
ಬೆಂಗಳೂರು: ರಾಹುಲ್ ದ್ರಾವಿಡ್ ಬಳಿಕ ಭಾರತ ಟೆಸ್ಟ್ ತಂಡದ ಅತ್ಯಂತ ನಂಬಿಗಸ್ಥ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ, ಆಧುನಿಕ ಕ್ರಿಕೆಟ್‌ನ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಇದೀಗ ದಿಢೀರ್ ಎನ್ನುವಂತೆ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಇಂದು ವಿದಾಯ ಘೋಷಿಸಿದ್ದಾರೆ. ತಮ್ಮ ಕೆಚ್ಚೆದೆಯ ಹೋರಾಟದ ಮೂಲಕವೇ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಹಲವಾರು ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದ ಪೂಜಾರ ಅವರ ಯುಗಾಂತ್ಯವಾಗಿದೆ.
ಭಾರತ ಪರ 103 ಟೆಸ್ಟ್ ಪಂದ್ಯಗಳನ್ನಾಡಿ 43.60 ಬ್ಯಾಟಿಂಗ್ ಸರಾಸರಿಯಲ್ಲಿ 19 ಶತಕ ಸಹಿತ 7,195 ರನ್ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಪರ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರಾಜ್‌ಕೋಟ್ ಮೂಲದ ಪೂಜಾರ ಏಳನೇ ಸ್ಥಾನ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಪೂಜಾರ ಅವರ ದಿಟ್ಟ ಪ್ರದರ್ಶನ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಹಲವು ವರ್ಷಗಳ ಕಾಲ ಅಚ್ಚಳಿಯದೇ ಉಳಿಯಲಿದೆ. ಚೇತೇಶ್ವರ್ ಪೂಜಾರ 2023ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಎದುರು ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಕೆಲ ಟೆಸ್ಟ್ ಪಂದ್ಯಗಳಲ್ಲಿ ಪೂಜಾರ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ಬಿಸಿಸಿಐ ಆಯ್ಕೆ ಸಮಿತಿಯು ಯುವ ಆಟಗಾರರಿಗೆ ಸ್ಥಾನ ನೀಡಲು ಮುಂದಾಯಿತು. ಹೀಗಾಗಿ ಪೂಜಾರ ಕಳೆದ ಒಂದೂವರೆ ವರ್ಷದಿಂದಲೂ ಟೀಂ ಇಂಡಿಯಾದಲ್ಲಿ ಅವಕಾಶ ವಂಚಿತರಾದರು. ಇದೀಗ ಪೂಜಾರ ಭಾವುಕ ಸಂದೇಶದೊಂದಿಗೆ ತಮ್ಮ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
ಭಾರತ ಜೆರ್ಸಿ ತೊಟ್ಟು, ರಾಷ್ಟ್ರಗೀತೆ ಹಾಡುವುದು, ಪ್ರತಿಬಾರಿ ಭಾರತಕ್ಕಾಗಿ ನನ್ನಲ್ಲಿನ ಬೆಸ್ಟ್ ನೀಡುವ ಗುರಿಯೊಂದಿಗೆ ಮೈದಾನಕ್ಕಿಳಿಯುತ್ತಿದ್ದೆ. ಆ ಕ್ಷಣ ಅದೆಷ್ಟು ಅಮೂಲ್ಯ ಕ್ಷಣ ಎನ್ನುವುದನ್ನು ಪದಗಳಲ್ಲಿ ಹೇಳಲು ಅಸಾಧ್ಯ. ಆದರೆ ಎಲ್ಲದಕ್ಕೂ ಒಂದು ಕೊನೆಯಿರಲೇಬೇಕು. ತುಂಬ ಹೆಮ್ಮೆ ಹಾಗೂ ಗೌರವಗಳೊಂದಿಗೆ ನಾನು ಎಲ್ಲಾ ಮಾದರಿಯ ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು ಎಂದು ಚೇತೇಶ್ವರ್ ಪೂಜಾರ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಪ್ರಕಟಿಸಿದ್ದಾರೆ.
ಚೇತೇಶ್ವರ್ ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಹಲವಾರು ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದಾರೆ. ಈ ಪೈಕಿ 2018-19ನೇ ಸಾಲಿನ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆ ಟೆಸ್ಟ್ ಸರಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಎದುರು 3 ಶತಕ ಸಹಿತ ಬರೋಬ್ಬರಿ 1258 ಎಸೆತಗಳನ್ನು ಎದುರಿಸಿ ಅಮೂಲ್ಯ 521 ರನ್ ಸಿಡಿಸಿದ್ದರು. ಈ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಚೊಚ್ಚಲ ಟೆಸ್ಟ್ ಸರಣಿ ಗೆಲುವಿನಲ್ಲಿ ಪೂಜಾರ ಪ್ರಮುಖ ಪಾತ್ರ ವಹಿಸಿದ್ದರು.
ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಸತತ ಎರಡು ಬಾರಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆಲುವಿನಲ್ಲೂ ಚೇತೇಶ್ವರ್ ಪೂಜಾರ ಪ್ರಮುಖ ಪಾತ್ರವಹಿಸಿದ್ದರು. ಅವರ ಶಾಂತಸ್ವಭಾವದ ರಕ್ಷಣಾತ್ಮಕ ಬ್ಯಾಟಿಂಗ್ ವರ್ಲ್ಡ್ ಕ್ಲಾಸ್ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸುವಂತೆ ಮಾಡುತ್ತಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.