
ಚೆನ್ನೈ: ಟೀಂ ಇಂಡಿಯಾ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡವು ಚೆನ್ನೈ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 149 ರನ್‌ಗಳಿಗೆ ಸರ್ವಪತನ ಕಂಡಿದೆ. ಫಾಲೋ ಆನ್ ಹೇರುವ ಅವಕಾಶ ಇದ್ದರೂ ಹಾಗೆ ಮಾಡದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, 227 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ, ಎರಡನೇ ಇನಿಂಗ್ಸ್ ಆರಂಭಿಸಿದ್ದು ಭಾರತ ಎರಡನೇ ದಿನದಾಟದಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 81 ರನ್ ಬಾರಿಸಿದ್ದು, ಒಟ್ಟಾರೆ 308 ರನ್‌ಗಳ ಬೃಹತ್ ಮುನ್ನಡೆ ಪಡೆದಿದೆ.
ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 376 ರನ್ ಗಳಿಸಿ ಸರ್ವಪತನ ಕಂಡಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ತಂಡಕ್ಕೆ ಮೊದಲ ಓವರ್‌ನಲ್ಲೇ ಜಸ್ಪ್ರೀತ್ ಬುಮ್ರಾ ಶಾಕ್ ನೀಡಿದರು. ಬಾಂಗ್ಲಾದೇಶದ ಆರಂಭಿಕ ಬ್ಯಾಟರ್‌ಗಳಾದ ಶದಮನ್ ಇಸ್ಲಾಂ 2 ರನ್ ಗಳಿಸಿ ಬುಮ್ರಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರೆ,, ಝಾಕಿರ್ ಹಸನ್‌ಗೆ ಆಕಾಶ್‌ದೀಪ್ ಪೆವಿಲಿಯನ್ ಹಾದಿ ತೋರಿಸಿದರು.
ನಾಯಕ ಶಾಂತೋ 20 ರನ್, ಶಕೀಬ್ ಅಲ್ ಹಸನ್ 32, ಲಿಟನ್ ದಾಸ್ 22 ರನ್ ಹಾಗೂ ಮೆಹದಿ ಹಸನ್ ಅಜೇಯ 27 ರನ್ ಬಾರಿಸಿದ್ದು ಬಿಟ್ಟರೇ, ಉಳಿದ್ಯಾವ ಬ್ಯಾಟರ್‌ಗಳು 20+ ರನ್ ಬಾರಿಸಲು ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ ತಂಡವು 149 ರನ್‌ಗಳಿಗೆ ಮೊದಲ ಇನಿಂಗ್ಸ್‌ನಲ್ಲಿ ಗಂಟುಮೂಟೆ ಕಟ್ಟಿತು.
ಟೀಂ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 50 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಹಂಚಿಕೊಂಡರು. ಆದರೆ ಲೋಕಲ್ ಹೀರೋ ರವಿಚಂದ್ರನ್ ಅಶ್ವಿನ್ 13 ಓವರ್ ಬೌಲಿಂಗ್ ಮಾಡಿದರು ಯಾವುದೇ ವಿಕೆಟ್ ದಕ್ಕಲಿಲ್ಲ.
ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್: ಕುಸಿದ ಭಾರತವನ್ನು ಮೇಲೆತ್ತಿದ ಅಶ್ವಿನ್-ಜಡೇಜಾ
ಇನ್ನು ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಒಂದಂಕಿ(5) ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೆ, ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ 10 ರನ್‌ಗಳಿಗೆ ಸೀಮಿತವಾಯಿತು. ಕೇವಲ 28 ರನ್‌ಗಳಿಗೆ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು. ಈ ಮೂರನೇ ವಿಕೆಟ್‌ಗೆ ಜತೆಯಾದ ಶುಭ್‌ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಕೊಂಚ ಆಸರೆಯಾದರು. ಕೊಹ್ಲಿ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಗಿಲ್ ಅಜೇಯ 33 ಹಾಗೂ ರಿಷಭ್ ಪಂತ್ 12 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.