ದೇಶೀಯ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆಗೆ ಸಜ್ಜಾದ ಬಿಸಿಸಿಐ, ಎರಡು ಹಂತದಲ್ಲಿ ನಡೆಯಲಿದೆ ರಣಜಿ ಟ್ರೋಫಿ!

By Santosh Naik  |  First Published May 11, 2024, 10:12 PM IST

ಈ ಸಲಹೆಗಳನ್ನು ಕ್ರಿಕೆಟ್ ಸಮಿತಿಯು ಮುಂದಿಟ್ಟಿದ್ದು, ಅನುಮೋದನೆಗಾಗಿ ಅಪೆಕ್ಸ್ ಕೌನ್ಸಿಲ್ ಮುಂದೆ ಮಂಡಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.


ಮುಂಬೈ (ಮೇ.11): ಮುಂಬರುವ 2024-25ರ ದೇಶೀಯ ಕ್ರಿಕೆಟ್‌ ಋತುವಿಗಾಗಿ ಬಿಸಿಸಿಐ ಮಹತ್ವದ ಬದಲಾವಣೆ ಮಾಡಲು ಸಜ್ಜಾಗಿದೆ. ಅದರಂತೆ ದೇಶೀಯ ಕ್ರಿಕೆಟ್‌ನ ಮಹತ್ವದ ಟೂರ್ನಿ ರಣಜಿ ಟ್ರೋಫಿ ಎರಡು ಹಂತಗಳಲ್ಲಿ ನಡೆಯಲಿದೆ. ಇನ್ನು ಎರಡು ರಣಜಿ ಟ್ರೋಫಿ ಪಂದ್ಯಗಳ ನಡುವೆ ಆಟಗಾರರಿಗೆ ಮೂರು ದಿನಗಳ ಬದಲಾಗಿ ನಾಲ್ಕು ದಿನಗಳ ವಿಶ್ರಾಂತಿ ನೀಡುವ ಮೂಲಕ ಆಟಗಾರರ ವರ್ಕ್‌ಲೋಡ್‌ ಮ್ಯಾನೇಜ್‌ ಮಾಡಲು ಬಿಸಿಸಿಐ ನಿರ್ಧಾರ ಮಾಡಿದೆ. ಸಾಮಾನ್ಯವಾಗಿ ರಣಜಿ ಟ್ರೋಫಿ ನಡೆಯುವ ಅವಧಿಯಲ್ಲಿ ಉತ್ತರ ಭಾರತದಲ್ಲಿ ಚಳಿ ಹಾಗೂ ಮಂಜಿನ ವಾತಾವರಣ ಇರುತ್ತದೆ. ಇದರಿಂದ ಪಂದ್ಯಗಳಿಗೆ ಅಡ್ಡಿಯಾಗುತ್ತದೆ. ಹಾಗಾಗಿ ಎರಡು ಹಂತದಲ್ಲಿ ರಣಜಿ ಟ್ರೋಫಿ ನಡೆಸಲು ಬಿಸಿಸಿಐನ ಕ್ರಿಕೆಟ್‌ ಸಮಿತಿ ಪ್ರಸ್ತಾಪ ಮಾಡಿದೆ. ಇದನ್ನು ಅನುಮೋದನೆಗಾಗಿ ಅಪೆಕ್ಸ್‌ ಕೌನ್ಸಿಲ್‌ ಮುಂದೆ ಇಡಲಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಷಾ ಹೇಳಿದ್ದಾರೆ.

