
ಅಹಮದಾಬಾದ್: ಐಪಿಎಲ್ ಪ್ಲೇಆಫ್ ರೇಸ್‌ನಲ್ಲಿ ತಮ್ಮ ಸಣ್ಣ ಭರವಸೆಯನ್ನಾದರೂ ಉಳಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ನಿರ್ಣಾಯಕ ಪಂದ್ಯಕ್ಕೆ ಸಜ್ಜಾಗಿದೆ. ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ, ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಸಿಎಸ್‌ಕೆ ಎದುರಿಸಲಿದೆ. ಪಂದ್ಯವು ರಾತ್ರಿ 7:30ಕ್ಕೆ ಆರಂಭವಾಗಲಿದೆ.
ಕಳೆದ ಪಂದ್ಯದಲ್ಲಿ ತವರಿನ ಚೆಪಾಕ್ ಮೈದಾನದಲ್ಲೇ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿದ್ದು ಚೆನ್ನೈ ತಂಡವನ್ನು ಸಂಕಷ್ಟಕ್ಕೆ ದೂಡಿದೆ. ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಸಿಎಸ್‌ಕೆಗೆ, ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಳ್ಳಲು ಇಂದಿನ ಪಂದ್ಯ ಗೆಲ್ಲಲೇಬೇಕು. ಒಂದು ವೇಳೆ ಇಂದು ಸೋತರೆ, ಚೆನ್ನೈ ತಂಡ ಸತತ ಮೂರನೇ ಸೀಸನ್‌ನಲ್ಲೂ ಪ್ಲೇಆಫ್ ಪ್ರವೇಶಿಸದೆ ಟೂರ್ನಿಯಿಂದ ಹೊರಬೀಳಲಿದೆ.
ಕಳೆದ ಸೋಲಿನ ಬಳಿಕ, "ಮುಂದಿನ ಸೀಸನ್‌ನಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುತ್ತೇವೆ" ಎಂದು ನಾಯಕ ಋತುರಾಜ್ ಗಾಯಕ್ವಾಡ್ ಹೇಳಿದ್ದು, ತಂಡದ ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತಿದೆ. ಪ್ರಮುಖ ಆಟಗಾರರ ಗಾಯದ ಸಮಸ್ಯೆ ಮತ್ತು ಹರಾಜಿನಲ್ಲಿ ಮಾಡಿದ ತಪ್ಪುಗಳು ಈ ಸೀಸನ್‌ನಲ್ಲಿ ಚೆನ್ನೈಗೆ ದೊಡ್ಡ ಹೊಡೆತ ನೀಡಿವೆ. ಇಂದು ದೊಡ್ಡ ಅಂತರದಲ್ಲಿ ಗೆದ್ದು, ಬೇರೆ ತಂಡಗಳ ಫಲಿತಾಂಶಗಳು ತಮಗೆ ಪೂರಕವಾದರೆ ಮಾತ್ರ ಚೆನ್ನೈ ನಾಲ್ಕನೇ ತಂಡವಾಗಿ ಪ್ಲೇಆಫ್‌ಗೆ ಪ್ರವೇಶಿಸಬಹುದು.
ಮತ್ತೊಂದೆಡೆ, ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದು, ಭರ್ಜರಿ ಫಾರ್ಮ್‌ನಲ್ಲಿದೆ. ಕಳೆದ ಐದು ಸೀಸನ್‌ಗಳಲ್ಲಿ ನಾಲ್ಕು ಬಾರಿ ಪ್ಲೇಆಫ್ ಪ್ರವೇಶಿಸಿರುವ ಗುಜರಾತ್, ಹಿಂದೊಮ್ಮೆ ಚೆನ್ನೈ ತಂಡಕ್ಕಿದ್ದ ವೈಭವವನ್ನು ನೆನಪಿಸುವಂತಹ ಸ್ಥಿರ ಪ್ರದರ್ಶನ ನೀಡುತ್ತಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆದು ಕ್ವಾಲಿಫೈಯರ್-1 ಆಡುವುದೇ ಅವರ ಗುರಿಯಾಗಿದೆ. ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ತಲಾ 500ಕ್ಕೂ ಹೆಚ್ಚು ರನ್ ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ನಲ್ಲೂ ಗುಜರಾತ್ ಮುಂದಿದೆ. ಈ ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಟಾಪ್ 10 ಪಟ್ಟಿಯಲ್ಲಿ ಅವರ ಮೂವರು ಬೌಲರ್‌ಗಳಿದ್ದಾರೆ. ಹೀಗಾಗಿ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿರುವ ಗುಜರಾತ್ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸುವುದು ಚೆನ್ನೈಗೆ ಸುಲಭವಲ್ಲ.
ಅಹಮದಾಬಾದ್ ಪಿಚ್ ಸಾಮಾನ್ಯವಾಗಿ ವೇಗದ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ವೇಗದಲ್ಲಿ ವ್ಯತ್ಯಾಸ ಮಾಡಿ ಬೌಲಿಂಗ್ ಮಾಡುವವರಿಗೆ ಇಲ್ಲಿ ಹೆಚ್ಚು ವಿಕೆಟ್‌ಗಳು ಸಿಗುವ ಸಾಧ್ಯತೆ ಇದೆ. ಈ ಮೈದಾನದಲ್ಲಿ ನಡೆದ ಕಳೆದ 6 ಪಂದ್ಯಗಳಲ್ಲಿ ಗುಜರಾತ್ 4ರಲ್ಲಿ ಗೆದ್ದಿದೆ (ಎರಡು ಬಾರಿ ಚೇಸಿಂಗ್, ಎರಡು ಬಾರಿ ಸ್ಕೋರ್ ಡಿಫೆಂಡ್). ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಐಪಿಎಲ್ ಇತಿಹಾಸದಲ್ಲಿ ಈ ಎರಡು ತಂಡಗಳು ಒಟ್ಟು 9 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಗುಜರಾತ್ 5 ಪಂದ್ಯಗಳನ್ನು ಗೆದ್ದರೆ, ಚೆನ್ನೈ 4ರಲ್ಲಿ ಜಯ ಸಾಧಿಸಿದೆ. ಅಹಮದಾಬಾದ್ ಸ್ಟೇಡಿಯಂನಲ್ಲಿ ಎರಡೂ ತಂಡಗಳು ತಲಾ ಎರಡು ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿವೆ.
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭ್‌ಮನ್ ಗಿಲ್(ನಾಯಕ), ಜೋಸ್ ಬಟ್ಲರ್(ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ಜೇಸನ್ ಹೋಲ್ಡರ್, ರಶೀದ್ ಖಾನ್, ಅರ್ಶದ್ ಖಾನ್, ಕಗಿಸೋ ರಬಾಡ, ಆರ್ ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್.
ಚೆನ್ನೈ ಸೂಪರ್ ಕಿಂಗ್ಸ್: ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್(ನಾಯಕ), ಊರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವೀಸ್, ಶಿವಂ ದುಬೆ, ಪ್ರಶಾಂತ್ ವೀರ್, ಅಕೇಲ್ ಹೊಸೈನ್, ನೂರ್ ಅಹಮದ್, ಅನ್ಸೂಲ್ ಕಂಬೋಜ್, ಸ್ಪೆನ್ಸರ್ ಜಾನ್ಸನ್, ಮುಕೇಶ್ ಚೌಧರಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.