Asianet Suvarna News Asianet Suvarna News

ಫೈನಲ್‌ ಪ್ರವೇಶಿಸುತ್ತಿದ್ದಂತೆಯೇ ಆನಂದಭಾಷ್ಪ ಸುರಿಸಿದ ರೋಹಿತ್ ಶರ್ಮಾ..! ಆಗ ಕೊಹ್ಲಿ ಪ್ರತಿಕ್ರಿಯೆ ಹೇಗಿತ್ತು ನೋಡಿ

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಫೈನಲ್ ಪ್ರವೇಶಿಸುತ್ತಿದ್ದಂತೆಯೇ ನಾಯಕ ರೋಹಿತ್ ಶರ್ಮಾ, ಡ್ರೆಸ್ಸಿಂಗ್ ರೂಂ ಹೊರಗೆ ಕುಳಿತು ಆನಂದ ಭಾಷ್ಪ ಸುರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

Rohit Sharma gets emotional as India reach T20 World Cup final Virat Kohli does this kvn
Author
First Published Jun 28, 2024, 3:12 PM IST

ಗಯಾನ: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇದೀಗ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷ ತವರಿನಲ್ಲೇ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋಲು ಅನುಭವಿಸಿದ್ದ ಟೀಂ ಇಂಡಿಯಾ, ಇದೀಗ ಮತ್ತೆ ಫೈನಲ್ ಪ್ರವೇಶಿಸಿ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳಲು ಸಜ್ಜಾಗಿದೆ. ಇನ್ನು ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಎದುರು ಟೀಂ ಇಂಡಿಯಾ 68 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಡುತ್ತಿದ್ದಂತೆಯೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ಷಣಕಾಲ ಭಾವುಕರಾಗಿ ಆನಂದಭಾಷ್ಪ ಸುರಿಸಿದರು. ಆಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಭುಜ ತಟ್ಟಿ ಸಮಾಧಾನ ಮಾಡಿದರು. ಈ ವಿಡಿಯೋವೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ಮುಕ್ತಾಯವಾಗುತ್ತಿದ್ದಂತೆಯೇ ಸಾಂಪ್ರದಾಯಿಕವಾಗಿ ಟೀಂ ಇಂಡಿಯಾ ಆಟಗಾರರು, ಇಂಗ್ಲೆಂಡ್ ಆಟಗಾರರನ್ನು ಕೈಕುಲುಕಿ ಡ್ರೆಸ್ಸಿಂಗ್‌ ರೂಂಗೆ ವಾಪಾಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಡ್ರೆಸ್ಸಿಂಗ್ ರೂಂ ಹೊರಗೆ ಕುಳಿತಿದ್ದ ರೋಹಿತ್ ಶರ್ಮಾ, ಖುಷಿಯಲ್ಲಿ ಭಾವನೆ ತಡೆಹಿಡಿಯಲಾರದೇ ಆನಂಧಭಾಷ್ಪ ಜಿನುಗಿತು. ಈ ಸಂದರ್ಭದಲ್ಲಿ ಡ್ರೆಸ್ಸಿಂಗ್ ರೂಂಗೆ ವಾಪಾಸ್ಸಾಗುತ್ತಿದ್ದ ವಿರಾಟ್ ಕೊಹ್ಲಿ, ಹಿಟ್‌ ಮ್ಯಾನ್ ಅವರನ್ನು ಸಮಾಧಾನ ಮಾಡಿ ತೆರಳಿದರು. 

'ನಾವು ಸೆಮೀಸ್‌ ಸೋತಿದ್ದೇ ಹೀಗಾಗಿ': ಭಾರತ ಎದುರಿನ ಸೋಲಿಗೆ ಕಾರಣ ಬಿಚ್ಚಿಟ್ಟ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್..!

ಹೀಗಿತ್ತು ನೋಡಿ ಆ ವಿಡಿಯೋ:

ಕಳೆದ ಟಿ20 ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಭಾರತ: ಹೌದು, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 2022ರ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲೂ ಇದೇ ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆದ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಭಾರತ ಎದುರು 10 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಆದರೆ ಇದೀಗ ಎರಡು ವರ್ಷಗಳ ಬಳಿಕ ಈ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು 68 ರನ್ ಅಂತರದಲ್ಲಿ ಮಣಿಸಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮನೆಗೆ ಕಳಿಸುವಲ್ಲಿ ರೋಹಿತ್ ಶರ್ಮಾ ಪಡೆ ಯಶಸ್ವಿಯಾಗಿದೆ.

ಟಿ20 ವಿಶ್ವಕಪ್‌ನಲ್ಲಿ ಮುಂದುವರೆದ ವಿರಾಟ್ ಕೊಹ್ಲಿ ಫ್ಲಾಪ್‌ ಶೋ!

ದಶಕದ ಬಳಿಕ ಟಿ20 ವಿಶ್ವಕಪ್‌ ಫೈನಲ್ ಪ್ರವೇಶಿಸಿದ ಭಾರತ: ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಚಾಂಪಿಯನ್ ಟೀಂ ಇಂಡಿಯಾ, 2014ರಲ್ಲಿ ಕೊನೆಯ ಬಾರಿಗೆ ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ 2014ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಎದುರು ಮುಗ್ಗರಿಸುವ ಮೂಲಕ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತ್ತು. ಇದಾಗಿ ಬರೋಬ್ಬರಿ 10 ವರ್ಷಗಳ ಬಳಿಕ ಟೀಂ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ್ದು, ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಜೂನ್ 29ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ದಕ್ಷಿಣ ಆಫ್ರಿಕಾ ತಂಡವು ಟೂರ್ನಿಯಲ್ಲಿ ಭಾರತದಂತೆ ಅಜೇಯವಾಗಿಯೇ ಫೈನಲ್‌ಗೆ ಪ್ರವೇಶಿಸಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಏಯ್ಡನ್ ಮಾರ್ಕ್‌ರಮ್ ನೇತೃತ್ವದ ಹರಿಣಗಳ ಪಡೆ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕುವ ಕನಸು ಕಾಣುತ್ತಿದೆ. 

Latest Videos
Follow Us:
Download App:
  • android
  • ios