23 ವಯೋಮಿತಿಯ ಕರ್ನಲ್‌ ಸಿಕೆ ನಾಯ್ಡು ಟ್ರೋಫಿಯಲ್ಲಿ ಅತ್ಯಂತ ಮಹತ್ವದ ಸಂಗತಿಯನ್ನು ಪ್ರಸ್ತಾಪ ಮಾಡಲಾಗಿದೆ. ಇಲ್ಲಿ ಟಾಸ್‌ ಪ್ರಕ್ರಿಯೆ ಇರೋದಿಲ್ಲ. ಪ್ರವಾಸಿ ತಂಡಕ್ಕೆ ಬ್ಯಾಟಿಂಗ್‌ ಅಥವಾ ಬೌಲಿಂಗ್‌ನ ಆಯ್ಕೆಯನ್ನು ನೀಡಲಾಗುತ್ತದೆ. ಇನ್ನು ಪಾಯಿಂಟ್‌ಗಳನ್ನು ಬಾರಿಸಿದ ರನ್‌ಗಳು ಹಾಗೂ ತೆಗೆದುಕೊಂಡ ವಿಕೆಟ್‌ಗಳ ಆಧಾರದ ಮೇಲೆ ನೀಡಲಾಗುತ್ತದೆ.

ವಯೋಮಿತಿಯ ಕ್ರಿಕೆಟ್‌ ಟೂರ್ನಿಯಲ್ಲಿ ಪಾಯಿಂಟ್-ಸಿಸ್ಟಮ್ ಪ್ರಯೋಗವು ಯಶಸ್ವಿಯಾದರೆ, 2025-26 ರ ಋತುವಿನಿಂದ ರಣಜಿ ಟ್ರೋಫಿಯಲ್ಲಿ ಇದನ್ನು ಜಾರಿಗೆ ತರಲಾಗುತ್ತದೆ, ಇದು ತಂಡಗಳಿಗೆ ಸಂಪೂರ್ಣ ಗೆಲುವು ಸಾಧಿಸಲು ಪ್ರೋತ್ಸಾಹ ನೀಡುತ್ತದೆ ಎಂದು ತಿಳಿಸಲಾಗಿದೆ.

Tap to resize

Latest Videos

 

BCCI ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಕೈಬಿಡಲು ಈತನೇ ಕಾರಣ: ಜಯ್ ಶಾ

ಈ ಸಲಹೆಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕ್ರಿಕೆಟ್ ಸಮಿತಿಯು ಮುಂದಿಟ್ಟಿದೆ. ಅಭ್ಯಾಸದ ಪ್ರಕಾರ, ಕ್ರಿಕೆಟ್ ಸಮಿತಿಯ ಸಲಹೆಗಳನ್ನು ಅನುಮೋದನೆಗಾಗಿ ಅಪೆಕ್ಸ್ ಕೌನ್ಸಿಲ್ ಮುಂದೆ ಇಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಪ್ರಸ್ತಾವಿತ ನಾಲ್ಕು ದಿನಗಳ ಅಂತರವು ರಣಜಿ ಟ್ರೋಫಿ ನಿಯಮಿತ ಆಟಗಾರರಿಗೆ ಪಂದ್ಯಗಳ ನಡುವೆ ಚೇತರಿಸಿಕೊಳ್ಳಲು ಹೆಚ್ಚಿನ ಸಮಯವನ್ನು ನೀಡುತ್ತದೆ ಎಂದು ಶಾ ಹೇಳಿದರು. "ಆಟಗಾರರು ಚೇತರಿಸಿಕೊಳ್ಳಲು ಸಾಕಷ್ಟು ಸಮಯವನ್ನು ನೀಡಲು ಮತ್ತು ಋತುವಿನ ಉದ್ದಕ್ಕೂ ಗರಿಷ್ಠ ಪ್ರದರ್ಶನವನ್ನು ಕಾಯ್ದುಕೊಳ್ಳಲು ಪಂದ್ಯಗಳ ನಡುವೆ ಹೆಚ್ಚಿನ ವಿರಾಮವನ್ನು ಪ್ರಸ್ತಾಪ ಮಾಡಲಾಗಿದೆ' ಎಂದು ಶಾ ಹೇಳಿದರು.

