Latest Videos

ಕೊನೆಯ ಬಾರಿಗೆ ಟಿ20 ವಿಶ್ವಕಪ್ ಫೈನಲ್‌ನಲ್ಲಾದ್ರೂ ಅಬ್ಬರಿಸುತ್ತಾರಾ ವಿರಾಟ್ ಕೊಹ್ಲಿ..?

By Naveen KodaseFirst Published Jun 28, 2024, 4:11 PM IST
Highlights

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಇಂಗ್ಲೆಂಡ್ ಎದುರಿನ ಸೆಮಿಫೈನಲ್‌ನಲ್ಲೂ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ. ಕೊಹ್ಲಿ ಫೈನಲ್‌ನಲ್ಲಾದರೂ ಅಬ್ಬರಿಸುತ್ತಾರಾ ಎನ್ನುವ ಕುತೂಹಲ ಜೋರಾಗಿದೆ

ಬೆಂಗಳೂರು: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಕಳೆದೊಂದು ದಶಕದಿಂದ ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೇರಲು ವಿಫಲವಾಗಿದ್ದ ಟೀಂ ಇಂಡಿಯಾ, ಇದೀಗ ಕೊನೆಗೂ ಹಲವು ಸವಾಲುಗಳನ್ನು ಮೆಟ್ಟಿನಿಂತು ಅಜೇಯವಾಗಿಯೇ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಟೀಂ ಇಂಡಿಯಾ ಅಜೇಯವಾಗಿ ಫೈನಲ್ ಪ್ರವೇಶಿಸಿದೆ ಎಂದ ಮಾತ್ರಕ್ಕೆ ಭಾರತ ತಂಡದಲ್ಲಿ ಎಲ್ಲವೂ ಸರಿಯಿದೆ ಎಂದರ್ಥವಲ್ಲ. ಮಾಜಿ ನಾಯಕ ವಿರಾಟ್ ಕೊಹ್ಲಿಯ ದಯನೀಯ ಬ್ಯಾಟಿಂಗ್ ವೈಫಲ್ಯ, ಟೀಂ ಮ್ಯಾನೇಜ್‌ಮೆಂಟ್ ತಲೆನೋವು ಹೆಚ್ಚಿಸುವಂತೆ ಮಾಡಿದೆ.

ಐಸಿಸಿ ಟೂರ್ನಿಯಲ್ಲಿ ಅದ್ಭುತವಾದ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ವಿರಾಟ್ ಕೊಹ್ಲಿ, 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರನ್ ಮಳೆ ಹರಿಸಬಹುದು ಎಂದೇ ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಯಾಕೆಂದರೆ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನಡೆದ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದು ರನ್ ಮಳೆ ಹರಿಸಿದ್ದರು. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಗರಿಷ್ಠ ರನ್ ಸಿಡಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಟಿ20 ವಿಶ್ವಕಪ್‌ನಲ್ಲಿ ಮುಂದುವರೆದ ವಿರಾಟ್ ಕೊಹ್ಲಿ ಫ್ಲಾಪ್‌ ಶೋ!

ಐಪಿಎಲ್‌ನಲ್ಲಿ ಆರಂಭಿಕನಾಗಿ ಆರ್‌ಸಿಬಿ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ವಿರಾಟ್ ಕೊಹ್ಲಿ, ಪ್ರದರ್ಶನವನ್ನು ಗಮನಿಸಿದ ಟೀಂ ಮ್ಯಾನೇಜ್‌ಮೆಂಟ್, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಜತೆ ಆರಂಭಿಕನಾಗಿ ಕಣಕ್ಕಿಳಿಸಲು ತೀರ್ಮಾನಿಸಿತು. ಆದರೆ ಟೀಂ ಮ್ಯಾನೇಜ್‌ಮೆಂಟ್ ಲೆಕ್ಕಾಚಾರ ಇದುವರೆಗೂ ತಲೆಕೆಳಗಾಗಿ ಹೋಗಿದೆ. ಗ್ರೂಪ್ ಹಂತದಲ್ಲಿ ವಿರಾಟ್ ಕೊಹ್ಲಿ ಮೂರು ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 5 ರನ್ ಮಾತ್ರ. 

ಇನ್ನು ಗ್ರೂಪ್ ಹಂತದಲ್ಲಿ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ, ಸೂಪರ್ 8 ಹಂತದಲ್ಲಾದರೂ ಫಾರ್ಮ್‌ಗೆ ಮರಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆಫ್ಘಾನಿಸ್ತಾನ ಎದುರು 24 ಎಸೆತಗಳಲ್ಲಿ 24 ರನ್ ಹಾಗೂ ಬಾಂಗ್ಲಾದೇಶ ಎದುರು 28 ಎಸೆತಗಳಲ್ಲಿ 37 ರನ್ ಗಳಿಸಿದ್ದ ಕೊಹ್ಲಿ, ಆಸೀಸ್ ಎದುರು ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದರು. ಇನ್ನು ಇಂಗ್ಲೆಂಡ್ ಎದುರಿನ ನಾಕೌಟ್ ಪಂದ್ಯದಲ್ಲಿ ಕೊಹ್ಲಿ ಆರ್ಭಟಿಸಬಹುದು ಎನ್ನುವ ನಿರೀಕ್ಷೆ ಕೂಡಾ ಮತ್ತೆ ಹುಸಿಯಾಗಿದ್ದು, ಕೊಹ್ಲಿ 9 ಎಸೆತಗಳಲ್ಲಿ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಫೈನಲ್‌ ಪ್ರವೇಶಿಸುತ್ತಿದ್ದಂತೆಯೇ ಆನಂದಭಾಷ್ಪ ಸುರಿಸಿದ ರೋಹಿತ್ ಶರ್ಮಾ..! ಆಗ ಕೊಹ್ಲಿ ಪ್ರತಿಕ್ರಿಯೆ ಹೇಗಿತ್ತು ನೋಡಿ

