ನಾನು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲಿಲ್ಲ: ಮೌನಮುರಿದ ಸೌರವ್ ಗಂಗೂಲಿ

By Naveen Kodase  |  First Published Dec 5, 2023, 6:31 PM IST

ನಾನು ಬಿಸಿಸಿಐ ಅಧ್ಯಕ್ಷರಾಗಿದ್ದು ಭಾರತ ಕ್ರಿಕೆಟ್ ತಂಡದ ಸುಧಾರಣೆಗಾಗಿಯೇ ಹೊರತು ಮತ್ತಿನ್ನೇನಕ್ಕೂ ಅಲ್ಲ. ಇಷ್ಟು ದೀರ್ಘ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.


ಬೆಂಗಳೂರು(ಡಿ.05): ಕಳೆದ ವರ್ಷ ಭಾರತ ಕ್ರಿಕೆಟ್ ತಂಡವು ಕೆಲವು ವಿವಾದಗಳಿಗೆ ಸಾಕ್ಷಿಯಾಗಿತ್ತು. ಈ ಪೈಕಿ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಟೀಂ ಇಂಡಿಯಾ ನಾಯಕರಾಗಿದ್ದ ವಿರಾಟ್ ಕೊಹ್ಲಿ, 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಭಾರತ ಟಿ20 ನಾಯಕತ್ವದಿಂದ ಕೆಳಗಿಳಿಯುವ ತೀರ್ಮಾನ ತೆಗೆದುಕೊಂಡಿದ್ದರು. ಇದಾದ ಬಳಿಕ ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಇದಾದ ಕೆಲವೇ ಸಮಯದ ಬಳಿಕ ವಿರಾಟ್ ಕೊಹ್ಲಿ ಸ್ವತಃ ಟೆಸ್ಟ್ ನಾಯಕತ್ವಕ್ಕೂ ಗುಡ್‌ ಬೈ ಹೇಳಿದ್ದರು.

ಆ ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದರು. ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲು ಸೌರವ್ ಗಂಗೂಲಿ ಅವರೇ ಕಾರಣ ಎನ್ನುವಂತಹ ಹಲವು ವರದಿಗಳು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದವು. ಆದರೆ ಈ ವಿಚಾರದ ಕುರಿತಂತೆ ಸೌರವ್ ಗಂಗೂಲಿ ಮೌನ ಮುರಿದಿದ್ದು, ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುವುದರ ಹಿಂದೆ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Latest Videos

undefined

2027ರ ಏಕದಿನ ವಿಶ್ವಕಪ್ ಟೂರ್ನಿ ವೇಳೆಗೆ ಟೀಂ ಇಂಡಿಯಾದ ಈ ಆಟಗಾರರಿಗೆ ಎಷ್ಟು ವಯಸ್ಸಾಗಿರಲಿದೆ?

"ನಾನು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲಿಲ್ಲ. ನಾನು ಈ ವಿಚಾರವನ್ನು ಹಲವಾರು ಬಾರಿ ಹೇಳಿದ್ದೇನೆ. ವಿರಾಟ್ ಕೊಹ್ಲಿ ಟಿ20 ತಂಡವನ್ನು ಮುನ್ನಡೆಸಲು ಆಸಕ್ತರಾಗಿರಲಿಲ್ಲ. ಇದು ಅವರದ್ದೇ ತೀರ್ಮಾನವಾಗಿತ್ತು. ನಾನು ಆಗ, ನೀವು ಒಂದು ವೇಳೆ ಟಿ20 ನಾಯಕತ್ವ ವಹಿಸಲು ಆಸಕ್ತಿ ಇಲ್ಲ ಎಂದಾದರೇ, ಸೀಮಿತ ಓವರ್‌ಗಳ ನಾಯಕತ್ವದಿಂದ ಕೆಳಗಿಳಿಯುವುದೇ ಒಳಿತು ಎಂದು ಹೇಳಿದ್ದೆ. ವೈಟ್‌ ಬಾಲ್ ಕ್ರಿಕೆಟ್‌ಗೆ ಹಾಗೂ ರೆಡ್ ಬಾಲ್‌ ಕ್ರಿಕೆಟ್‌ಗೆ ಬೇರೆ ಬೇರೆ ನಾಯಕರಿರಲಿ ಎನ್ನುವ ಉದ್ದೇಶದಿಂದ ನಾನು ಹಾಗೆ ಹೇಳಿದ್ದೆ" ಎಂದು ಸೌರವ್ ಗಂಗೂಲಿ ಹೇಳಿದ್ದಾರೆ

"ನಾನು ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲು ಸ್ವಲ್ಪ ಒತ್ತಡ ಹೇರಿದೆ. ಯಾಕೆಂದರೆ ರೋಹಿತ್ ಮೂರು ಮಾದರಿಯಲ್ಲಿ ಭಾರತ ತಂಡದ ನಾಯಕರಾಗಲು ಮನಸ್ಸಿರಲಿಲ್ಲ. ರೋಹಿತ್ ನಾಯಕರಾದ ವಿಚಾರದಲ್ಲಿ ನನ್ನದೂ ಕೊಡುಗೆ ಸ್ವಲ್ಪ ಇರಬಹುದು. ಆದರೆ ಯಾರೇ ಆಡಳಿತ ನಡೆಸಲಿ, ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರನ್ನು ಹೊರಗಿನ ಯಾರೂ ಏನೂ ಮಾಡಲು ಸಾಧ್ಯವಿಲ್ಲ" ಎಂದು ದಾದಾ ಅಭಿಪ್ರಾಯಪಟ್ಟಿದ್ದಾರೆ.

ನಾನು ಬಿಸಿಸಿಐ ಅಧ್ಯಕ್ಷರಾಗಿದ್ದು ಭಾರತ ಕ್ರಿಕೆಟ್ ತಂಡದ ಸುಧಾರಣೆಗಾಗಿಯೇ ಹೊರತು ಮತ್ತಿನ್ನೇನಕ್ಕೂ ಅಲ್ಲ. ಇಷ್ಟು ದೀರ್ಘ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
 

click me!