
ಮೆಲ್ಬರ್ನ್(ಜ.28): ಸಿಡ್ನಿ ಟೆಸ್ಟ್ ವೇಳೆ ಭಾರತದ ವೇಗಿ ಮೊಹಮದ್ ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ ನಡೆದಿದ್ದು ನಿಜ, ಆದರೆ ತಪ್ಪಿತಸ್ಥರನ್ನು ಹುಡುಕಲು ಸಾಧ್ಯವಾಗಿಲ್ಲ ಎಂದು ಕ್ರಿಕೆಟ್ ಆಸ್ಪ್ರೇಲಿಯಾ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಗೆ ವರದಿ ನೀಡಿದೆ.
ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಕೆಲವು ಅಸೀಸ್ ಪ್ರೇಕ್ಷಕರು ಭಾರತೀಯ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿದ್ದರು. ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ನೀಡಿದ ದೂರಿನ ಆಧಾರದ ಮೇಲೆ ಕ್ರಿಕೆಟ್ ಆಸ್ಟ್ರೇಲಿಯಾವು ನ್ಯೂ ಸೌಥ್ ವೇಲ್ಸ್ ಪೊಲೀಸರ ಸಹಾಯದಿಂದ ತನಿಖೆ ಆರಂಭಿಸಿತ್ತು.
ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಬೌಂಡರಿ ಲೈನ್ ಬಳಿ ಕ್ಷೇತ್ರರಕ್ಷಣೆ ಮಾಡುವ ವೇಳೆ ಕೆಲವು ಆಸ್ಟ್ರೇಲಿಯಾದ ಪ್ರೇಕ್ಷಕರು ಮೊಹಮ್ಮದ್ ಸಿರಾಜ್ ಅವರನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ. ತಕ್ಷಣವೇ ಅಂಪೈರ್ ಬಳಿ ಸಿರಾಜ್ ದೂರು ನೀಡಿದ್ದರು. ಘಟನೆ ಸಂಬಂಧ 6 ಪ್ರೇಕ್ಷಕರನ್ನು ಕ್ರಿಕೆಟ್ ಆಸ್ಪ್ರೇಲಿಯಾ ಮೈದಾನದಿಂದ ಹೊರಹಾಕಿತ್ತು. ಆ 6 ಮಂದಿ ತಪ್ಪಿತಸ್ಥರಲ್ಲ ಎಂದು ಕ್ರಿಕೆಟ್ ಆಸ್ಪ್ರೇಲಿಯಾ ಕ್ಲೀನ್ ಚಿಟ್ ನೀಡಿದೆ.
ಜನಾಂಗೀಯ ನಿಂದನೆ: ಕ್ರೀಡಾಂಗಣ ತೊರೆಯಲು ಆಯ್ಕೆ ನೀಡಿದ್ದ ಅಂಪೈರ್!
ಈ ಅವಮಾನದ ಹೊರತಾಗಿಯೂ ಕೆಚ್ಚೆದೆಯ ಆಟವಾಡಿದ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಆಟದ ಮೂಲಕವೇ ಆಸ್ಟ್ರೇಲಿಯನ್ನರಿಗೆ ತಿರುಗೇಟು ನೀಡಿತ್ತು.
2019ರಲ್ಲಿ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ಪ್ರವಾಸ ಮಾಡಿದ ವೇಳೆ ಕಿವೀಸ್ ಪ್ರೇಕ್ಷಕನೊಬ್ಬ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು ಜನಾಂಗೀಯವಾಗಿ ನಿಂದಿಸಿದ್ದರು. ಬಳಿಕ ಆ ವ್ಯಕ್ತಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯಗಳನ್ನು ವೀಕ್ಷಿಸದಂತೆ 2 ವರ್ಷಗಳ ಕಾಲ ನಿಷೇಧ ಹೇರಲಾಗಿದೆ. ಅಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಇತರೆ ದೇಶಗಳು ಕೈಗೊಂಡರೆ ಬಹುಶಃ ಜನಾಂಗೀಯ ನಿಂದನೆಗಳಿಗೆ ಬ್ರೇಕ್ ಬೀಳಬಹುದೇನೋ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.