ಮನ್ 3 ಶತಕ, 1 ದ್ವಿಶತಕದೊಂದಿಗೆ 715 ರನ್ ಕಲೆಹಾಕಿದ್ದರು. ಆಸ್ಟ್ರೇಲಿಯಾ 4-0ಯಲ್ಲಿ ಸರಣಿ ಗೆದ್ದಿತ್ತು. ಭಾರತ ಸ್ವತಂತ್ರ ರಾಷ್ಟ್ರವಾದ ಬಳಿಕ ಪಾಲ್ಗೊಂಡ ಮೊದಲ ಸರಣಿ ಇದು ಎನ್ನುವುದು ಮತ್ತೊಂದು ವಿಶೇಷ.

Latest Videos

ಟೆಸ್ಟ್ ವಿಶ್ವಕಪ್ ಫೈನಲ್‌ ರೇಸ್‌ನಲ್ಲಿದ್ದ ನ್ಯೂಜಿಲೆಂಡ್‌ ತಂಡಕ್ಕೆ ಐಸಿಸಿ ಬಿಗ್ ಶಾಕ್!

80 ವರ್ಷದ ಹಿಂದೆ ಬ್ರಾಡ್ಮನ್ ಧರಿಸಿದ್ದ ಕ್ಯಾಪ್‌ನ ಬಣ್ಣ ಮಾಸಿತ್ತು. ಕೆಲವು ಕಡೆ ಹರಿದಿತ್ತು. 1947-48ರ ಸರಣಿ ಬಳಿಕ ಬ್ರಾಡನ್ ತಮ್ಮ ಕ್ಯಾಪ್ ಅನ್ನು ಅಂದಿನ ಭಾರತ ತಂಡದ ವ್ಯವಸ್ಥಾಪಕರಾಗಿದ್ದ ಪಂಕಜ್ ಗುಪ್ತಾಗೆ ನೀಡಿದ್ದರು. ಗುಪ್ತಾ ಅದನ್ನು ಭಾರತದ ಮಾಜಿ ವಿಕೆಟ್ ಕೀಪರ್ ಪಿ.ಕೆ.ಸೇನ್‌ಗೆ ನೀಡಿದ್ದರು.

undefined

2003ರಲ್ಲಿ ಹಿಂದಿನ ಮಾಲಿಕರಿಂದ ಬೊನ್‌ಹ್ಯಾಮ್ಸ್ ಸಂಸ್ಥೆಯು ಕ್ಯಾಪ್ ಅನ್ನು ಖರೀದಿಸಿತ್ತು. ಕ್ಯಾಪ್ ಅನ್ನು 2010ರಿಂದ ಈ ತನಕ ಬ್ರಾಡ್ಮನ್‌ನ ಹುಟ್ಟೂರು ಬೌರಾಲ್ ನಲ್ಲಿರುವ ಬ್ರಾಡನ್ ಮ್ಯೂಸಿಯಂಗೆ ಬಾಡಿಗೆಗೆ ಕೊಡಲಾಗಿತ್ತು. ಬ್ರಾಡ್ಮನ್‌ ಕ್ಯಾಪ್ ಇಷ್ಟು ದೊಡ್ಡ ಮೊತ್ತಕ್ಕೆ ಬಿಕರಿಯಾಗುತ್ತಿರುವುದು ಇದೇ ಮೊದಲಲ್ಲ. 2020ರಲ್ಲಿ ಬ್ರಾಡ್ಮನ್ ಆಸ್ಟ್ರೇಲಿಯಾ ತಂಡಕ್ಕೆ ಪಾದಾರ್ಪಣೆ ಮಾಡಿದಾಗ ಧರಿಸಿದ್ದ ಕ್ಯಾಪ್ 3.4 ಲಕ್ಷ ಆಸ್ಟ್ರೇಲಿಯನ್ ಡಾಲ‌ರ್‌ಗೆ ಹರಾಜಾಗಿತ್ತು.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸ್ಥಿರ ಪ್ರದರ್ಶನಕ್ಕೆ ಹೆಸರಾಗಿದ್ದ ಡಾನ್ ಬ್ರಾಡ್ಮನ್ 52 ಟೆಸ್ಟ್ ಪಂದ್ಯಗಳನ್ನಾಡಿ 99.94ರ ಸರಾಸರಿಯಲ್ಲಿ 29 ಶತಕ ಹಾಗೂ 13 ಅರ್ಧಶತಕ ಸಹಿತ 6996 ರನ್ ಬಾರಿಸಿದ್ದರು. 