‘ರನ್‌ ಮಷಿನ್‌’ ಕೊಹ್ಲಿಯ ಬ್ಯಾಟ್‌ ಈ ವಿಶ್ವಕಪ್‌ನಲ್ಲಿ ಹೆಚ್ಚು ಸದ್ದು ಮಾಡಿಲ್ಲ. 7 ಪಂದ್ಯಗಳಲ್ಲಿ ವಿರಾಟ್‌ ಗಳಿಸಿರುವುದು ಕೇವಲ 75 ರನ್‌. ಈ ವಿಶ್ವಕಪ್‌ನಲ್ಲಿ ಅವರ ಬ್ಯಾಟಿಂಗ್‌ ನೋಡಿದವರಿಗೇ ಇದು ನಿಜಕ್ಕೂ ಕೊಹ್ಲಿಯೇ ಎನ್ನುವ ಅನುಮಾನ ಕಾಡಲಾರಂಭಿಸಿದೆ. 7 ಇನಿಂಗ್ಸ್‌ಗಳ ಪೈಕಿ ವಿರಾಟ್ ಕೊಹ್ಲಿ ಕೇವಲ ಎರಡು ಬಾರಿ ಮಾತ್ರ ಎರಡಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಹುತೇಕ ಕೊನೆಯ ವಿಶ್ವಕಪ್: 35 ವರ್ಷದ ವಿರಾಟ್ ಕೊಹ್ಲಿ ಪಾಲಿಗೆ ಬಹುತೇಕ ಇದೇ ಕೊನೆಯ ಟಿ20 ವಿಶ್ವಕಪ್ ಆಗುವ ಸಾಧ್ಯತೆಯಿದೆ. ಹೀಗಾಗಿ ವಿರಾಟ್ ಕೊಹ್ಲಿ ತಮ್ಮ ಪಾಲಿನ ಬಹುತೇಕ ಕೊನೆಯ ವಿಶ್ವಕಪ್ ಫೈನಲ್‌ನಲ್ಲಿ ಸ್ಮರಣೀಯ ಇನಿಂಗ್ಸ್ ಆಡುವ ಮೂಲಕ ಟೀಂ ಇಂಡಿಯಾಗೆ ಐಸಿಸಿ ಟ್ರೋಫಿ ಬರ ನೀಗಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಫೈನಲ್‌ನಲ್ಲಾದರೂ ಮಿಂಚುತ್ತಾರಾ ಕೊಹ್ಲಿ?: 

ಹೌದು, ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಕ್ರಿಕೆಟ್ ಲೆಜೆಂಡ್ ವಿರಾಟ್ ಕೊಹ್ಲಿ, ಜೂನ್ 29ರಂದು ದಕ್ಷಿಣ ಆಫ್ರಿಕಾ ಎದುರಿನ ಫೈನಲ್ ಪಂದ್ಯದಲ್ಲಾದರೂ ಅಬ್ಬರಿಸುತ್ತಾರಾ ಎನ್ನುವ ಕುತೂಹಲ ಜೋರಾಗಿದೆ. ವಿರಾಟ್ ಕೊಹ್ಲಿ ಇದುವರೆಗೂ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿಲ್ಲ. ಅದೇ ರೀತಿ ಟೀಂ ಇಂಡಿಯಾ ಕೂಡಾ 2013ರಿಂದೀಚೆಗೆ ಐಸಿಸಿ ಟ್ರೋಫಿ ಗೆಲ್ಲಲು ಪದೇ ಪದೇ ವಿಫಲವಾಗುತ್ತಲೇ ಬಂದಿದೆ. ಹೀಗಾಗಿ ವಿರಾಟ್ ಕೊಹ್ಲಿ ಹಳೆಯ ವೈಫಲ್ಯಗಳನ್ನು ಮರೆತು ಫೈನಲ್‌ನಲ್ಲಿ ದೊಡ್ಡ ಇನಿಂಗ್ಸ್ ಆಡುವ ಮೂಲಕ ದೇಶಕ್ಕೆ ಟಿ20 ಟ್ರೋಫಿ ಗೆದ್ದುಕೊಡಲಿ ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಹಾರೈಕೆಯಾಗಿದೆ. 

ಇನ್ನು ಟೂರ್ನಿಯುದ್ದಕ್ಕೂ ಆರಂಭಿಕನಾಗಿ ವೈಫಲ್ಯ ಅನುಭವಿಸಿರುವ ವಿರಾಟ್ ಕೊಹ್ಲಿ, ಫೈನಲ್ ಪಂದ್ಯದಲ್ಲಿ ತಮ್ಮ ನೆಚ್ಚಿನ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾರೋ ಅಥವಾ ಫೈನಲ್‌ನಲ್ಲೂ ಆರಂಭಿಕನಾಗಿಯೇ ಕಣಕ್ಕಿಳಿಯುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.

click me!