
ಮೈಸೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ 4 ತಂಡಗಳು ಪ್ಲೇ-ಆಫ್ ಸ್ಥಾನ ಖಚಿತಪಡಿಸಿಕೊಂಡಿವೆ. ಮೈಸೂರು ವಾರಿಯರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ಟೂರ್ನಿಯಿಂದಲೇ ಹೊರಬಿದ್ದಿವೆ.
ಶನಿವಾರ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಮೈಸೂರು ತಂಡ 5 ವಿಕೆಟ್‌ನಿಂದ ಸೋಲನುಭವಿಸಿತು. ಇದರೊಂದಿಗೆ ಹುಬ್ಬಳ್ಳಿ, ಬೆಂಗಳೂರು, ಗುಲ್ಬರ್ಗ ಮಿಸ್ಟಿಕ್ಸ್ ಪ್ಲೇ-ಆಫ್‌ಗೇರಿತು. ಮಂಗಳೂರು ಡ್ರ್ಯಾಗನ್ಸ್ ಶುಕ್ರವಾರವೇ ಪ್ಲೇ-ಆಫ್ ಸ್ಥಾನ ಖಚಿತಪಡಿಸಿಕೊಂಡಿತ್ತು. ಮೈಸೂರಿಗೆ ಇನ್ನೊಂದು ಪಂದ್ಯ ಇದೆ. ಅದರಲ್ಲಿ ಗೆದ್ದರೂ ಈ ಮೇಲಿನ 4 ತಂಡಗಳನ್ನು ಅಂಕಗಳಿಂದ ಹಿಂದಿಕ್ಕಲು ಸಾಧ್ಯವಿಲ್ಲ.
ಸದ್ಯ 4 ತಂಡಗಳು ಪ್ಲೇ-ಆಫ್‌ಗೇರಿದ್ದರೂ, ಅಗ್ರ-2 ಸ್ಥಾನಕ್ಕೆ ಪೈಪೋಟಿ ಹೆಚ್ಚಿದೆ. ಸೋಮವಾರ ಲೀಗ್ ಹಂತದ ಪಂದ್ಯಗಳು ಕೊನೆಗೊಳ್ಳಲಿದ್ದು, ಮಂಗಳವಾರ ನಾಕೌಟ್ ಪಂದ್ಯಗಳು ಪ್ರಾರಂಭಗೊಳ್ಳಲಿವೆ.
ಹುಬ್ಬಳ್ಳಿಗೆ 6ನೇ ಜಯ:
ಹುಬ್ಬಳ್ಳಿ ತಂಡ ಶನಿವಾರ ತನ್ನ 6ನೇ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿ ಮೈಸೂರು 8 ವಿಕೆಟ್ ನಷ್ಟದಲ್ಲಿ ಕಲೆಹಾಕಿದ್ದು ಕೇವಲ 129 ರನ್. ಎಸ್.ಯು. ಕಾರ್ತಿಕ್ 37 ಎಸೆತಗಳಲ್ಲಿ 53 ರನ್ ಸಿಡಿಸಿದ್ದು ಹೊರತುಪಡಿಸಿ ಬೇರೆ ಯಾರೂ ತಂಡಕ್ಕೆ ಆಸರೆಯಾಗಲಿಲ್ಲ. ನಾಯಕ ಮನೀಶ್ ಪಾಂಡೆ 2 ರನ್ ಗಳಿಸಲು 8 ಎಸೆತ ತೆಗೆದುಕೊಂಡರು. ಉಳಿದಂತೆ ಹರ್ಷಿಲ್ ಧರ್ಮಾನಿ 18 ಎಸೆತಕ್ಕೆ 20, ಶ್ರೀನಿವಾಸ್ ಶರತ್ 19 ಎಸೆತಕ್ಕೆ 27 ರನ್ ಗಳಿಸಿದರು.
ಹುಬ್ಬಳ್ಳಿ ಪರ ಶ್ರೀಶಾ ಆಚಾರ್ ಮಾರಕ ದಾಳಿ ಸಂಘಟಿಸಿದರು. 4 ಓವರ್‌ಗಳಲ್ಲಿ 1 ಮೇಡಿನ್ ಸಹಿತ ಕೇವಲ 11 ರನ್ ನೀಡಿ 3 ವಿಕೆಟ್ ಕಬಳಿಸಿದರು. ಯಶ್ ರಾಜ್ ಪೂಂಜ 19 ರನ್‌ಗೆ 2 ವಿಕೆಟ್ ಕಿತ್ತರು.
