ಐತಿಹಾಸಿಕ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯವನ್ನು ಜಯಿಸುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬಾಂಗ್ಲಾದೇಶ ಎದುರು ಸರಣಿ ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ. ಇನ್ನು ಬಾಂಗ್ಲಾದೇಶ ತಿರುಗೇಟು ನೀಡುವ ಮೂಲಕ ಸರಣಿ ಸಮಬಲ ಮಾಡಿಕೊಳ್ಳುವ ಒತ್ತಡದಲ್ಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕೋಲ್ಕತಾ[ನ.22]: ಐತಿಹಾಸಿಕ ಪಂದ್ಯದಲ್ಲಿ ಗೆಲುವು ಸಾಧಿಸಿ ತವರಿನಲ್ಲಿ ಸತತ 12ನೇ ಸರಣಿ ಗೆಲ್ಲುವ ಗುರಿಯನ್ನು ಭಾರತ ತಂಡ ಹೊಂದಿದೆ. ಇಂದೋರ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಗೆಲುವು ಸಾಧಿಸಿದ್ದ ಭಾರತ, 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಹೊಂದಿದೆ. ಮೊದಲ ಬಾರಿಗೆ ಪಿಂಕ್ ಬಾಲ್‌ನಲ್ಲಿ ಆಡಲಿದೆಯಾದರೂ, ಭಾರತವೇ ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.
ಇಂದಿನಿಂದ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್!
undefined
ರೋಹಿತ್ ಶರ್ಮಾ ಪಾಲಿಗೆ ಈಡನ್ ಗಾರ್ಡನ್ಸ್ ಅದೃಷ್ಟದ ತಾಣವಾಗಿದ್ದು, ಮತ್ತೊಂದು ದೊಡ್ಡ ಇನ್ನಿಂಗ್ಸ್ ಆಡುವ ಗುರಿ ಹೊಂದಿದ್ದಾರೆ. ಮಯಾಂಕ್ ಅಗರ್‌ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಪೈಕಿ ಯಾರೊಬ್ಬರು ಕ್ರೀಸ್‌ನಲ್ಲಿ ಹೆಚ್ಚು ಸಮಯ ನಿಂತರೂ ಬಾಂಗ್ಲಾಗೆ ಉಳಿಗಾಲವಿಲ್ಲ. ವೃದ್ಧಿಮಾನ್ ಸಾಹ, ರವೀಂದ್ರ ಜಡೇಜಾ, ಆರ್.ಅಶ್ವಿನ್ರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳನ್ನು ಕೆಳ ಮಧ್ಯಮ ಕ್ರಮಾಂಕದಲ್ಲಿದ್ದಾರೆ. ವೇಗಿಗಳು ಸಹ ರನ್ ಕೊಡುಗೆ ನೀಡುವ ಕಾರಣ, ಭಾರತ ಮತ್ತೊಮ್ಮೆ ಬೃಹತ್ ಮೊತ್ತ ಕಲೆಹಾಕುವ ವಿಶ್ವಾಸದಲ್ಲಿದೆ. ಇಶಾಂತ್ ಶರ್ಮಾ, ಮೊಹಮದ್ ಶಮಿ ಹಾಗೂ ಉಮೇಶ್ ಯಾದವ್, ಬಾಂಗ್ಲಾ ಹುಲಿಗಳನ್ನು ಬೇಟೆಯಾಗಲು ಸಜ್ಜಾಗಿದ್ದಾರೆ. ಅಶ್ವಿನ್, ಜಡೇಜಾ ಸ್ಪಿನ್ ಮೋಡಿ ನಡೆಸಿದರೆ ನಿರೀಕ್ಷೆಗೂ ಮೊದಲೇ ಭಾರತ ಜಯಭೇರಿ ಬಾರಿಸಲಿದೆ.
ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಸಾಧಿಸುತ್ತಾ..?
