
ಜೈಪುರ: ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ ಒಂದರ ಹಿಂದೆ ಒಂದರಂತೆ ದಾಖಲೆಗಳನ್ನು ಪುಡಿಗಟ್ಟುತ್ತಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ವೈಭವ್, ಒಂದೇ ಐಪಿಎಲ್ ಸೀಸನ್‌ನಲ್ಲಿ 50 ಸಿಕ್ಸರ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಐತಿಹಾಸಿಕ ಸಾಧನೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಖನೌ ನೀಡಿದ 220 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡಕ್ಕೆ ವೈಭವ್ ಮತ್ತೊಮ್ಮೆ ಆಸರೆಯಾದರು. ಕೇವಲ 38 ಎಸೆತಗಳಲ್ಲಿ 7 ಬೌಂಡರಿ ಮತ್ತು 10 ಸಿಕ್ಸರ್‌ಗಳ ನೆರವಿನಿಂದ 93 ರನ್ ಚಚ್ಚಿದ ವೈಭವ್, ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸುಲಭ ಜಯ ತಂದುಕೊಟ್ಟು ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿದರು.
ಈ ಹಿಂದೆಯೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ, 2024ರಲ್ಲಿ ಅಭಿಷೇಕ್ ಶರ್ಮಾ ಬಾರಿಸಿದ್ದ 42 ಸಿಕ್ಸರ್‌ಗಳ ದಾಖಲೆಯನ್ನು ವೈಭವ್ ಮುರಿದಿದ್ದರು. ಲಖನೌ ವಿರುದ್ಧ ಆಡಲಿಳಿದಾಗ ಅವರ ಖಾತೆಯಲ್ಲಿ 43 ಸಿಕ್ಸರ್‌ಗಳಿದ್ದವು. ಪಂದ್ಯದ 11ನೇ ಓವರ್‌ನಲ್ಲಿ ವೇಗಿ ಮಯಾಂಕ್ ಯಾದವ್‌ಗೆ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ, ವೈಭವ್ ಈ ಸೀಸನ್‌ನಲ್ಲಿ ತಮ್ಮ ಸಿಕ್ಸರ್‌ಗಳ ಸಂಖ್ಯೆಯನ್ನು 50ಕ್ಕೆ ಏರಿಸಿಕೊಂಡರು. ಈ ಸೀಸನ್‌ನಲ್ಲಿ ಆಡಿದ 13 ಪಂದ್ಯಗಳಿಂದ ವೈಭವ್ ಒಟ್ಟು 53 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಅವರ ಸಾರ್ವಕಾಲಿಕ ದಾಖಲೆಯ ಸನಿಹಕ್ಕೆ ವೈಭವ್ ಈಗ ಬಂದಿದ್ದಾರೆ. 2012ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಗೇಲ್ ಬಾರಿಸಿದ್ದ 59 ಸಿಕ್ಸರ್‌ಗಳ ದಾಖಲೆಯನ್ನು ಮುರಿಯಲು ವೈಭವ್‌ಗೆ ಇನ್ನು ಕೇವಲ 7 ಸಿಕ್ಸರ್‌ಗಳು ಬೇಕು. ನಿನ್ನೆಯ ಪಂದ್ಯದಲ್ಲಿ 52 ಸಿಕ್ಸರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದ ಕೋಲ್ಕತ್ತಾದ ಆಂಡ್ರೆ ರಸೆಲ್ ಅವರನ್ನೂ ವೈಭವ್ ಹಿಂದಿಕ್ಕಿದ್ದಾರೆ.
ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಒಂದು ಪಂದ್ಯ ಬಾಕಿ ಇದೆ. ರಾಜಸ್ಥಾನ ಪ್ಲೇಆಫ್‌ಗೆ ಪ್ರವೇಶಿಸಿದರೆ ಮತ್ತಷ್ಟು ಪಂದ್ಯಗಳು ಸಿಗಲಿವೆ. ಹೀಗಾಗಿ, 15 ವರ್ಷದ ವೈಭವ್, ಗೇಲ್ ದಾಖಲೆಯನ್ನು ಮುರಿಯುವುದು ಬಹುತೇಕ ಖಚಿತ. ಅಷ್ಟೇ ಅಲ್ಲ, ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಎಂಬ ದಾಖಲೆಯನ್ನೂ ವೈಭವ್ ಈ ಹಿಂದೆ ತಮ್ಮದಾಗಿಸಿಕೊಂಡಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 37 ಎಸೆತಗಳಲ್ಲಿ 103 ರನ್ ಗಳಿಸಿದ್ದಾಗ 12 ಸಿಕ್ಸರ್‌ಗಳನ್ನು ಸಿಡಿಸಿ ಈ ದಾಖಲೆ ಬರೆದಿದ್ದರು. ಆಡಿದ 13 ಪಂದ್ಯಗಳಿಂದ 579 ರನ್ ಗಳಿಸಿರುವ ವೈಭವ್, ಸದ್ಯ ಟೂರ್ನಿಯ ಆರೆಂಜ್ ಕ್ಯಾಪ್ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಲಖನೌ ವಿರುದ್ಧದ ಪ್ರದರ್ಶನದೊಂದಿಗೆ, ಪವರ್‌ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಟ್ರಾವಿಸ್ ಹೆಡ್ (426 ರನ್) ದಾಖಲೆಯನ್ನೂ ವೈಭವ್ ಮುರಿದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.