
ನವದೆಹಲಿ(ಜು.28): ಟೀಂ ಇಂಡಿಯಾ ಸ್ವಿಂಗ್ ಸ್ಪೆಷಲಿಸ್ಟ್ ವೇಗದ ಬೌಲರ್ ಭುವನೇಶ್ವರ್ ಕುಮಾರ್, ಇದೀಗ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಬಯೋದೇಟಾ ಅಪ್‌ಡೇಟ್ ಮಾಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ, ಇದಷ್ಟೇ ಅಲ್ಲದೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಭುವಿ ಸದ್ಯದಲ್ಲಿಯೇ ಗುಡ್‌ಬೈ ಹೇಳಲಿದ್ದಾರೆ ಎನ್ನುವಂತಹ ಚರ್ಚೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ.
ಬಲಗೈ ವೇಗದ ಬೌಲರ್, ತಮ್ಮ ಅಧಿಕೃತ ಇನ್‌ಸ್ಟಾಗ್ರಾನಲ್ಲಿ 'ಭಾರತೀಯ ಕ್ರಿಕೆಟರ್' ಎನ್ನುವ ಬಯೋವನ್ನು ತೆಗೆದುಹಾಕಿ 'ಭಾರತೀಯ' ಎಂದು ಅಪ್‌ಡೇಟ್ ಮಾಡಿದ್ದಾರೆ. ಭುವನೇಶ್ವರ್ ಕುಮಾರ್, ಕಳೆದ ವರ್ಷದ ನವೆಂಬರ್‌ನಲ್ಲಿ ಕೊನೆಯ ಬಾರಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ಇದರ ಹೊರತಾಗಿಯೂ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಭುವನೇಶ್ವರ್ ಕುಮಾರ್ 14 ಪಂದ್ಯಗಳನ್ನಾಡಿದ್ದರು.
'ಈ ಟ್ಯಾಲೆಂಟೆಡ್ ಆಟಗಾರನ ಕ್ರಿಕೆಟ್ ಬದುಕಿಗೆ ಎಳ್ಳು ನೀರು ಬಿಡುತ್ತಿರುವ ಕ್ಯಾಪ್ಟನ್ ರೋಹಿತ್ ಶರ್ಮಾ'..!
ಇನ್ನು ಭುವನೇಶ್ವರ್ ಕುಮಾರ್ ಅವರ ನಿವೃತ್ತಿಯ ಕುರಿತಾದ ಗಾಳಿ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರೊಬ್ಬರು, " ಅವರಿಗೆ ಸರಿಯಾದ ವಿದಾಯ ಸಿಗದೇ ಹೋದರೆ ನಾಚಿಗೆಗೇಡು". ಕ್ರಿಕೆಟ್‌ನಿಂದ ನಿವೃತ್ತಿನಾ?, "ಭುವನೇಶ್ವರ್ ಕುಮಾರ್ ಅವರಿಗಿಂತ ಒಳ್ಳೆಯ ಇನ್‌ಸ್ವಿಂಗ್ ತೋರಿಸಿ ನೋಡೋಣ" ಎಂದು ಕಾಮೆಂಟ್ ಮಾಡಿದ್ದಾರೆ.
2012ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಭುವನೇಶ್ವರ್ ಕುಮಾರ್, ಟೀಂ ಇಂಡಿಯಾ ಪರ 21 ಟೆಸ್ಟ್, 121 ಏಕದಿನ ಹಾಗೂ 87 ಟಿ20 ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭುವಿ 26.09ರ ಸರಾಸರಿಯಲ್ಲಿ 63 ವಿಕೆಟ್ ಪಡೆದಿದ್ದಾರೆ. ಇನ್ನು ಕೆಳಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟರ್ ಆಗಿಯೂ ಗುರುತಿಸಿಕೊಂಡಿರುವ ಭುವಿ 29 ಇನಿಂಗ್ಸ್‌ಗಳಿಂದ 22ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಅರ್ಧಶತಕ ಸಹಿತ 552 ರನ್ ಬಾರಿಸಿದ್ದಾರೆ.
ಭುವನೇಶ್ವರ್ ಕುಮಾರ್, ಏಕದಿನ ಕ್ರಿಕೆಟ್‌ನಲ್ಲಿ 35.11ರ ಬೌಲಿಂಗ್ ಸರಾಸರಿಯಲ್ಲಿ 141 ವಿಕೆಟ್ ಕಬಳಿಸಿದ್ದಾರೆ. 42 ರನ್‌ಗೆ 5 ವಿಕೆಟ್ ಕಬಳಿಸಿದ್ದು ಬೆಸ್ಟ್ ಬೌಲಿಂಗ್ ಪ್ರದರ್ಶನ ಎನಿಸಿಕೊಂಡಿದೆ. ಇನ್ನು 87 ಟಿ20 ಪಂದ್ಯಗಳನ್ನಾಡಿರುವ ಭುವಿ 23.10ರ ಬೌಲಿಂಗ್ ಸರಾಸರಿಯಲ್ಲಿ90 ವಿಕೆಟ್ ಕಬಳಿಸಿದ್ದಾರೆ. 4 ರನ್‌ಗೆ 5 ವಿಕೆಟ್ ಕಬಳಿಸಿದ್ದು ಭುವಿ ಬೆಸ್ಟ್ ಬೌಲಿಂಗ್ ಪ್ರದರ್ಶನವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.