ಸುಲಭ ಗುರಿ ಬೆನ್ನತ್ತಿದ ಹುಬ್ಬಳ್ಳಿ ತಂಡ ಪವರ್‌ಪ್ಲೇ ಮುಕ್ತಾಯಗೊಳ್ಳುವಾಗಲೇ ಅರ್ಧ ಗೆದ್ದಿತ್ತು. ನಾಯಕ ದೇವದತ್ ಪಡಿಕ್ಕಲ್ ಕೇವಲ 19 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ನೊಂದಿಗೆ 44 ರನ್ ಸಿಡಿಸಿದರು. ಮೊಹಮ್ಮದ್ ತಾಹ 7 ರನ್‌ಗೆ ಔಟಾದರೂ, ಕಾರ್ತಿಕೇಯ ಕೆ.ಪಿ. 32 ಎಸೆತಗಳಲ್ಲಿ 52 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಮೈಸೂರು ಪರ ಕೆ.ಗೌತಮ್ 3 ವಿಕೆಟ್ ಕಿತ್ತರು.
ಇಂದಿನ ಪಂದ್ಯಗಳು
ಬೆಂಗಳೂರು-ಮಂಗಳೂರು, ಮ.3.15ಕ್ಕೆ
ಶಿವಮೊಗ್ಗ-ಮೈಸೂರು, ಸಂಜೆ 7.15ಕ್ಕೆ
ದುಲೀಪ್ ಟ್ರೋಫಿಗಿಲ್ಲ ಗಿಲ್?
ನವದೆಹಲಿ: ಟೀಂ ಇಂಡಿಯಾ ಟೆಸ್ಟ್ ನಾಯಕ ಶುಭಮನ್ ಗಿಲ್ ಅನಾರೋಗ್ಯದಿಂದ ಬಳಲುತ್ತಿದ್ದು, ಹೀಗಾಗಿ ಮುಂದಿನ ವಾರದಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ದುಲೀಪ್ ಟ್ರೋಫಿಗೆ ಗೈರಾಗುವ ಸಾಧ್ಯತೆಯಿದೆ. ಗಿಲ್ ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದರು. ಒಂದು ವೇಳೆ ಅವರು ಅಲಭ್ಯರಾದರೆ ಅಂಕಿತ್ ಕುಮಾರ್‌ಗೆ ನಾಯಕತ್ವದ ಹೊಣೆ ನೀಡುವ ಸಾಧ್ಯತೆಯಿದೆ. ಆ.29ರಿಂದ ಸೆ.15ರ ತನಕ ಟೂರ್ನಿ ನಡೆಯಲಿದೆ.
2027ರ ಐಸಿಸಿ ಏಕದಿನ ವಿಶ್ವಕಪ್: ದಕ್ಷಿಣ ಆಫ್ರಿಕಾದಲ್ಲಿ 44 ಪಂದ್ಯ
ಜೋಹಾನ್ಸ್‌ಬರ್ಗ್: 2027ರ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ 44 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಶನಿವಾರ ಟೂರ್ನಿಗೆ ಸ್ಥಳೀಯ ಆಯೋಜನಾ ಸಮಿತಿ ರಚನೆ ವೇಳೆ ಪಂದ್ಯಗಳ ಆತಿಥ್ಯ ನಗರಗಳನ್ನು ಪ್ರಕಟಿಸಲಾಯಿತು. ಇನ್ನುಳಿದ 10 ಪಂದ್ಯಗಳು ಟೂರ್ನಿಯ ಸಹ ಆತಿಥ್ಯ ದೇಶಗಳಾದ ನಮೀಬಿಯಾ ಹಾಗೂ ಜಿಂಜಾಬ್ವೆಯಲ್ಲಿ ನಡೆಯಲಿವೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 14 ತಂಡಗಳು ಪಾಲ್ಗೊಳ್ಳಲಿದ್ದು, 54 ಪಂದ್ಯಗಳು ನಡೆಯಲಿದೆ. ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.