ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜೂನ್ 07ರಂದು ಆರಂಭ
ಪ್ರಶಸ್ತಿಗಾಗಿ ಭಾರತ-ಆಸ್ಟ್ರೇಲಿಯಾ ನಡುವೆ ಪೈಪೋಟಿ
ಕೊನೆಯ ಹಂತದ ಅಭ್ಯಾಸದಲ್ಲಿ ನಿರತವಾಗಿರುವ ಉಭಯ ತಂಡಗಳು
ಲಂಡನ್(ಜೂ.05): ಭಾರತ ಹಾಗೂ ಆಸ್ಪ್ರೇಲಿಯಾ ನಡುವೆ ಜೂನ್ 7ರಂದು ಬುಧವಾರ ಆರಂಭವಾಗಲಿರುವ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದ್ದು, ಆಟಗಾರರು ಕೊನೆ ಹಂತದ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಭಾನುವಾರ ಭಾರತೀಯ ಆಟಗಾರರು ಪಂದ್ಯ ನಡೆಯಲಿರುವ ಲಂಡನ್ನ ದಿ ಓವಲ್ ಕ್ರೀಡಾಂಗಣಕ್ಕೆ ಆಗಮಿಸಿ, ಅಭ್ಯಾಸ ಶುರು ಮಾಡಿದ್ದಾರೆ. ಈವರೆಗೆ ಭಾರತ ತಂಡ ಸಸೆಕ್ಸ್ನ ಅರುಂಡೆಲ್ ಕೌಂಟಿ ಮೈದಾನದಲ್ಲಿ ಕಠಿಣ ತಾಲೀಮು ನಡೆಸುತ್ತಿತ್ತು. ಓವಲ್ ಮೈದಾನದಲ್ಲಿ ಆಟಗಾರರು ಅಭ್ಯಾಸದಲ್ಲಿ ನಿರತಾಗಿರುವ ಫೋಟೋವೊಂದನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಮತ್ತೊಂದೆಡೆ ಆಸ್ಪ್ರೇಲಿಯಾ ಆಟಗಾರರು ಬೆಕೆನ್‌ಹ್ಯಾಮ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಸೋಮವಾರ ಓವಲ್ ಕ್ರೀಡಾಂಗಣಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಹೇಜಲ್ವುಡ್ ಅಲಭ್ಯ!
ಪಂದ್ಯಕ್ಕೂ ಮುನ್ನ ಆಸೀಸ್ಗೆ ಆಘಾತ ಎದುರಾಗಿದ್ದು, ತಂಡದ ಪ್ರಮುಖ ವೇಗಿ ಜೋಸ್ ಹೇಜಲ್ವುಡ್ ಗಾಯದಿಂದಾಗಿ ಪಂದ್ಯದಿಂದ ಹೊರಬಿದ್ದಿದ್ದಾರೆ. ಐಪಿಎಲ್ ವೇಳೆ ಗಾಯಗೊಂಡಿದ್ದ ಹೇಜಲ್ವುಡ್ ಇನ್ನೂ ಸಂಪೂರ್ಣ ಗುಣಮುಖರಾಗಿಲ್ಲ. ಹೀಗಾಗಿ ಅವರ ಬದಲು ವೇಗಿ ಮೈಕಲ್ ನೆಸೆರ್ ತಂಡವನ್ನು ಕೂಡಿಕೊಂಡಿದ್ದಾರೆ ಎಂದು ಕ್ರಿಕೆಟ್ ಆಸ್ಪ್ರೇಲಿಯಾ ಮಾಹಿತಿ ನೀಡಿದೆ.
ಬೌಲ್, ಬ್ಯಾಟ್ ಮಾಡದೆ ಟೆಸ್ಟ್ ಗೆದ್ದ ಕ್ಯಾಪ್ಟನ್: ಬೆನ್ ಸ್ಟೋಕ್ಸ್ ಅಪರೂಪದ ದಾಖಲೆ!
ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್.ಭರತ್, ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮದ್ ಶಮಿ, ಮೊಹಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್, ಇಶಾನ್ ಕಿಶನ್.
ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್, ಮುಕೇಶ್ ಕುಮಾರ್, ಸೂರ್ಯಕುಮಾರ್ ಯಾದವ್.
ಆಸ್ಟ್ರೇಲಿಯಾ ಕ್ರಿಕೆಟ್ ತಂಡ:
ಪ್ಯಾಟ್ ಕಮಿನ್ಸ್(ನಾಯಕ), ಡೇವಿಡ್ ವಾರ್ನರ್, ಉಸ್ಮಾನ್ ಖವಾಜ, ಮ್ಯಾಟ್ ರೆನ್ಶಾ, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಮಿಚೆಲ್ ಮಾರ್ಷ್, ಅಲೆಕ್ಸ್ ಕೇರ್ರಿ, ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲೆಂಡ್, ನೇಥನ್ ಲಯನ್, ಟೋಡ್ ಮರ್ಫಿ.
ಟೆಸ್ಟ್ ನಿವೃತ್ತಿ ದಿನಾಂಕ ಘೋಷಿಸಿದ ವಾರ್ನರ್
ಲಂಡನ್: ಮುಂದಿನ ವರ್ಷ ಪಾಕಿಸ್ತಾನ ವಿರುದ್ಧದ ಸರಣಿ ಮೂಲಕ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸುವುದಾಗಿ ಆಸ್ಪ್ರೇಲಿಯಾ ಹಿರಿಯ ಬ್ಯಾಟರ್ ಡೇವಿಡ್ ವಾರ್ನರ್ ಖಚಿತಪಡಿಸಿದ್ದಾರೆ. ಆದರೆ ಏಕದಿನ, ಟಿ20 ಮಾದರಿಯಲ್ಲಿ ಮುಂದುವರಿಯಲು ಬಯಸಿರುವ ವಾರ್ನರ್ ಟಿ20 ವಿಶ್ವಕಪ್ನಲ್ಲಿ ಆಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಾರ್ನರ್, ಪಾಕ್ ವಿರುದ್ಧ ಸಿಡ್ನಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೊನೆ ಬಾರಿ ಟೆಸ್ಟ್ ಆಡಲಿದ್ದೇನೆ ಎಂದಿದ್ದಾರೆ.