ಮತ್ತೊಂದಡೆ ಬಾಂಗ್ಲಾದೇಶಕ್ಕೆ ಅನುಭವಿ ಆಟಗಾರರ ಕೊರತೆ ಬಲವಾಗಿ ಕಾಡುತ್ತಿದೆ. ಬ್ಯಾಟ್ಸ್‌ಮನ್‌ಗಳು ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅಬು ಜಾಯೇದ್ ಹೊರತುಪಡಿಸಿ ಉಳಿದ್ಯಾವ ಬೌಲರ್‌ಗಳು ನಿರೀಕ್ಷೆ ಹುಟ್ಟಿಸಿಲ್ಲ. ಬಾಂಗ್ಲಾ ಮತ್ತೊಮ್ಮೆ ಸುಲಭವಾಗಿ ಶರಣಾದರೆ ಅಚ್ಚರಿಯಿಲ್ಲ.
ಮೊದಲ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಭಾರತ ಮುಂದುವರಿಸುವುದು ಬಹುತೇಕ ಖಚಿತ. ಬಾಂಗ್ಲಾ ತಂಡದಲ್ಲಿ ಕೆಲ ಬದಲಾವಣೆಯಾಗಬಹುದು. ಈ ಪಂದ್ಯ ಗೆದ್ದರೆ ಭಾರತಕ್ಕೆ 60 ಅಂಕ ಸಿಗಲಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಭಾರತದ ಒಟ್ಟು ಅಂಕ 360ಕ್ಕೇರಲಿದೆ.
ಪಿಚ್ ರಿಪೋರ್ಟ್
ಪಿಂಕ್ ಬಾಲ್ ಆಟಕ್ಕೆ ಸರಿಹೊಂದುವಂತೆ ಹಸಿರು ಪಿಚ್ ಸಿದ್ಧಪಡಿಸಿದ್ದು, ವೇಗದ ಬೌಲರ್‌ಗಳಿಗೆ ನೆರವು ಸಿಗುವ ನಿರೀಕ್ಷೆ ಇದೆ. ಬಾಂಗ್ಲಾದೇಶ ವೇಗಿಗಳು ಅತ್ಯಂತ ಕಳಪೆ ಸರಾಸರಿ ಹೊಂದಿದ್ದು, ಭಾರತಕ್ಕೆ ಅನುಕೂಲವಾಗಬಹುದು ಎಂದು ಅಂದಾಜಿಸಲಾಗಿದೆ. ಬೇಗನೆ ಕತ್ತಲಾಗುವ ನಿರೀಕ್ಷೆ ಇದ್ದು 2ನೇ ಅವಧಿಯಿಂದಲೇ ಫ್ಲಡ್ ಲೈಟ್ ಉರಿಸಲಾಗುತ್ತದೆ. ಸಂಜೆ ವೇಳೆ ಇಬ್ಬನಿ ಬೀಳುವ ಕಾರಣ ಕ್ಷೇತ್ರರಕ್ಷಣೆ ಮಾಡುವುದು ಸವಾಲಿನ ಕೆಲಸ ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಿಸಿದ್ದಾರೆ.
ಸಂಭವನೀಯ ತಂಡಗಳು
ಭಾರತ: ರೋಹಿತ್ ಶರ್ಮಾ, ಮಯಾಂಕ್ ಅಗರ್‌ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಾಹ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಉಮೇಶ್ ಯಾದವ್, ಇಶಾಂತ್ ಶರ್ಮಾ, ಮೊಹಮದ್ ಶಮಿ.
ಬಾಂಗ್ಲಾದೇಶ: ಶದ್ಮನ್ ಇಸ್ಲಾಂ, ಇಮ್ರುಲ್, ಮೊಮಿನುಲ್ ಹಕ್(ನಾಯಕ), ಮುಷ್ಫಿಕುರ್, ಮಹಮದುಲ್ಲಾ, ಮೊಹಮದ್ ಮಿಥುನ್, ಲಿಟನ್ ದಾಸ್, ಮೆಹಿದಿ ಹಸನ್, ತೈಜುಲ್ ಇಸ್ಲಾಂ/ಮುಸ್ತಾಫಿಜುರ್, ಅಬು ಜಾಯೆದ್, ಇಬಾದತ್/ಅಲ್ ಅಮಿನ್.
ಪಂದ್ಯ ಆರಂಭ: ಮಧ್ಯಾಹ್ನ 1ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1