CSK ತಂಡಕ್ಕೆ ಬಡಿದ 440 ವೋಲ್ಟ್ ಶಾಕ್! ಸತತ ಎರಡು ಗೆಲುವಿನ ಬೆನ್ನಲ್ಲೇ ಪ್ರಮುಖ ವೇಗಿ ಟೂರ್ನಿಯಿಂದಲೇ ಔಟ್

Published : Apr 16, 2026, 05:06 PM IST
CSK

ಸಾರಾಂಶ

ಹ್ಯಾಟ್ರಿಕ್ ಸೋಲಿನ ಬಳಿಕ ಸತತ ಎರಡು ಪಂದ್ಯ ಗೆದ್ದು ಚೇತರಿಸಿಕೊಳ್ಳುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಎಡಗೈ ವೇಗಿ ಖಲೀಲ್ ಅಹಮದ್, ತೊಡೆಸಂದು ಗಾಯದ ಸಮಸ್ಯೆಯಿಂದಾಗಿ 19ನೇ ಸೀಸನ್ ಐಪಿಎಲ್‌ನಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ.

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹ್ಯಾಟ್ರಿಕ್ ಸೋಲಿನ ಬಳಿಕ ಸತತ ಎರಡು ಪಂದ್ಯಗಳನ್ನು ಗೆದ್ದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿತ್ತು. ಹೀಗಿರುವಾಗಲೇ ಐದು ಬಾರಿಯ ಚಾಂಪಿಯನ್ ಸಿಎಸ್‌ಕೆಗೆ 440 ವೋಲ್ಟ್ ಶಾಕ್ ಬಡಿದಿದ್ದು, ತಂಡದ ಪ್ರಮುಖ ವೇಗಿ ಖಲೀಲ್ ಅಹಮದ್ ತೊಡೆಸಂದು ಗಾಯದ ಸಮಸ್ಯೆಯಿಂದಾಗಿ 19ನೇ ಸೀಸನ್ ಐಪಿಎಲ್‌ನಿಂದಲೇ ಹೊರಬಿದ್ದಿದ್ದಾರೆ. ಇದು ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.

ಖಲೀಲ್ ಅಹಮದ್ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಡಿದ ಎಲ್ಲಾ ಐದು ಪಂದ್ಯಗಳಲ್ಲೂ ಕಣಕ್ಕಿಳಿದಿದ್ದರು. ಆದರೆ ಕಳೆದ ಏಪ್ರಿಲ್ 14ರಂದು ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಪಂದ್ಯದ ವೇಳೆಯಲ್ಲಿ ತೊಡೆಸಂದಿನ ನೋವಿಗೆ ಒಳಗಾಗಿದ್ದರು. ಹೀಗಾಗಿ ಖಲೀಲ್ ಅಹಮದ್, ತಮ್ಮ ಪಾಲಿನ ಕೊನೆಯ ಓವರ್ ಬೌಲಿಂಗ್ ಮಾಡದಿರಲು ತೀರ್ಮಾನಿಸಿದ್ದರು.

ಸಿಎಸ್‌ಕೆ ಪರ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ಖಲೀಲ್ ಅಹಮದ್:

ಮೊದಲೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಯುವ ಎಡಗೈ ವೇಗಿ ಖಲೀಲ್ ಅಹಮದ್ ಭರವಸೆಯ ಆಶಾಕಿರಣ ಎನಿಸಿಕೊಂಡಿದ್ದರು. ಆದರೆ ಇದೀಗ ಗ್ರೇಡ್-2 ಹಂತದ ಗಾಯಕ್ಕೊಳಗಾಗಿರುವುದರಿಂದಾಗಿ ಗಾಯದಿಂದ ಚೇತರಿಸಿಕೊಳ್ಳಲು ಖಲೀಲ್ ಅಹಮದ್ ಅವರಿಗೆ ಕನಿಷ್ಠ 10ರಿಂದ 12 ವಾರಗಳ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಖಲೀಲ್ ಅಹಮದ್ 2026ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಖಲೀಲ್ ಅಹಮದ್ ಸಿಎಸ್‌ಕೆ ಪರ ಐದು ಪಂದ್ಯಗಳನ್ನಾಡಿ ಎರಡು ಪ್ರಮುಖ ಎರಡು ವಿಕೆಟ್ ಪಡೆದಿದ್ದರು.

 

ಭಾರತ ತಂಡವನ್ನು ಪ್ರತಿನಿಧಿಸಿರುವ ಖಲೀಲ್ ಅಹಮದ್;

ಪ್ರತಿಭಾನ್ವಿತ ಎಡಗೈ ವೇಗಿಯಾಗಿರುವ ಖಲೀಲ್ ಅಹಮದ್ ಈಗಾಗಲೇ ಭಾರತ ಪರ 11 ಏಕದಿನ ಹಾಗೂ 18 ಟಿ20 ಪಂದ್ಯಗಳನ್ನಾಡಿ ಮಿಂಚಿದ್ದಾರೆ. ಖಲೀಲ್ ಭಾರತ 11 ಏಕದಿನ ಪಂದ್ಯಗಳಿಂದ 15 ವಿಕೆಟ್ ಹಾಗೂ 18 ಟಿ20 ಪಂದ್ಯಗಳಿಂದ 16 ವಿಕೆಟ್ ಕಬಳಿಸಿದ್ದಾರೆ. ಖಲೀಲ್ ಅಹಮದ್ ಭಾರತ ಪರ 2024ರ ಜುಲೈನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

19ನೇ ಸೀಸನ್‌ನಲ್ಲಿ ಸಿಎಸ್‌ಕೆ ಪ್ರದರ್ಶನ:

ಐದು ಬಾರಿಯ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಗಿತ್ತು. ಧೋನಿ ಅನುಪಸ್ಥಿತಿಯಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಮೂರು ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಹೀನಾಯ ಸೋಲು ಕಂಡಿತ್ತು. ಇದಾದ ಬಳಿಕ  ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ್ದು, ಸದ್ಯ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆಟವಲ್ಲ, ಆರ್‌ಸಿಬಿಯ ಇಡ್ಲಿ-ದೋಸೆ-ಚಟ್ನಿ ಹಾಡು ಕೇಳಿ ಕಿವಿಯಲ್ಲಿ ರಕ್ತ ತಂದುಕೊಂಡ ಚೆನ್ನೈ, ಬಿಸಿಸಿಐಗೆ ಪತ್ರ ಬರೆದು ದೂರು!
ಮುಂಬೈ ಇಂಡಿಯನ್ಸ್‌ಗಿಂದು ಪಂಜಾಬ್ ಕಿಂಗ್ಸ್ ಚಾಲೆಂಜ್..! ಇಂದು ಪಾಂಡ್ಯ ಪಡೆ ಸೋತರೇ, ಮುಂದೇನು?