
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಒಂದು ದೊಡ್ಡ ಬದಲಾವಣೆಗೆ ಐಪಿಎಲ್ 2026 ಸಾಕ್ಷಿಯಾಗುತ್ತಿದೆ. ಗಾಯದ ಸಮಸ್ಯೆಯಿಂದಾಗಿ ಎಂ.ಎಸ್. ಧೋನಿ ಸೀಸನ್‌ನ ಮೊದಲ ಎರಡು ವಾರಗಳ ಕಾಲ ಹೊರಗುಳಿಯಲಿದ್ದಾರೆ. ಈ ವೇಳೆ, ಕೇರಳದ ಆಟಗಾರ ಸಂಜು ಸ್ಯಾಮ್ಸನ್ ಸಿಎಸ್‌ಕೆ ಪರ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊರಲಿದ್ದಾರೆ. ತಂಡದ ಸಿಇಒ ಕಾಶಿ ವಿಶ್ವನಾಥನ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಹಿಮ್ಮಡಿ ನೋವಿನಿಂದ ಬಳಲುತ್ತಿರುವ ಕಾರಣ ಧೋನಿ ಮೊದಲ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
"ಎಂ.ಎಸ್. ಧೋನಿ ಆಡದೇ ಇರುವುದರಿಂದ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿರುತ್ತಾರೆ. ಸಂಜು ಸ್ಯಾಮ್ಸನ್ ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ, ನೆಟ್ಸ್‌ನಲ್ಲೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸಿಎಸ್‌ಕೆ ನಿರೀಕ್ಷೆ ಮಾಡುವಂತಹ ಒಂದು ಇಂಪ್ಯಾಕ್ಟ್ ನೀಡಲು ಸಂಜುಗೆ ಸಾಧ್ಯವಿದೆ ಎಂದು ನಾವು ನಂಬಿದ್ದೇವೆ." ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ತಂಡ ಹೊಸ ಎತ್ತರಕ್ಕೆ ಏರಲಿದೆ ಮತ್ತು ಸಂಜು ಅವರ ಉಪಸ್ಥಿತಿ ತಂಡಕ್ಕೆ ದೊಡ್ಡ ಶಕ್ತಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಧೋನಿ ನಂತರದ ಯುಗ
44 ವರ್ಷದ ಧೋನಿ ಕಳೆದ ಕೆಲವು ಸೀಸನ್‌ಗಳಿಂದ ತಮ್ಮ ಪಾತ್ರವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು. ಫಿನಿಶರ್ ಆಗಿ ಮಾತ್ರ ಕಣಕ್ಕಿಳಿಯುತ್ತಿದ್ದ ಧೋನಿ ಬದಲಿಗೆ ದೀರ್ಘಾವಧಿಯ ವಿಕೆಟ್ ಕೀಪರ್ ಒಬ್ಬರನ್ನು ಹುಡುಕುವುದು ಸಿಎಸ್‌ಕೆಗೆ ಅನಿವಾರ್ಯವಾಗಿತ್ತು. ರಾಜಸ್ಥಾನ ರಾಯಲ್ಸ್‌ನಿಂದ ದೊಡ್ಡ ಮೊತ್ತದ ಟ್ರೇಡ್ ಮೂಲಕ ಸಂಜು ಚೆನ್ನೈಗೆ ಬಂದಿರುವುದು ಇದೇ ಉದ್ದೇಶದಿಂದ ಎನ್ನಲಾಗಿದೆ. 2026ರ ಟಿ20 ವಿಶ್ವಕಪ್‌ನಲ್ಲಿ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಿದ್ದ ಸಂಜು ಮೇಲೆ ಹೆಚ್ಚು ಒತ್ತಡ ಹೇರಲು ನಾವು ಬಯಸುವುದಿಲ್ಲ ಎಂದು ಮ್ಯಾನೇಜ್‌ಮೆಂಟ್ ಸ್ಪಷ್ಟಪಡಿಸಿದೆ.
ತಂಡದಲ್ಲಿನ ಬದಲಾವಣೆಗಳು
ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ಒಳಗೊಂಡ ದೊಡ್ಡ ವಿನಿಮಯ ಪ್ರಕ್ರಿಯೆಯ ಮೂಲಕ ಸಂಜು ಸ್ಯಾಮ್ಸನ್ ಚೆನ್ನೈ ತಂಡವನ್ನು ಸೇರಿಕೊಂಡಿದ್ದಾರೆ. ಋತುರಾಜ್ ಗಾಯಕ್ವಾಡ್ ಮುನ್ನಡೆಸುವ ತಂಡದ ಹೊಸ ಬೆನ್ನೆಲುಬಾಗಿ ಸಂಜು ಹೊರಹೊಮ್ಮುತ್ತಾರೆಯೇ ಎಂದು ಕ್ರಿಕೆಟ್ ಜಗತ್ತು ಕುತೂಹಲದಿಂದ ನೋಡುತ್ತಿದೆ.
ಚೆನ್ನೈ ತಂಡಕ್ಕೆ ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದುಕೊಟ್ಟ ಧೋನಿ ಸ್ಥಾನವನ್ನು ತುಂಬುವುದು ಯಾವುದೇ ಆಟಗಾರನಿಗೆ ದೊಡ್ಡ ಸವಾಲು. ಆದರೆ, ಧೋನಿ ಅನುಪಸ್ಥಿತಿಯಲ್ಲಿ ಸಂಜುಗೆ ಸಿಗುತ್ತಿರುವ ಈ ಮೊದಲ ಅವಕಾಶವು ತಂಡದ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾಗಲಿದೆ. ಸಂಜು ಅವರ ಹಳೆಯ ತಂಡವಾದ ರಾಜಸ್ಥಾನ ರಾಯಲ್ಸ್ ವಿರುದ್ಧವೇ ಮುಂದಿನ ಪಂದ್ಯವಿರುವುದು ಈ ಹೊಸ ಬದಲಾವಣೆಗೆ ಮತ್ತಷ್ಟು ರೋಚಕತೆ ತಂದಿದೆ.
ಇಂದು ಚೆನ್ನೈ-ರಾಜಸ್ಥಾನ ಬಿಗ್ ಫೈಟ್
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೂರನೇ ಪಂದ್ಯದಲ್ಲಿಂದು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಇಂದು ಸಂಜೆ 7.30ರಿಂದ ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಮ್ಯಾಚ್‌ಗೆ ಗುವಾಹಟಿಯ ಬರ್ಸಾಪುರ ಸ್ಟೇಡಿಯಂ ಆತಿಥ್ಯ ವಹಿಸಿದೆ.
ಟ್ರೇಡ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ರಾಜಸ್ಥಾನ ರಾಯಲ್ಸ್ ಪಾಲಾಗಿರುವ ರವೀಂದ್ರ ಜಡೇಜಾ ಹಾಗೂ ರಾಜಸ್ಥಾನ ರಾಯಲ್ಸ್‌ನಿಂದ ಸಿಎಸ್‌ಕೆ ತೆಕ್ಕೆಗೆ ಜಾರಿರುವ ಸಂಜು ಸ್ಯಾಮ್ಸನ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.