
ದುಬೈ(ಜೂ.10): ಟೆಸ್ಟ್ ಪಂದ್ಯಗಳ ವೇಳೆ ಯಾವುದೇ ಆಟಗಾರನಲ್ಲಿ ಕೊರೋನಾ ಸೋಂಕು ದೃಢಪಟ್ಟರೆ ಇಲ್ಲವೇ ಸೋಂಕಿನ ಲಕ್ಷಣಗಳು ಕಂಡರೂ ಅಂತಹ ಆಟಗಾರರ ಬದಲಿಗೆ ಬೇರೊಬ್ಬ ಆಟಗಾರನನ್ನು ಕಣಕ್ಕಿಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅನುಮತಿ ನೀಡಿದೆ.
ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ಈ ನಿಯಮವನ್ನು ಜಾರಿ ಮಾಡುವಂತೆ ಪ್ರಸ್ತಾಪಿಸಿತ್ತು. ಆದರೆ ಆಟಗಾರರ ರೀಪ್ಲೇಸ್‌ಮೆಂಟ್ ನಿಯಮ ಏಕದಿನ ಹಾಗೂ ಟಿ20 ಪಂದ್ಯಗಳಿಗೆ ಅನ್ವಯವಾಗುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಕ್ರಿಕೆಟ್ ಕ್ರಾಂತಿ; ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಬಂದಳಿದ ವೆಸ್ಟ್ ಇಂಡೀಸ್!
ಚೆಂಡಿಗೆ ಎಂಜಲು ಹಚ್ಚುವುದು ನಿಷೇಧ: ಕೊರೋನಾ ಭೀತಿಯಿಂದಾಗಿ ಚೆಂಡಿಗೆ ಎಂಜಲು ಹಚ್ಚುವುದನ್ನು ಐಸಿಸಿ ನಿಷೇಧಿಸಿದೆ. ಒಂದುವೇಳೆ ಆಟಗಾರರು ಎಂಜಲು ಹಚ್ಚಿದರೆ ಅಂಪೈರ್ ವಾರ್ನಿಂಗ್ ನೀಡಲಿದ್ದಾರೆ. ಎರಡು ಬಾರಿ ತಂಡ ವಾರ್ನಿಂಗ್ ತೆಗೆದುಕೊಳ್ಳಬಹುದು. ಇದಾದ ಬಳಿಕ ಮತ್ತದೇ ತಪ್ಪು ಮರುಕಳಿಸಿದರೆ ಎದುರಾಳಿ ತಂಡಕ್ಕೆ ಪೆನಾಲ್ಟಿ ರೂಪದಲ್ಲಿ ನೀಡಲಾಗುತ್ತದೆ.
ಐಸಿಸಿಯ ಈ ನೂತನ ನಿಯಮದ ಬಗ್ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ. ಬೆವರು ಹಾಗೂ ಎಂಜಲು ಹಚ್ಚುವುದರಿಂದ ಬೌಲಿಂಗ್‌ನಲ್ಲಿ ಸ್ವಿಂಗ್ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಟಿ20 ವಿಶ್ವಕಪ್ ನಿರ್ಧಾರ ವಿಳಂಬಕ್ಕೆ ಬಿಸಿಸಿಐ ಬೇಸರ
ನವದೆಹಲಿ: ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಟೂರ್ನಿಯ ಬಗ್ಗೆ ನಿರ್ಧಾರ ಪ್ರಕಟಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅನಗತ್ಯವಾಗಿ ವಿಳಂಬ ಮಾಡುತ್ತಿದೆ.
ಐಸಿಸಿ ತನ್ನ ನಿರ್ಧಾರವನ್ನು ಶೀಘ್ರ ಪ್ರಕಟಿಸಬೇಕು ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಒತ್ತಾಯಿಸಿದ್ದಾರೆ. ಟಿ20 ವಿಶ್ವಕಪ್ ಮುಂದೂಡಿದರೆ ಇಲ್ಲವೇ ರದ್ದುಗೊಂಡರೆ ಆ ಅವಧಿಯಲ್ಲಿ ಐಪಿಎಲ್ ಟೂರ್ನಿ ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ. ಬುಧವಾರ ಐಸಿಸಿ ಸಭೆ ನಡೆಯಲಿದ್ದು, ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಐಸಿಸಿ ತಕ್ಷಣ ನಿರ್ಧಾರ ಪ್ರಕಟಿಸುವುದಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.