
ನವದೆಹಲಿ(ಮೇ.31): ನವದೀಪ್ ಸೈನಿ ಬೆಂಕಿಯಲ್ಲಿ ಅರಳಿದ ಹೂವು. ಯಾವುದೇ ಆರ್ಥಿಕ, ಸಾಮಾಜಿಕ ಹಾಗೂ ಗಾಡ್ ಫಾದರ್ ಇಲ್ಲದೇ ಟೀಂ ಇಂಡಿಯಾ ಪ್ರತಿನಿಧಿಸಬೇಕು ಎಂದು ಕನಸು ಕಾಣುವವರ ಪಾಲಿಗೆ ಸ್ಪೂರ್ತಿಯ ಚಿಲುಮೆ. ಹೀಗಿದ್ದೂ ಸದ್ಯ ನವದೀಪ್ ಸೈನಿ ಫಾರ್ಮ್ ಕೊರತೆಯನ್ನು ಎದುರಿಸುತ್ತಿದ್ದಾರೆ.
2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸೈನಿ ತಮ್ಮ ಕರಾರುವಕ್ಕಾದ ಯಾರ್ಕರ್ ಹಾಗೂ ವೇಗದ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. ವೃತ್ತಿ ಜೀವನದ ಆರಂಭದ ದಿನಗಳಲ್ಲೇ ಸೈನಿ ಟೀಂ ಇಂಡಿಯಾದ ಡೇಲ್ ಸ್ಟೇನ್ ಆಗಬಹುದು ಎಂದು ಹಲವು ಕ್ರಿಕೆಟ್ ಅಭಿಮಾನಿಗಳು ಊಹಿಸಿದ್ದರು. ಆದರೆ ಸದ್ಯ ಸೈನಿ ಪಾಲಿಗೆ ಯಾವುದೂ ಸರಿಯಿಲ್ಲ ಎನ್ನುವಂತಾಗಿದೆ.
ಆಸ್ಟ್ರೇಲಿಯಾ ಸರಣಿಯಲ್ಲಿ ವಿಕೆಟ್ ಪಡೆಯಲು ಪರದಾಡಿದ್ದ ನವದೀಪ್ ಸೈನಿ:
ನವದೀಪ್ ಸೈನಿ ಅಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆಸೀಸ್ ವಿರುದ್ದದ 4 ಪಂದ್ಯಗಳ ಪೈಕಿ ಎರಡು ಟೆಸ್ಟ್ ಪಂದ್ಯಗಳನ್ನಾಡಿದ್ದ ಸೈನಿ ಸಿಡ್ನಿಯಲ್ಲಿ ನಡೆದ ಪಾದಾರ್ಪಣೆ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇನ್ನು ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ಭಾರತ ಐತಿಹಾಸಿಕ ಗೆಲುವು ದಾಖಲಿಸಿತಾದರೂ, ಸೈನಿ ಒಂದೇ ಒಂದು ವಿಕೆಟ್ ಕಬಳಿಸಲು ಯಶಸ್ವಿಯಾಗಿರಲಿಲ್ಲ.
ಇನ್ನು ಆಸ್ಟ್ರೇಲಿಯಾ ವಿರುದ್ದ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ವೇಗಿ ಸೈನಿ ದಯಾನೀಯ ವೈಫಲ್ಯ ಅನುಭವಿಸಿದ್ದರು. ಮೊದಲ ಪಂದ್ಯದಲ್ಲಿ 10 ಓವರ್ ಬೌಲಿಂಗ್ ಮಾಡಿ 83 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದಿದ್ದರು. ಇನ್ನು ಎರಡನೇ ಏಕದಿನ ಪಂದ್ಯದಲ್ಲಿ ಕೇವಲ 7 ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ಪಡೆಯದೇ 10ರ ಎಕನಮಿಯಲ್ಲಿ 70 ರನ್ ನೀಡಿದ್ದರು. ಹೀಗಾಗಿ ಮೂರನೇ ಏಕದಿನ ಹಾಗೂ ಟಿ20 ಸರಣಿಯಿಂದ ಸೈನಿಯವರನ್ನು ತಂಡದಿಂದ ಕೈಬಿಡಲಾಗಿತ್ತು.
ಹಾರ್ಲೆ ಡೇವಿಡ್‌ಸನ್ ಬೈಕ್‌ನೊಂದಿಗೆ ಪೋಸ್ ಕೊಟ್ಟು ಟ್ರೋಲ್ ಆದ ನವದೀಪ್ ಸೈನಿ..!
ಇನ್ನು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಸೈನಿ 2 ಓವರ್ ಬೌಲಿಂಗ್ ಮಾಡಿ 27 ರನ್ ನೀಡಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ 69 ರನ್‌ಗಳ ಅಂತರದ ಹೀನಾಯ ಸೋಲು ಕಂಡಿತ್ತು.
ಕಡುಬಡತನದ ಹಿನ್ನೆಲೆಯಿಂದ ಬಂದ ನವದೀಪ್ ಸೈನಿ ದೇಸಿ ಕ್ರಿಕೆಟ್‌ನಲ್ಲಿ ತಮ್ಮ ಮಾರಕ ದಾಳಿಯ ಮೂಲಕ ಗಮನ ಸೆಳೆದು ಟೀಂ ಇಂಡಿಯಾಗೆ ಲಗ್ಗೆಯಿಟ್ಟಿದ್ದಾರೆ. ಇದುವರೆಗೂ ಸೈನಿ ಭಾರತ ಪರ 2 ಟೆಸ್ಟ್, 7 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟಾರೆ 3 ಮಾದರಿಯ ಕ್ರಿಕೆಟ್‌ನಿಂದ 23 ವಿಕೆಟ್ ಕಬಳಿಸಿದ್ದಾರೆ.
ಜುಲೈನಲ್ಲಿ ಭಾರತ ಕ್ರಿಕೆಟ್ ತಂಡವು ಸೀಮಿತ ಓವರ್‌ಗಳ ಸರಣಿಯನ್ನಾಡಲು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಲಂಕಾ ಪ್ರವಾಸಕ್ಕೆ ಸೈನಿ ಟೀಂ ಇಂಡಿಯಾ ಕೂಡಿಕೊಳ್ಳುವ ಸಾಧ್ಯತೆಯಿದೆ. ಇನ್ನು ಮುಂದೆಯಾದರೂ ಸೈನಿ ತಮ್ಮ ಫಾರ್ಮ್‌ಗೆ ಮರಳುತ್ತಾರೋ ಅಥವಾ ಟೀಂ ಇಂಡಿಯಾದಿಂದ ಮರೆಯಾಗಿ ಹೋಗುತ್ತಾರೋ ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.