ಉತ್ತರ ಪ್ರದೇಶ ಮೇಲೆ ಬ್ಯಾಟಿಂಗ್‌ ಪ್ರಹಾರ, ಸಿಕೆ ನಾಯ್ಡು ಟ್ರೋಫಿ ಗೆದ್ದ ಕರ್ನಾಟಕ

23 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಸಮತೋಲಿತ ಪ್ರದರ್ಶನವನ್ನು ಉತ್ತೇಜಿಸುವ ಗುರಿಯನ್ನು ಹೊಸ ಪಾಯಿಂಟ್‌ ವ್ಯವಸ್ಥೆ ಹೊಂದಿದೆ ಎಂದು ಶಾ ಹೇಳಿದರು. ಕಳೆದ ಋತುವಿನಲ್ಲಿ ಹೆಚ್ಚಿನ ಸಂಖ್ಯೆಯ ಅಂಡರ್-23 ಪಂದ್ಯಗಳು ನಾಲ್ಲೇ ಅವಧಿಯ ಆಟದಲ್ಲಿ ಮುಗಿದಿವೆ. ಇದು ಆತಂಕಕಾರಿ ಪ್ರವೃತ್ತಿಯಾಗಿದೆ ಎಂದು ಬಿಸಿಸಿಐ ತಿಳಿಸಿದೆ.

"ಸಿಕೆ ನಾಯ್ಡು ಟ್ರೋಫಿಯು ಸಮತೋಲಿತ ಪ್ರದರ್ಶನಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಹೊಸ ಅಂಕಗಳ ವ್ಯವಸ್ಥೆಯನ್ನು ಜಾರಿಗೊಳಿಸುತ್ತದೆ. ಮೊದಲ ಇನ್ನಿಂಗ್ಸ್ ಮುನ್ನಡೆ ಅಥವಾ ಸಂಪೂರ್ಣ ಗೆಲುವಿಗಾಗಿ ಪಾಯಿಂಟ್‌ಗಳ ಜೊತೆಗೆ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನಕ್ಕಾಗಿ ಅಂಕಗಳನ್ನು ನೀಡುವುದು ಇದರಲ್ಲಿ ಸೇರಿದೆ ಎಂದು ಶಾ ಹೇಳಿದರು. "ಮೊದಲು ಬ್ಯಾಟಿಂಗ್ ಮಾಡಬೇಕೆ ಅಥವಾ ಬೌಲಿಂಗ್ ಮಾಡಬೇಕೆ ಎಂದು ಆಯ್ಕೆ ಮಾಡುವ ಹಕ್ಕು ಪ್ರವಾಸಿ ತಂಡಕ್ಕೆ ಇರುತ್ತದೆ. ಹೊಸ ಅಂಕಗಳ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಋತುವಿನ ಕೊನೆಯಲ್ಲಿ ಒಂದು ವಿಮರ್ಶೆಯನ್ನು ನಡೆಸಲಾಗುವುದು. ಮುಂದಿನ ಋತುವಿನಲ್ಲಿ ಇದನ್ನು ರಣಜಿ ಟ್ರೋಫಿಯಲ್ಲಿ ಅಳವಡಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು,'' ಎಂದು ಶಾ ವಿವರಿಸಿದರು.

ಕ್ರಿಕೆಟ್ ಸಮಿತಿ ಸೂಚಿಸಿದ ಅಂಕಗಳ ವ್ಯವಸ್ಥೆ ಹೀಗಿದೆ. 150 ರನ್‌ಗಳಿಗೆ 1 ಪಾಯಿಂಟ್, 225 ರನ್ (2 ಅಂಕ), 300 ರನ್ (3 ಅಂಕ), 350 ರನ್ (4 ಅಂಕ) ಮತ್ತು 400 ರನ್ (5 ಅಂಕ). ಆದರೆ, 100 ಓವರ್‌ಗಳ ಒಳಗೆ ರನ್ ಗಳಿಸಬೇಕಾಗಿದೆ. 100 ಓವರ್‌ಗಳ ಒಳಗೆ ಪಡೆದ ವಿಕೆಟ್‌ಗಳ ಸಂಖ್ಯೆಯನ್ನು ಆಧರಿಸಿ ಬೌಲಿಂಗ್ ತಂಡಕ್ಕೆ ಅಂಕ ನೀಡಲಾಗುತ್ತದೆ.


 

click me!