ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದಿಲ್ಲ. ವಿಶ್ವದೆಲ್ಲೆಡೆ ಆತಂಕ ಹಾಗೇ ಇದೆ. ಕ್ರಿಕೆಟ್ ಟೂರ್ನಿ ಆಯೋಜಿಸಬೇಕೆ? ಬೇಡವೆ? ಅನ್ನೋ ಗೊಂದಲ ಹಾಗೂ ಭಯ ಬಹುತೇಕ ಕ್ರಿಕೆಟ್ ಮಂಡಳಿಗಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ, ಕ್ರಿಕೆಟ್ ಕ್ರಾಂತಿಗೆ ಮಂದಾಗಿದೆ.
ಮ್ಯಾಂಚೆಸ್ಟರ್(ಜೂ.09): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಎಲ್ಲಾ ಕ್ರೀಡಾ ಚಟುವಟಿಕೆ ಬಂದ್ ಆಗಿದೆ. ಲಾಕ್‌ಡೌನ್ ಸಡಿಲಿಕೆಯಾಗಿದೆ. ಆದರೆ ಕೊರೋನಾ ಕಡಿಮೆಯಾಗಿಲ್ಲ. ಹೀಗಾಗಿ ಕ್ರಿಕೆಟಿಗರ ಸುರಕ್ಷತೆ ದೃಷ್ಟಿಯಿಂದ ಬಹುತೇಕ ಎಲ್ಲಾ ಕ್ರಿಕೆಟ್ ಮಂಡಳಿಗಳು ಸರಣಿ ಆಯೋಜಿಸಲು ಹಿಂದೇಟು ಹಾಕುತ್ತಿದೆ. ಇದರ ನಡುವೆ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸರಣಿ ಆಯೋಜಿಸಲು ಮಹತ್ವದ ಹೆಜ್ಜೆ ಇಟ್ಟಿದೆ.
3 ಟೆಸ್ಟ್ ಪಂದ್ಯಗಳ ಸರಣಿಗಾಗಿ ಜಾಸನ್ ಹೋಲ್ಡರ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್‌ಗೆ ಬಂದಿಳಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಷ್ಟು ದಿನ ಅಭಿಮಾನಿಗಳು ಹಳೇ ಪಂದ್ಯಗಳನ್ನು ಟಿವಿಯಲ್ಲಿ ನೋಡಿ ಸಾಕಾಗಿದೆ. ಇನ್ಮುಂದೆ ಹಾಗಿಲ್ಲ, ಲೈವ್ ಮ್ಯಾಚ್ ನೋಡುವುದಕ್ಕೆ ತಯಾರಾಗಿ ಎಂದು ವೆಸ್ಟ್ ಇಂಡೀಸ್ ನಾಯಕ ಜಾಸನ್ ಹೋಲ್ಡರ್ ಹೇಳಿದ್ದಾರೆ.
ಜೂನ್‌ನಲ್ಲಿ ಆರಂಭವಾಗಬೇಕಿದ್ದ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿ ಇದೀಗ ಜುಲೈ ತಿಂಗಳಿನಿಂದ ಆರಂಭವಾಗಲಿದೆ. ಕೊರೋನಾ ವೈರಸ್ ಕಾರಣ ಆಟಗಾರರ ಕ್ವಾರಂಟೈನ್, ಅಭ್ಯಾಸ ಕಾರಣಗಳಿಂದ ವಿಂಡೀಸ್ ತಂಡ ಬಹುಬೇಗನೆ ಇಂಗ್ಲೆಂಡ್‌ಗೆ ಆಗಮಿಸಿದೆ. ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಹಲವು ಮುಂಜಾಗ್ರತ ಕ್ರಮ ತೆಗೆದುಕೊಂಡಿದೆ.
ವಿಂಡೀಸ್ ತಂಡ, ಇಂಗ್ಲೆಂಡ್‌ಗೆ ಆಗಮಿಸುವ ಧೈರ್ಯ ಮಾಡಿದೆ. ಮೆಲ್ಲನೆ ಕ್ರಿಕೆಟ್ ಆರಂಭವಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಎಂದು ಇಂಗ್ಲೆಂಡ್ ಜೋ ರೂಟ್ ಹೇಳಿದ್ದಾರೆ.