ಖೇಲ್‌ ರತ್ನ ಪ್ರಶಸ್ತಿಗೆ ರೋಹಿತ್ ಶರ್ಮಾ ಸೇರಿದಂತೆ ನಾಲ್ವರ ಹೆಸರು ಶಿಫಾರಸು

By Suvarna NewsFirst Published Aug 18, 2020, 6:48 PM IST
Highlights

ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸೇರಿದಂತೆ ನಾಲ್ವರು ಕ್ರೀಡಾಪಟುಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಆ.18): ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಸೇರಿದಂತೆ ನಾಲ್ವರು ಕ್ರೀಡಾಪಟುಗಳ ಹೆಸರನ್ನು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಮಂಗಳವಾರವಾದ ಇಂದು(ಆ.18) ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ನಿರ್ಧರಿಸುವ ಸಮಿತಿಯು ರೋಹಿತ್ ಶರ್ಮಾ, ಕುಸ್ತಿಪಟು ವಿನೇಶಾ ಪೋಗಟ್, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಭಾತ್ರ ಹಾಗೂ ಪ್ಯಾರಾಲಂಪಿಯನ್ ಮರಿಯಪ್ಪನ್ ತಂಗವೇಲು ಅವರ ಹೆಸರನ್ನು ಶಿಫಾರಸು ಮಾಡಿದೆ.

ಮೇ ತಿಂಗಳಿನಲ್ಲಿ ಬಿಸಿಸಿಐ ರೋಹಿತ್ ಶರ್ಮಾ ಅವರ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಒಂದು ವೇಳೆ ರೋಹಿತ್ ಈ ಪ್ರಶಸ್ತಿ ಪಡೆದರೆ, ಸಚಿನ್ ತೆಂಡುಲ್ಕರ್, ಎಂ.ಎಸ್. ಧೋನಿ ಹಾಗೂ ವಿರಾಟ್ ಕೊಹ್ಲಿ ಬಳಿಕ ಈ ಗೌರವಕ್ಕೆ ಭಾಜನರಾದ ನಾಲ್ಕನೇ ಕ್ರಿಕೆಟ್‌ ಆಟಗಾರ ಎನಿಸಲಿದ್ದಾರೆ.

ಖೇಲ್‌ ರತ್ನಕ್ಕೆ ರೋಹಿತ್‌ ಶರ್ಮಾ ಹೆಸರು ಶಿಫಾರಸು

ರೋಹಿತ್ ಶರ್ಮಾ ಹೆಸರನ್ನು ನಾಮ ನಿರ್ದೇಶನ ಮಾಡಿರುವ ಕುರಿತಂತೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ನಾವು ಹಲವಾರು ಮಾನದಂಡಗಳನ್ನು ಇಟ್ಟುಕೊಂಡು ರೋಹಿತ್‌ ಶರ್ಮಾ ಹೆಸರನ್ನು ಅಂತಿಮವಾಗಿ ಆಯ್ಕೆ ಮಾಡಿಕೊಂಡೆವು. ರೋಹಿತ್ ಶರ್ಮಾ ಈಗ ಬ್ಯಾಟ್ಸ್‌ಮನ್ ಆಗಿ ಹೊಸ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಯಾವುದು ಅಸಾಧ್ಯವೆಂದು ಭಾವಿಸಿದ್ದರೋ ಅದನ್ನೆಲ್ಲಾ ರೋಹಿತ್ ಸಾಧ್ಯವನ್ನಾಗಿ ಮಾಡಿ ತೋರಿಸಿದ್ದಾರೆ. ಅವರ ಕ್ರಿಕೆಟ್ ಕುರಿತ ಕಾಳಜಿ, ಬದ್ಧತೆ, ಸ್ಥಿರ ಪ್ರದರ್ಶನ ಹಾಗೂ ನಾಯಕತ್ವ ಗುಣಗಳನ್ನು ಗಮನಿಸಿದರೆ ಅವರು ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ಪಡೆಯಲು ಅರ್ಹ ವ್ಯಕ್ತಿ ಎಂದು ಭಾವಿಸಿದ್ದೇನೆ ಎಂದಿದ್ದಾರೆ.

ಈ ಶಿಫಾರಸನ್ನು ಕೇಂದ್ರ ಕ್ರೀಡಾ ಸಚಿವಾಲಯ ಅನುಮೋದನೆ ನೀಡಿದರೆ, ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಷ್ಟ್ರೀಯ ಕ್ರೀಡಾದಿನವಾದ ಆಗಸ್ಟ್ 29ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.


 
 

click me!