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರಲು ಭಾರತ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಡಾನ್ ಬ್ಯಾಡ್ಮನ್ ಬಗೆಗಿನ 5 ಇಂಟ್ರೆಸ್ಟಿಂಗ್ ಸಂಗತಿಗಳಿವು:

1. ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಕ್ರಿಕೆಟ್ ದಂತಕಥೆ ಬ್ರಾಡ್ಮನ್ ಒಮ್ಮೆಯೂ ಸ್ಟಂಪ್‌ ಔಟ್ ಆಗಿಲ್ಲ. ಎರಡು ಟೆಸ್ಟ್ ಪಂದ್ಯಗಳಲ್ಲಿ ಒಂದು ಇನಿಂಗ್ಸ್‌ನಲ್ಲಿ ಶತಕ ಮತ್ತೊಂದು ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ ಆಸ್ಟ್ರೇಲಿಯಾ ಏಕೈಕ ಬ್ಯಾಟ್ಸ್‌ಮನ್ ಬ್ರಾಡ್ಮನ್

2. ನೈಟ್‌ಹುಡ್‌ ಪದವಿ ಪಡೆದ ಆಸ್ಟ್ರೇಲಿಯಾದ ಏಕೈಕ ಕ್ರಿಕೆಟಿಗ ಸರ್‌ ಡಾನ್ ಬ್ರಾಡ್ಮನ್. ಜೀವಂತವಾಗಿರುವಾಗಲೇ ಅವರ ಪೋಸ್ಟ್ ಸ್ಟಾಂಪ್‌ ಫೋಟೋ ರಾರಾಜಿಸುತ್ತಿತ್ತು.

3. ಬ್ರಾಡ್ಮನ್ ಆಡಿದ ಕೊನೆಯ ಟೆಸ್ಟ್ ಇನಿಂಗ್ಸ್‌ನಲ್ಲಿ ಕೇವಲ 4 ರನ್ ಬಾರಿಸಿದ್ದರೆ ಅವರ ಬ್ಯಾಟಿಂಗ್ ಸರಾಸರಿ 100 ಆಗಿರುತಿತ್ತು. ಆದರೆ ವಿದಾಯದ ಪಂದ್ಯದಲ್ಲಿ ಬ್ರಾಡ್ಮನ್ ಕೇವಲ ಎರಡು ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದರು.

4. ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ದಿನ ತ್ರಿಶತಕ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಬ್ರಾಡ್ಮನ್. 1930ರಲ್ಲಿ ಹೆಡಿಗ್ಲೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಬ್ರಾಡ್ಮನ್ 309 ಚಚ್ಚಿದ್ದರು.

5. ಬ್ರಾಡ್ಮನ್ ತಮ್ಮ 92ನೇ ವಯಸ್ಸಿನಲ್ಲಿ ಅಂದರೆ 25 ಫೆಬ್ರವರಿ 2001ರಲ್ಲಿ ದಕ್ಷಿಣ ಆಸ್ಟ್ರೇಲಿಯಾದ ಕಿಂಗ್ಸ್‌ಟನ್‌ ಪಾರ್ಕ್‌ನಲ್ಲಿ ಕೊನೆಯುಸಿರೆಳೆದರು.

click me!